ಐಪಿಎಲ್ 2021: ಸಿಎಸ್ ಕೆ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ ಏಳು ವಿಕೆಟ್ ಅಂತರದ ಭರ್ಜರಿ ಜಯ

ಶನಿವಾರ ನಡೆದ ಐಪಿಎಲ್ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಏಳು ವಿಕೆಟ್ ಅಂತರದ ಭರ್ಜರಿ ಜಯ ಗಳಿಸಿದೆ.
ರಾಜಸ್ಥಾನ ರಾಯಲ್ಸ್ ತಂಡದ ಆಟಗಾರರು
ರಾಜಸ್ಥಾನ ರಾಯಲ್ಸ್ ತಂಡದ ಆಟಗಾರರು
Updated on

ಅಬುದಾಬಿ: ಶನಿವಾರ ನಡೆದ ಐಪಿಎಲ್ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಏಳು ವಿಕೆಟ್ ಅಂತರದ ಭರ್ಜರಿ ಜಯ ಗಳಿಸಿದೆ. ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್ ಹಾಗೂ ಶಿವದುಬೆ ಅವರ ಆಕರ್ಷಕ ಅರ್ಧ ಶತಕದ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡ ಗೆಲುವು ಸಾಧಿಸಿ, ಪ್ಲೇ- ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. 

ಮೊದಲು ಬ್ಯಾಟ್ ಮಾಡಿದ ಸಿಎಸ್ ಕೆ 20 ಓವರ್ ಗಳಲ್ಲಿ 4 ವಿಕೆಟ್ ಗೆ 189 ರನ್ ಕಲೆ ಹಾಕಿತು. ಗುರಿಯನ್ನು ಹಿಂಬಾಲಿಸಿದ ಆರ್ ಆರ್ 17.3 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 190 ರನ್ ಸೇರಿಸಿತು. ರಾಜಸ್ಥಾನ ಗೆಲುವಿನಲ್ಲಿ ಮಿಂಚಿದ್ದು ಯುವ ಆಟಗಾರ ಯಶಸ್ವಿ ಜೈಸ್ವಾಲ್ ಹಾಗೂ ಶಿವಂ ದುಬೆ. ಈ ಇಬ್ಬರು ಆಟಗಾರರು ಸಮಯೋಚಿತ ಆಟದ ಪ್ರದರ್ಶನ ನೀಡಿದ ಬಲದಿಂದ ರಾಜಸ್ಥಾನ ಅರ್ಹ ಗೆಲುವು ದಾಖಲಿಸಿತು.

ಆರಂಭಿಕರಾದ ಎವಿನ್ ಲೂಯಿಸ್ ಹಾಗೂ ಜೈಸ್ವಾಲ್ ಜೋಡಿ ಸ್ಫೋಟಕ ಆರಂಭ ನೀಡಿತು. 5.2 ಓವರ್ ಗಳಲ್ಲಿ ಈ ಜೋಡಿ 77 ರನ್ ಸೇರಿಸಿತು. ಲೂಯಿಸ್ 27 ರನ್ ಬಾರಿಸಿ ಔಟ್ ಆದರು. ಯುವ ಆಟಗಾರ ಜೈಸ್ವಾಲ್ ಬಿರುಸಿನ ಬ್ಯಾಟಿಂಗ್ ನಡೆಸಿದರು. ಇವರು 21 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ಸಹಾಯದಿಂದ 50 ರನ್ ಸಿಡಿಸಿದರು. ಮಧ್ಯಮ ಕ್ರಮಾಂಕದಲ್ಲಿ ನಾಯಕ ಸಂಜು 28 ರನ್ ಸಿಡಿಸಿದರು. ಶಿವಂ ದುಬೆ ಸಹ ತನ್ನ ನೈಜ ಆಟವನ್ನು ಆಡಿ ಗಮನ ಸೆಳೆದರು. ಇವರು 64 ರನ್ ಸೇರಿಸಿ ಅಜೇಯರಾಗುಳಿದರು. 

ಚೆನ್ನೈ ತಂಡದ ಪರ ಶಾರ್ದೂಲ್ ಠಾಕೂರ್ ಎರಡು ವಿಕೆಟ್ ಕಬಳಿಸಿದರು. ಭರ್ಜರಿ ಲಯದಲ್ಲಿರುವ ಯುವ ಆಟಗಾರ ರುತುರಾಜ್ ಗಾಯಕ್ವಾಡ್ ತಮ್ಮ ಬ್ಯಾಟಿಂಗ್ ಕ್ಷಮತೆಯನ್ನು ಮತ್ತೊಮ್ಮೆ ತೋರಿಸಿದರು. ಸ್ಪಿನ್ ಹಾಗೂ ವೇಗದ ಬೌಲರ್ ಗಳನ್ನು ಲೆಕ್ಕಿಸದೆ ಬ್ಯಾಟ್ ಮಾಡಿದ ಇವರು ರನ್ ಮಹಲ್ ಕಟ್ಟಿದರು. ಇವರ ಅಮೋಘ ಇನ್ನಿಂಗ್ಸ್ ನಲ್ಲಿ 9 ಬೌಂಡರಿ ಸೇರಿದ್ದು, ಐದು ಬಾರಿ ಚೆಂಡು ಪ್ರೇಕ್ಷಕರ ಗ್ಯಾಲರಿಯ ದರ್ಶನ ಮಾಡಿದೆ. ಪಂದ್ಯದ ಕೊನೆಯ ಎಸೆತದಲ್ಲಿ ಸೊಗಸಾದ ಸಿಕ್ಸರ್ ಬಾರಿಸುವ ಮೂಲಕ ರುತುರಾಜ್ ಶತಕ ಬಾರಿಸಿದರು. 60 ಎಸೆತಗಳಲ್ಲಿ ಗಾಯಕ್ವಾಡ್ ಅಜೇಯ 101 ರನ್ ಸಿಡಿಸಿದರು.

ಆರಂಭಿಕರಾದ ರುತುರಾಜ್ ಹಾಗೂ ಫಾಫ್ ಡುಪ್ಲೇಸಿಸ್ ಜೋಡಿ 6.5 ಓವರ್ ಗಳಲ್ಲಿ 47 ರನ್ ಸೇರಿಸಿತು. ಸುರೇಶ್ ರೈನಾ ಮೂರು ರನ್ ಗಳಿಸಿ ಔಟ್ ಆದರು. ಮೂರನೇ ವಿಕೆಟ್ ಗೆ ಗಾಯಕ್ವಾಡ್ ಮತ್ತು ಮೋಯಿನ್ ಅಲಿ (21) ಜೋಡಿ 57 ರನ್ ಸೇರಿಸಿತು. ಮೋಯಿನ್ ಅಲಿ ತೆವಾಟಿಯಾ ಎಸೆತದಲ್ಲಿ ಔಟ್ ಆದರು. ಅಂಬಟಿ ರಾಯುಡು ಬಂದು ಹೋಗುವ ಸಂಪ್ರದಾಯ ಮುಗಿಸಿದರು. ಆಲ್ ರೌಂಡರ್ ರವೀಂದ್ರ ಜಡೇಜಾ ಕೇವಲ 15 ಎಸೆತಗಳಲ್ಲಿ 32 ರನ್ ಕಲೆ ಹಾಕಿದರು. ರಾಜಸ್ಥಾನ ಪರ ರಾಹುಲ್ ತೆವಾಟಿಯಾ ಮೂರು ವಿಕೆಟ್ ಕಬಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com