ಐಪಿಎಲ್ 2020: ರಾಜಸ್ಥಾನ ವಿರುದ್ಧ ದೆಹಲಿಗೆ 13 ರನ್ ಗಳ ರೋಚಕ ಜಯ

ಐಪಿಎಲ್ 2020ಟೂರ್ನಿಯ 30ನೇ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ 13 ರನ್ ಗಳ ರೋಚಕ ಜಯ ಸಾಧಿಸಿದೆ.
ರಾಜಸ್ಥಾನ ವಿರುದ್ಧ ದೆಹಲಿಗೆ ಜಯ
ರಾಜಸ್ಥಾನ ವಿರುದ್ಧ ದೆಹಲಿಗೆ ಜಯ

ದುಬೈ: ಐಪಿಎಲ್ 2020ಟೂರ್ನಿಯ 30ನೇ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ 13 ರನ್ ಗಳ ರೋಚಕ ಜಯ ಸಾಧಿಸಿದೆ.

ದೆಹಲಿ ನೀಡಿದ್ದ 162ರನ್ ಗಳ ಗುರಿಯನ್ನು ಬೆನ್ನು ಹತ್ತಿದ ರಾಜಸ್ಥಾನ ರಾಯಲ್ಸ್ ತಂಡ ದೆಹಲಿ ಬೌಲರ್ ಗಳ ಪ್ರಭಾವಿ ಬೌಲಿಂಗ್ ದಾಳಿಗೆ ನಲುಗಿ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 148 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ 13 ರನ್ ಗಳ ಅಂತರದಲ್ಲಿ ಸೋಲೊಪ್ಪಿಕೊಂಡಿತು.

ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲ ಬ್ಯಾಟ್ ಮಾಡಿದ ಡೆಲ್ಲಿ ತಂಡ ಇನ್ನಿಂಗ್ಸ್ ನ ಮೊದಲ ಬಾಲಿನಲ್ಲೇ ಇನ್ ಫಾರ್ಮ್ ಆಟಗಾರ ಪೃಥ್ವಿ ಶಾ ಅವರ ಔಟ್ ಆದರು. ಆದರೆ ನಂತರ ಜೊತೆಯಾದ ನಾಯಕ ಶ್ರೇಯಸ್ ಐಯ್ಯರ್ ಮತ್ತು ಅನುಭವಿ ಆಟಗಾರ ಶಿಖರ್ ಧವನ್ ಅವರು, ಇಬ್ಬರು ಅರ್ಧಶತಕ ಸಿಡಿಸಿ  ತಂಡಕ್ಕೆ ನೆರವಾದರು. 33 ಎಸೆತಗಳಲ್ಲಿ ಎರಡು ಸಿಕ್ಸರ್ ಮತ್ತು ಆರು ಬೌಂಡರಿ ಸಮೇತ ಧವನ್ 27 ರನ್ ಸಿಡಿಸಿದರೆ, ಶ್ರೇಯಸ್ ಐಯ್ಯರ್ ಅವರು, 43 ಎಸೆತಗಳಲ್ಲಿ ಎರಡು ಸಿಕ್ಸರ್ ಮತ್ತು ಮೂರು ಬೌಂಡರಿ ಸಮೇತ 53 ರನ್ ಸಿಡಿಸಿದರು. ಈ ಮೂಲಕ ರಾಜಸ್ಥಾನ ತಂಡಕ್ಕೆ 163 ರನ್‍ಗಳ ಸವಾಲಿನ ಗುರಿ  ನೀಡಿದ್ದರು.

ದೆಹಲಿ ಕೊಟ್ಟ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಲು ರಾಜಸ್ಥಾನ್ ರಾಯಲ್ಸ್ ತಂಡ ಆರಂಭಿಕರಾಗಿ ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ ಅವರು ಕಣಕ್ಕಿಳಿದರು. ಆರಂಭದಲ್ಲೇ ಸ್ಫೋಟಕ ಆಟಕ್ಕೆ ಮುಂದಾದರು. ಆದರೆ ತಂಡ 37 ರನ್ ಗಳಿಸಿದ್ದಾಗ ಮೂರನೇ ಓವರಿನ ಕೊನೆಯ ಎಸೆತದಲ್ಲಿ ಅನ್ರಿಚ್ ನಾಟ್ರ್ಜೆ ಅವರಿಗೆ 9  ಬಾಲಿಗೆ 22 ರನ್ ಗಳಿಸಿ ಜೋಸ್ ಬಟ್ಲರ್ ಕ್ಲೀನ್ ಬೌಲ್ಡ್ ಆದರು. ನಂತರ ಬಂದ ನಾಯಕ ಸ್ಟೀವ್ ಸ್ಮಿತ್ ಅವರು ರವಿಚಂದ್ರನ್ ಅಶ್ವಿನ್ ಬೌಲಿಂಗ್‍ನಲ್ಲಿ ಕ್ಯಾಚ್ ನೀಡಿ ಹೊರನಡೆದರು. ನಂತರ ಜೊತೆಯಾದ ಸ್ಟೋಕ್ಸ್ ಮತ್ತು ಸ್ಯಾಮ್ಸನ್ ನಿಧಾನವಾಗಿ ಇನ್ನಿಂಗ್ಸ್ ಕಟ್ಟಿದರು.

ನಂತರ 35 ಬಾಲಿಗೆ 41 ರನ್‍ಗಳಿಸಿ  ಆಡುತ್ತಿದ್ದ ಬೆನ್ ಸ್ಟೋಕ್ಸ್ ಅವರು ತುಷಾರ್ ದೇಶಪಾಂಡೆ ಅವರಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಬಳಿಕ 18 ಬಾಲಿಗೆ 25 ರನ್‍ಗಳಿಸಿ ತಾಳ್ಮೆಯಿಂದ ಆಡುತ್ತಿದ್ದ ಸಂಜು ಸ್ಯಾಮ್ಸನ್ ಅವರು 11ನೇ ಓವರ್ 4ನೇ ಬಾಲಿನಲ್ಲಿ ಆಕ್ಸರ್ ಪಟೇಲ್ ಸ್ಪಿನ್ ಮೋಡಿಗೆ ಕ್ಲೀನ್ ಬೌಲ್ಡ್ ಆದರು. ಇಲ್ಲದ ರನ್ ಕದಿಯಲು  ಹೋದ ರಿಯಾನ್ ಪರಾಗ್ ಅವರು ರನೌಟ್ ಆದರು. ನಂತರ 17ನೇ ಓವರಿನ ಮೂರನೇ ಬಾಲಿನಲ್ಲಿ 27 ಬಾಲಿಗೆ 32 ರನ್ ಸಿಡಿಸಿ ಆಡುತ್ತಿದ್ದ ರಾಬಿನ್ ಉತ್ತಪ್ಪ ಅವರು ನಾಟ್ರ್ಜೆ ಅವರ ಯಾರ್ಕರ್ ಗೆ ಬೌಲ್ಡ್ ಆದರು. ಸ್ಫೋಟಕ ಆಟಗಾರ ಜೋಫ್ರಾ ಆರ್ಚರ್ ಅವರು ಇಂದು ರಾಜಸ್ಥಾನ್ ರಾಯಲ್ಸ್ ಪರವಾಗಿ ಉತ್ತಮ  ಪ್ರದರ್ಶನ ನೀಡಲಿಲ್ಲ ನಾಲ್ಕು ಬಾಲಿಗೆ ಕೇವಲ ಒಂದು ರನ್ ಸಿಡಿಸಿ ಔಟ್ ಆದರು.

ಅಂತಿಮವಾಗಿ ರಾಜಸ್ಥಾನ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 148 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ 13 ರನ್ ಗಳ ಅಂತರದಲ್ಲಿ ದೆಹಲಿಗೆ ಶರಣಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com