ಟಿ20 ವಿಶ್ವಕಪ್: ಸ್ಕಾಟ್ಲೆಂಡ್ ತಂಡದ ಜೆರ್ಸಿ ವಿನ್ಯಾಸ ಮಾಡಿದ 12 ವರ್ಷದ ಬಾಲಕಿ 

ಹಾಲಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕ್ರಿಕೆಟ್ ಶಿಶು ಎಂದೇ ಕರೆಯಲ್ಪಡುವ ಸ್ಕಾಟ್ಲೆಂಡ್ ತಂಡ ಬಾಂಗ್ಲಾದೇಶವನ್ನು ಮಣಿಸಿ ಅಚ್ಚರಿ ಮೂಡಿಸಿದೆ. ಆದರೆ ಇನ್ನೂ ಆಚ್ಚರಿ ಎಂದರೆ ಈ ತಂಡದ ಆಟಗಾರರು ಧರಿಸುತ್ತಿರುವ ಜೆರ್ಸಿಯ ವಿನ್ಯಾಸ ಮಾಡಿದ್ದು 12 ವರ್ಷದ ಬಾಲಕಿ...!
ತಾನೇ ವಿನ್ಯಾಸಗೊಳಿಸಿರುವ ಜೆರ್ಸಿಯೊಂದಿಗೆ ರೆಬೆಕ್ಕಾ
ತಾನೇ ವಿನ್ಯಾಸಗೊಳಿಸಿರುವ ಜೆರ್ಸಿಯೊಂದಿಗೆ ರೆಬೆಕ್ಕಾ

ದುಬೈ: ಹಾಲಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕ್ರಿಕೆಟ್ ಶಿಶು ಎಂದೇ ಕರೆಯಲ್ಪಡುವ ಸ್ಕಾಟ್ಲೆಂಡ್ ತಂಡ ಬಾಂಗ್ಲಾದೇಶವನ್ನು ಮಣಿಸಿ ಅಚ್ಚರಿ ಮೂಡಿಸಿದೆ. ಆದರೆ ಇನ್ನೂ ಆಚ್ಚರಿ ಎಂದರೆ ಈ ತಂಡದ ಆಟಗಾರರು ಧರಿಸುತ್ತಿರುವ ಜೆರ್ಸಿಯ ವಿನ್ಯಾಸ ಮಾಡಿದ್ದು 12 ವರ್ಷದ ಬಾಲಕಿ...!

ಅಚ್ಚರಿಯಾದರೂ ಇದು ಸತ್ಯ. ಸ್ಕಾಟ್ಲೆಂಡ್ ತಂಡದ ನೇರಳೆ ಮತ್ತು ಕಡು ನೀಲಿ ಬಣ್ಣದ ಜೆರ್ಸಿಯನ್ನು ವಿನ್ಯಾಸ ಮಾಡಿದ್ದು 12 ವರ್ಷದ ರೆಬೆಕ್ಕಾ ಡೌನಿ ಎಂಬ ಯುವ ವಸ್ತ್ರವಿನ್ಯಾಸಕಿ. ಈ ಹಿಂದೆ ಸ್ಕಾಟ್ಲೆಂಡ್ ದೇಶದ ಮಕ್ಕಳಿಗೆ ರಾಷ್ಟ್ರೀಯ ಕ್ರಿಕೆಟ್ ತಂಡದ ಹೊಸ ಜೆರ್ಸಿ ವಿನ್ಯಾಸಗೊಳಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಸುಮಾರು 200ಕ್ಕೂ ಅಧಿಕ ವಿನ್ಯಾಸಗಳು ಅಂತಿಮಗೊಂಡಿದ್ದವು. ಈ ಪೈಕಿ ರೆಬೆಕಾ ಡೋವ್ನಿ ಎಂಬ ಹೆಸರಿನ 12ರ ಬಾಲಕಿ ಸಿದ್ಧಪಡಿಸಿದ್ದ ಜೆರ್ಸಿ ವಿನ್ಯಾಸ ಸ್ಪರ್ಧೆ ಜಯಿಸಿತ್ತು. 

ಸ್ಕಾಟ್ಲೆಂಡ್ ರಾಷ್ಟ್ರೀಯ ಲಾಂಛನವಾದ ತಿಸಲ್ ಹೂವಿನ ಬಣ್ಣದಿಂದ ಪ್ರೇರಿತವಾಗಿ ಈ ಜೆರ್ಸಿಯನ್ನು ವಿನ್ಯಾಸಗೊಳಿಸಿರುವುದೇ ಈ ಜೆರ್ಸಿಯ ವಿಶೇಷ.

ಹ್ಯಾಡಿಂಗ್ಟನ್ ಪಟ್ಟಣದ ನಿವಾಸಿಯಾದ ರೆಬೆಕ್ಕಾ ಇದೀಗ ತಾನು ವಿನ್ಯಾಸಗೊಳಿಸಿದ ಜೆರ್ಸಿಯನ್ನು ತನ್ನ ರಾಷ್ಟ್ರೀಯ ತಂಡ ತೊಡುತ್ತಿರುವುದಕ್ಕೆ ಅತ್ಯಂತ ಖುಷಿಯಾಗಿದ್ದಾಳೆ. ಅಲ್ಲದೆ ಇದೇ ಖುಷಿಯಲ್ಲಿದ್ದ ಸ್ಕಾಟ್ಲೆಂಡ್ ಆಟಗಾರರೂ ಕೂಡ ರೆಬೆಕ್ಕಾಗೆ ಕ್ರಿಕೆಟ್ ಕಿಟ್ ಅನ್ನು ಉಡುಗೊರೆಯಾಗಿ ನೀಡುವ ಮೂಲಕ ಧನ್ಯವಾದ ಅರ್ಪಿಸಿದ್ದಾರೆ. ಅಲ್ಲದೆ ರೆಬೆಕ್ಕಾ ಮತ್ತು ಆಕೆಯ ಕುಟುಂಬಸ್ಥರು ಎಡಿನ್‌ಬರ್ಗ್‌ನಲ್ಲಿ ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೆ ವಿಶೇಷ ಅತಿಥಿಗಳಾಗಿದ್ದರು, ಅಲ್ಲಿ ಅವರು ಆಟಗಾರರನ್ನು ಭೇಟಿಯಾದರು.

ಬಳಿಕ ಜೆರ್ಸಿ ವಿನ್ಯಾಸದ ಬಗ್ಗೆ ಮಾತನಾಡಿದ ಸ್ಕಾಟ್ಲೆಂಡ್ ಕ್ರಿಕೆಟ್ ತಂಡದ ನಾಯಕ ಕೈಲ್ ಕೊಯೆಟ್ಜರ್, ತಂಡವು ವಿನ್ಯಾಸದ ಬಗ್ಗೆ ನಿಜವಾಗಿಯೂ ಹೆಮ್ಮೆಪಡುತ್ತದೆ. ರೆಬೆಕ್ಕಾ ಮತ್ತು ಅವಳ ಕುಟುಂಬವನ್ನು ಇತ್ತೀಚೆಗೆ ಭೇಟಿಯಾಗಿದ್ದು ಮತ್ತು ಅವರು ಹೊಸ ಶರ್ಟ್ ಧರಿಸಿದ್ದನ್ನು ನೋಡಿ ತುಂಬಾ ಸಂತೋಷವಾಯಿತು. ವಿನ್ಯಾಸದ ಬಗ್ಗೆ ತಂಡವು ನಿಜವಾಗಿಯೂ ಹೆಮ್ಮೆಪಡುತ್ತದೆ. ಅಭಿಮಾನಿಗಳು ಹೊಸ ವಿನ್ಯಾಸವನ್ನು ಆನಂದಿಸುತ್ತಾರೆ ಮತ್ತು ಹೆಮ್ಮೆಯಿಂದ ಧರಿಸುತ್ತಾರೆ ಎಂದು ನಾವು ಭಾವಿಸುತ್ತೇವೆ ಏಕೆಂದರೆ ಅವರು ಮನೆಯಿಂದ ನಮ್ಮನ್ನು ಬೆಂಬಲಿಸುತ್ತಾರೆ ಎಂದು ಅವರು ಹೇಳಿದರು.

ಬಳಿಕ ಮಾತನಾಡಿದ ರೆಬೆಕ್ಕಾ, 'ನಾನು ಸ್ಪರ್ಧೆಯಲ್ಲಿ ಗೆದ್ದೆನೆಂದು ಕೇಳಿದಾಗ ನನಗೆ ತುಂಬಾ ಸಂತೋಷವಾಯಿತು. ವಿಶ್ವಕಪ್‌ನಲ್ಲಿ ಪ್ರತಿ ಪಂದ್ಯದಲ್ಲೂ ನಾನು ನನ್ನ ಈ ಶರ್ಟ್ ಧರಿಸಿ ಅವರನ್ನು ಹುರಿದುಂಬಿಸುತ್ತೇನೆ ಎಂದು  ಹೇಳಿದ್ದಾರೆ.

ಇನ್ನು ಹಾಲಿ ಟೂರ್ನಿಯಲ್ಲಿ ಸ್ಕಾಟ್ಲೆಂಡ್ ತಂಡ ತಾನಾಡಿರುವ ಎರಡೂ ಪಂದ್ಯಗಳಲ್ಲಿ ಜಯಗಳಿಸಿದ್ದು, ಆ ಮೂಲಕ ಸೂಪರ್ 12 ಹಂತಕ್ಕೆ ಅರ್ಹತೆ ಪಡೆದಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com