ಲಂಡನ್: ಒವಲ್ ನಲ್ಲಿ ನಡೆಯುತ್ತಿರುವ ಭಾರತ- ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ವೇಳೆ ಐಸಿಸಿ ನಿಯಮ ಲೆವೆಲ್ ಒನ್ ಉಲ್ಲಂಘನೆಗಾಗಿ ಭಾರತದ ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಗೆ ಪಂದ್ಯ ಶುಲ್ಕದ ಶೇ.15 ರಷ್ಟು ದಂಡವನ್ನು ವಿಧಿಸಲಾಗಿದೆ.
ಈ ಕುರಿತು ಅಧಿಕೃತ ಹೇಳಿಕೆ ನೀಡಿರುವ ಐಸಿಸಿ, ರಾಹುಲ್ ಐಸಿಸಿ ನಿಯಮದ ಆರ್ಟಿಕಲ್ 2.8 ಉಲ್ಲಂಘನೆ ಮಾಡಿರುವುದು ಕಂಡುಬಂದಿದೆ. ಹೀಗಾಗಿ ಪಂದ್ಯದ ಶೇ. 15 ರಷ್ಟು ದಂಡ ವಿಧಿಸಲಾಗಿದೆ. ಜೊತೆಗೆ ರಾಹುಲ್ ಶಿಸ್ತಿನ ದಾಖಲೆಯಲ್ಲಿ ಒಂದು ಒಂದು ಡಿಮೆರಿಟ್ ಪಾಯಿಂಟ್ ಸೇರ್ಪಡೆಯಾಗಿದೆ ಎಂದು ತಿಳಿಸಿದೆ. 24 ತಿಂಗಳ ಅವಧಿಯಲ್ಲಿ ಇದು ರಾಹುಲ್ ಅವರ ಮೊದಲ ಅಪರಾಧವಾಗಿದೆ.
ಭಾರತದ ದ್ವಿತೀಯ ಇನ್ನಿಂಗ್ಸ್ ವೇಳೆಯಲ್ಲಿ ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್ ಬೌಲಿಂಗ್ ನಲ್ಲಿ ಕೆ .ಎಲ್. ರಾಹುಲ್ 46 ರನ್ ಗಳಿಸಿದಾಗ ಔಟ್ ಆಗಿದ್ದರು. ಇಂಗ್ಲೆಂಡ್ ಆಟಗಾರರ ಮನವಿಯನ್ನು ಫೀಲ್ಡ್ ಅಂಪೈರ್ ಪುರಸ್ಕರಿಸಲಿಲ್ಲ. ಆದರೆ, ಇಂಗ್ಲೆಂಡ್ ಆಟಗಾರರು ಡಿಆರ್ ಎಸ್ ರಿವ್ಯೂ ಮೊರೆ ಹೋದಾಗ, ಥರ್ಡ್ ಅಂಪೈರ್ ಔಟ್ ತೀರ್ಪು ನೀಡಿದ್ದರು. ಅಂಪೈರ್ ತೀರ್ಪಿನ ವಿರುದ್ಧ ರಾಹುಲ್ ಅಸಮಾಧಾನಗೊಂಡಿದ್ದರು.
ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅಂಪೈರ್ ನಿರ್ಣಯಕ್ಕೆ ಅಸಮ್ಮತಿ ಸೂಚಿಸುವುದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ನಿಯಮಗಳಿಗೆ ವಿರುದ್ಧವಾದದ್ದು ಹೀಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಐಸಿಸಿ ಪ್ರಕಟಣೆ ತಿಳಿಸಿದೆ. ದಂಡ ಪಾವತಿಸಲು ರಾಹುಲ್ ಒಪ್ಪಿಕೊಂಡಿರುವ ಕಾರಣ ಈ ಕುರಿತು ಅಧಿಕೃತ ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ಐಸಿಸಿ ಹೇಳಿದೆ.
Advertisement