ಲಂಡನ್: ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ(127) ಹಾಗೂ ಚೇತೇಶ್ವರ್ ಪೂಜಾರ(61) ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಟೀಮ್ ಇಂಡಿಯಾ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ವಿರುದ್ಧ ದಿನದ ಗೌರವ ಸಾಧಿಸಿದೆ.
ಶನಿವಾರ ಮೂರನೇ ದಿನದಾಟವನ್ನು ಭಾರತ ವಿಕೆಟ್ ನಷ್ಟವಿಲ್ಲದೆ 43 ರನ್ ಗಳಿಂದ ಆರಂಭಿಸಿ, ದಿನದಾಟದಂತ್ಯಕ್ಕೆ ಎರಡನೇ ಇನ್ನಿಂಗ್ಸ್ ನಲ್ಲಿ 3 ವಿಕೆಟ್ ಗೆ 270 ರನ್ ಕಲೆ ಹಾಕಿತು.
ನಾಯಕ ವಿರಾಟ್ ಕೊಹ್ಲಿ (ಅಜೇಯ 22) ಹಾಗೂ ರವೀಂದ್ರ ಜಡೇಜಾ (ಅಜೇಯ 9) ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಟೀಮ್ ಇಂಡಿಯಾ ಎರಡನೇ ಇನ್ನಿಂಗ್ಸ್ ನಲ್ಲಿ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕುವತ್ತ ಚಿತ್ತ ನೆಟ್ಟಿದೆ.
ಇನ್ನು ಸಿಕ್ಸರ್ ಮೂಲಕ ಶತಕ ಪೂರೈಸಿದ ರೋಹಿತ್ ಶರ್ಮಾ, ವಿದೇಶಿ ನೆಲದಲ್ಲಿ ಮೊದಲ ಸೆಂಚುರಿ ಸಿಡಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 8 ವರ್ಷಗಳ ರೋಹಿತ್ ಶರ್ಮಾ ಟೆಸ್ಟ್ ಕರಿಯರ್‌ನಲ್ಲಿ ವಿದೇಶಿ ನೆಲದಲ್ಲಿ ಮೂಡಿ ಬಂದ ಮೊದಲ ಶತಕ ಇದಾಗಿದೆ. ವಿದೇಶಿ ನೆಲದಲ್ಲಿ ರೋಹಿತ್ ಶರ್ಮಾ ಆರಂಭಿಕನಾಗಿ ಕಣಕ್ಕಿಳಿದ 6ನೇ ಟೆಸ್ಟ್ ಪಂದ್ಯದಲ್ಲಿ ಶತಕ ದಾಖಲಾಗಿದೆ ಅನ್ನೋದು ಮತ್ತೊಂದು ವಿಶೇಷ.
Advertisement