ಐಪಿಎಲ್ 2021: ಈಗ ಟೂರ್ನಿಯಿಂದ ಇಬ್ಬರು ಅಂಪೈರ್​ಗಳು ಔಟ್!

ದೇಶದಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿನ ಆರ್ಭಟ ಮುಂದುವರೆದಿರುವಂತೆಯೇ ಹಾಲಿ ಐಪಿಎಲ್ ಟೂರ್ನಿಯಲ್ಲಿ ಆಡುತ್ತಿದ್ದ ಕೆಲ ವಿದೇಶಿ ಆಟಗಾರರು ಟೂರ್ನಿಯಿಂದ ಹೊರ ಬಿದ್ದ ಬೆನ್ನಲ್ಲೇ ಇದೀಗ ಇಬ್ಬರು ಅಂಪೈರ್ ಗಳೂ ಕೂಡ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಐಪಿಎಲ್ ಅಂಪೈರ್ ಗಳು
ಐಪಿಎಲ್ ಅಂಪೈರ್ ಗಳು

ನವದೆಹಲಿ: ದೇಶದಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿನ ಆರ್ಭಟ ಮುಂದುವರೆದಿರುವಂತೆಯೇ ಹಾಲಿ ಐಪಿಎಲ್ ಟೂರ್ನಿಯಲ್ಲಿ ಆಡುತ್ತಿದ್ದ ಕೆಲ ವಿದೇಶಿ ಆಟಗಾರರು ಟೂರ್ನಿಯಿಂದ ಹೊರ ಬಿದ್ದ ಬೆನ್ನಲ್ಲೇ ಇದೀಗ ಇಬ್ಬರು ಅಂಪೈರ್ ಗಳೂ ಕೂಡ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಹೌದು...ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಅಂಪೈರ್​ಗಳಾದ ನಿತಿನ್ ಮೆನನ್ ಮತ್ತು ಪೌಲ್ ರೀಫಲ್ ಅವರು ವೈಯುಕ್ತಿಕ ಕಾರಣ ನೀಡಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಮಧ್ಯ ಪ್ರದೇಶದ ಇಂದೋರ್ ನಗರದ ನಿವಾಸಿ ನಿತಿನ್ ಮೆನನ್ ಅವರ ತಾಯಿ ಮತ್ತು ಹೆಂಡತಿ ಇಬ್ಬರಿಗೂ  ಕೋವಿಡ್ ಪಾಸಿಟಿವ್ ಬಂದಿದ್ದು, ನಿತಿನ್ ಮೆನನ್ ಅವರಿಗೆ ಒಂದು ಮಗುವೂ ಇದೆ. ಈ ಕಷ್ಟಕರ ಸಂದರ್ಭದಲ್ಲಿ ಕುಟುಂಬದ ಜೊತೆ ತಾನು ಇರಬೇಕಾದ ಅವಶ್ಯಕತೆ ಬಹಳ ಇದೆ ಎಂದು ಹೇಳಿ ನಿತಿನ್ ಮೆನನ್ ಅವರು ತಮ್ಮ ಮನೆಗೆ ತೆರಳಿದ್ದಾರೆ.

ಇನ್ನು ಭಾರತದಿಂದ ಬರುವ ವಿಮಾನಗಳಿಗೆ ಆಸ್ಟ್ರೇಲಿಯಾ ನಿರ್ಬಂಧ ಹಾಕಿರುವ ಹಿನ್ನೆಲೆಯಲ್ಲಿ ಪೌಲ್ ರೀಫಲ್ ಅವರು ಕೆಲ ದಿನಗಳ ಹಿಂದೆಯೇ ಭಾರತವನ್ನು ತೊರೆದು ಆಸ್ಟ್ರೇಲಿಯಾಗೆ ಹೋಗಿದ್ದಾರೆ. ಭಾರತದಲ್ಲಿ ಕೊರೋನಾ ಹೆಚ್ಚಿರುವುದರಿಂದ ಇಲ್ಲಿಂದ ಆಗಮಿಸುವ ಜನರನ್ನು ಒಳಗೆ ಸೇರಿಸಿಕೊಳ್ಳದಿರಲು  ಆಸ್ಟ್ರೇಲಿಯಾ ನಿರ್ಧರಿಸಿದೆ. ಅಂತೆಯೇ, ಮೇ 15ರವರೆಗೆ ಭಾರತದ ವಿಮಾನಗಳನ್ನ ಆಸ್ಟ್ರೇಲಿಯಾ ನಿಷೇಧಿಸಿದೆ. ಹೀಗಾಗಿ, ಪೌಲ್ ರೀಫಲ್ ಅವರು ಭಾರತ ತೊರೆದಿದ್ದಾರೆನ್ನಲಾಗಿದೆ.

ನಿತಿನ್ ಮೆನನ್ ಮತ್ತು ಪೌಲ್ ರೀಫಲ್ ಇಬ್ಬರೂ ಐಸಿಸಿಯ ಉನ್ನತ ಮಟ್ಟದ ಅಂಪೈರ್​ಗಳ ಪಟ್ಟಿಯಲ್ಲಿದ್ದಾರೆ. ಇನ್ನು ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಅಂಪೈರಿಂಗ್​ಗಾಗಿ ಬಿಸಿಸಿಐ ಮೊದಲೇ ಬ್ಯಾಕಪ್ ಮಾಡಿಟ್ಟುಕೊಂಡಿತ್ತು. ಸ್ಥಳೀಯ ಅಂಪೈರ್​ಗಳನ್ನು ತುರ್ತು ಕರೆಗೆ ಸಜ್ಜಾಗಿರುವಂತೆ ಸೂಚಿಸಲಾಗಿತ್ತು.  ಅದರಂತೆ, ಇದೀಗ ನಿತಿನ್ ಮೆನನ್ ಮತ್ತು ಪೌಲ್ ರೀಫಲ್ ಅಂಪೈರಿಂಗ್ ಮಾಡಲು ನಿಗದಿಯಾಗಿರುವ ಪಂದ್ಯಗಳಿಗೆ ಈಗ ಬೇರೆ ಅಂಪೈರ್​ಗಳನ್ನು ಬಿಸಿಸಿಐ ನಿಯೋಜಿಸಿದೆ.

ಈ ಹಿಂದೆ ಆಸ್ಟ್ರೇಲಿಯಾದ ಆಟಗಾರರಾದ ಆಂಡ್ರ್ಯೂ ಟೈ, ಆಡಂ ಜಂಪಾ, ಕೇನ್ ರಿಚರ್ಡ್ಸನ್, ಇಂಗ್ಲೆಂಡ್​ನ ಲಿಯಾಮ್ ಲಿವಿಂಗ್ ಸ್ಟೋನ್ ಅವರು ಐಪಿಎಲ್ ತೊರೆದು ತಮ್ಮ ದೇಶಗಳಿಗೆ ಮರಳಿದ್ದಾರೆ. ರವಿಚಂದ್ರನ್ ಅಶ್ವಿನ್ ಅವರೂ ಕೂಡ ಕೋವಿಡ್ ಸಂಕಷ್ಟದಲ್ಲಿರುವ ತಮ್ಮ ಕುಟುಂಬದ ಜೊತೆ ಇರಲು ನಿರ್ಧರಿಸಿ  ಐಪಿಎಲ್​ನಿಂದ ಹೊರಬಿದ್ದಿದ್ದಾರೆ.

ಭಾರತದಲ್ಲಿ ಕೊರೋನಾ ಪ್ರಕರಣಗಳು ವಿಪರೀತ ಏರಿಕೆಯಾಗುತ್ತಿದ್ದು, ಐಪಿಎಲ್ ಟೂರ್ನಿಯನ್ನೇ ಸ್ಥಗಿತಗೊಳಿಸಬೇಕೆಂಬ ಸಲಹೆಗಳು ಕೇಳಿಬರುತ್ತಿವೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com