ಆಫ್ರಿಕಾ ನೆಲದಲ್ಲಿ ನಾಲ್ಕನೇ ಜಯ, ಸೆಂಚುರಿಯನ್ ಮೈದಾನದಲ್ಲಿ ನೀಗಿದ ಗೆಲುವಿನ ಬರ

ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಐತಿಹಾಸಿಕ ಜಯ ಗಳಿಸಿರುವ ಭಾರತ ತಂಡ ಆ ಮೂಲಕ ಸೆಂಚುರಿಯನ್ ಕ್ರೀಡಾಂಗಣದಲ್ಲಿ ತನ್ನ ಗೆಲುವಿನ ಬರ ನೀಗಿಸಿಕೊಂಡಿದೆ.
ಭಾರತಕ್ಕೆ  ಜಯ
ಭಾರತಕ್ಕೆ ಜಯ

ಸೆಂಚುರಿಯನ್: ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಐತಿಹಾಸಿಕ ಜಯ ಗಳಿಸಿರುವ ಭಾರತ ತಂಡ ಆ ಮೂಲಕ ಸೆಂಚುರಿಯನ್ ಕ್ರೀಡಾಂಗಣದಲ್ಲಿ ತನ್ನ ಗೆಲುವಿನ ಬರ ನೀಗಿಸಿಕೊಂಡಿದೆ.

ಹೌದು.. ದಕ್ಷಿಣ ಆಫ್ರಿಕಾ ವಿರುದ್ಧ 113 ರನ್ ಗಳ ಭರ್ಜರಿ ಜಯ ಸಾಧಿಸಿದ ಭಾರತ ತಂಡ ಇದರೊಂದಿಗೆ ಸೆಂಚುರಿಯನ್ ಕ್ರೀಡಾಂಗಣದಲ್ಲಿ ತಾನು ಎದುರಿಸುತ್ತಿದ್ದ ಗೆಲುವಿನ ಬರವನ್ನು ನೀಗಿಸಿಕೊಂಡಂತಾಗಿದೆ. ಆಫ್ರಿಕಾ ನೆಲದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಈ ವರೆಗೂ 20 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ದಕ್ಷಿಣ ಆಫ್ರಿಕಾ ತಂಡ 10 ಪಂದ್ಯಗಳಲ್ಲಿ ಗೆದ್ದಿದ್ದು, ಭಾರತ 3 ಪಂದ್ಯಗಳಲ್ಲಿ ಮಾತ್ರ ಗೆದ್ದಿದೆ. ಪ್ರಮುಖವಾಗಿ ಸೆಂಚುರಿಯನ್ ನಲ್ಲಿ ಒಮ್ಮೆಯೂ ಭಾರತ ಟೆಸ್ಟ್ ಪಂದ್ಯ ಗೆದ್ದಿರಲಿಲ್ಲ. 

ಹೀಗಾಗಿ ಈ ಪಂದ್ಯದ ಗೆಲುವು ಭಾರತಕ್ಕೆ ಐತಿಹಾಸಿಕ ಗೆಲುವಾಗಿದ್ದು, ಆಫ್ರಿಕಾ ನೆಲದಲ್ಲಿ ಭಾರತಕ್ಕೆ ಇದು ನಾಲ್ಕನೇ ಜಯವಾಗಿದೆ. ಈ ಹಿಂದೆ ಭಾರತ ತಂಡ ಆಫ್ರಿಕಾದಲ್ಲಿ ಟೆಸ್ಟ್ ಪಂದ್ಯದಲ್ಲಿ ಮೊದಲ ಗೆಲುವು ಸಾಧಿಸಿದ್ದು, 2006/07ರಲ್ಲಿ ಜೋಹಾನ್ಸ್ ಬರ್ಗ್ ನಲ್ಲಿ. ಆ ಪಂದ್ಯದಲ್ಲಿ ಭಾರತ 123 ರನ್ ಗಳ ಅಂತರದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಬಗ್ಗುಬಡಿತ್ತು. ಬಳಿಕ 2010/11ರಲ್ಲಿ ಡರ್ಬನ್ ನಲ್ಲಿ ನಡೆದ ಪಂದ್ಯದಲ್ಲಿ ಆಫ್ರಿಕಾ ತಂಡವನ್ನು 87ರನ್ ಗಳಿಂದ ಮಣಿಸಿತ್ತು. ಇದು ಆಫ್ರಿಕಾ ನೆಲದಲ್ಲಿ ಭಾರತಕ್ಕೆ ಸಂದ 2ನೇ ಜಯವಾಗಿದೆ. 

ಬಳಿಕ 2017/18ರಲ್ಲಿ ಜೋಹಾನ್ಸ್ ಬರ್ಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ 63 ರನ್ ಗಳ ಅಂತರದಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿತ್ತು. ಇದು ಭಾರತಕ್ಕೆ ಸಂದ 3ನೇ ಗೆಲುವಾಗಿತ್ತು. ಬಳಿಕ ಇಂದು ಸೆಂಚುರಿಯನ್ ಕ್ರೀಡಾಂಗಣದಲ್ಲಿ 113 ರನ್ ಗಳಿಂದ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದೆ. ಇದು ಭಾರತಕ್ಕೆ ಸಿಕ್ಕ 4ನೇ ಮತ್ತು ಸೆಂಚುರಿಯನ್ ಕ್ರೀಡಾಂಗಣದಲ್ಲಿ ದೊರೆತ ಮೊದಲ ಗೆಲುವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com