ಇನ್‌ಸ್ಟಾಗ್ರಾಮ್‌ನಲ್ಲಿಯೂ ವಿರಾಟ್ ಕೊಹ್ಲಿಯೇ ಭಾರತದ ನಂ. 1 ಸೆಲಿಬ್ರಿಟಿ

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ಮಾಡುವ ಮೂಲಕ ತಮ್ಮದೇ ಆದ ಛಾಪು ಮೂಡಿಸಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿಯೂ ವಿಶಿಷ್ಟ ಸಾಧನೆ ಮಾಡಿದ್ದಾರೆ.

Published: 18th February 2020 02:31 PM  |   Last Updated: 18th February 2020 02:31 PM   |  A+A-


virat1

ವಿರಾಟ್ ಕೊಹ್ಲಿ

Posted By : Lingaraj Badiger
Source : UNI

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ಮಾಡುವ ಮೂಲಕ ತಮ್ಮದೇ ಆದ ಛಾಪು ಮೂಡಿಸಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿಯೂ ವಿಶಿಷ್ಟ ಸಾಧನೆ ಮಾಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ 50 ದಶಲಕ್ಷ ಹಿಂಬಾಲಕರನ್ನು ಹೊಂದಿರುವ ಭಾರತದ ಮೊದಲ ವ್ಯಕ್ತಿ ಎಂಬ ಹಿರಿಮೆಗೆ ಟೀಮ್ ಇಂಡಿಯಾ ನಾಯಕ ಭಾಜನರಾಗಿದ್ದಾರೆ. ಆ ಮೂಲಕ ಪ್ರಿಯಾಂಕ ಚೋಪ್ರಾ ಸೇರಿದಂತೆ ಹಲವು ಬಾಲಿವುಡ್ ಸ್ಟಾರ್‌ಗಳನ್ನು ಹಿಂದಿಕ್ಕಿದ್ದಾರೆ.

ಪ್ರಸ್ತುತ ವಿಶ್ವದ ಹೊಸ ತಲೆಮಾರಿನ ಕ್ರಿಕೆಟಿಗರಿಗೆ ವಿರಾಟ್ ಕೊಹ್ಲಿ ಮಾದರಿಯಾಗಿ ರೂಪಗೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 480 ಮಂದಿಯನ್ನು ಹಿಂಬಾಲಿಸುವ ವಿರಾಟ್, ಒಟ್ಟು 930 ಪೋಸ್ಟ್‌‌ಗಳನ್ನು ಹಂಚಿಕೊಂಡಿದ್ದಾರೆ. ಜತೆಗೆ, ಭಾರತದಲ್ಲಿಯೇ ಅತ್ಯಂತ ಮೌಲ್ಯಯುತ ಸೆಲಿಬ್ರಿಟಿ ಪಟ್ಟಿಯಲ್ಲೂ ಮುಂಚೂಣಿಯಲ್ಲಿದ್ದಾರೆ. 2019ರಲ್ಲಿ ಅವರು  237.5 ದಶಲಕ್ಷ ಡಾಲರ್ ಮೌಲ್ಯವನ್ನು ಹೊಂದಿದ್ದಾರೆ.

49.9 ದಶಲಕ್ಷ ಹಿಂಬಾಲಕರನ್ನು ಹೊಂದಿರುವ ಬಾಲಿವುಡ್ ಹಾಗೂ ಹಾಲಿವುಡ್ ಸ್ಟಾರ್ ನಟಿ ಪ್ರಿಯಾಂಕ ಚೋಪ್ರಾ ಎರಡನೇ ಸ್ಥಾನ ಹಾಗೂ 44.1 ದಶಲಕ್ಷ ಹಿಂಬಾಲಕರನ್ನು  ಹೊಂದಿರುವ ದೀಪಿಕಾ ಪಡುಕೋಣೆ ಮೂರನೇ ಸ್ಥಾಾನದಲ್ಲಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 34.5 ದಶಲಕ್ಷಕ್ಕೂ ಹೆಚ್ಚು ಹಿಂಬಾಲಕರನ್ನು ಹೊಂದಿದ್ದಾರೆ.

ಒಟ್ಟಾರೆ, ವಿಶ್ವದಲ್ಲೇ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವವರ ಪಟ್ಟಿಯಲ್ಲಿ ಶ್ರೇಷ್ಠ ಫುಟ್ಬಾಲ್ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅಗ್ರ ಸ್ಥಾನದಲ್ಲಿದ್ದಾರೆ. ಪೋರ್ಚುಗಲ್ ಹಾಗೂ ಜುವೆಂಟಾಸ್ ತಂಡದ ಆಟಗಾರನನ್ನು 200 ದಶಲಕ್ಷಕ್ಕೂ ಹೆಚ್ಚು ಮಂದಿ ಇನ್‌ಸ್ಟಾಾಗ್ರಾಮ್‌ನಲ್ಲಿ ಹಿಂಬಾಲಿಸುತ್ತಿದ್ದಾರೆ.  ಖ್ಯಾತ ಸಂಗೀತಗಾರ ಎರಿಯನಾ ಗ್ರಾಂಡೆ 175 ದಶಲಕ್ಷ ಹಾಗೂ ಹಾಲಿವುಡ್ ನಟ ಡ್ವೇನ್ ಜಾನ್ಸನ್ 172 ದಶಲಕ್ಷ ಹಿಂಬಾಲಕರೊಂದಿಗೆ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ.

ವಿರಾಟ್ ಕೊಹ್ಲಿ ಸದ್ಯ ನ್ಯೂಜಿಲೆಂಡ್ ಪ್ರವಾಸದಲ್ಲಿದ್ದಾರೆ. ಕಿವೀಸ್ ವಿರುದ್ಧ ಮುಂಬರುವ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಈಗಾಗಲೇ ಟಿ-20 ಸರಣಿಯನ್ನು ಟೀಮ್ ಇಂಡಿಯಾ 5-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿತ್ತು. ಬಳಿಕ, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 3-0 ಅಂತರದಲ್ಲಿ  ವೈಟ್‌ವಾಶ್ ಮಾಡಿ ಮುಖಭಂಗ ಅನುಭವಿಸಿತ್ತು.

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp