ಭಾರತ-ನ್ಯೂಜಿಲೆಂಡ್ ಮೊದಲ ಟೆಸ್ಟ್, 2ನೇ ದಿನ: ಮೊದಲ ಇನ್ನಿಂಗ್ಸ್ ನಲ್ಲಿ 345 ರನ್ಸ್ ಗೆ ಭಾರತ ಆಲೌಟ್

ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 345 ರನ್ ಗಳಿಗೆ ಭಾರತ ಆಲೌಟ್ ಆಗಿದೆ.
ಕಿವೀಸ್ ಬೌಲರ್ ಗಳ ಪಾರಮ್ಯ
ಕಿವೀಸ್ ಬೌಲರ್ ಗಳ ಪಾರಮ್ಯ

ಕಾನ್ಪುರ: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 345 ರನ್ ಗಳಿಗೆ ಭಾರತ ಆಲೌಟ್ ಆಗಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಶ್ರೇಯಸ್ ಅಯ್ಯರ್ ಅವರ ಚೊಚ್ಚಲ ಶತಕ ಮತ್ತು ಶುಭ್ ಮನ್ ಗಿಲ್ ಮತ್ತು ರವೀಂದ್ರ ಜಡೇಜಾರ ಸಮಯೋಚಿತ ಅರ್ಧಶತಕಗಳ ನೆರಿವಿನಿಂದ ಕಾನ್ಪುರ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ 345 ರನ್ ಕಲೆಹಾಕಿದೆ.

ಮೊದಲ ದಿನದಾಟದ ಅಂತ್ಯಕ್ಕೆ ಕೇವಲ 4 ವಿಕೆಟ್ ನಷ್ಟಕ್ಕೆ 258ರನ್ ಗಳಿಸಿ ಬೃಹತ್ ಮೊತ್ತದ ಸೂಚನೆ ನೀಡಿತ್ತು. ಆದರೆ 2ನೇ ದಿನದ ಆರಂಭಿಕ ಸೆಷನ್ ನಲ್ಲಿ ಟೀಂ ಇಂಡಿಯಾ ಬ್ಯಾಟರ್ ಗಳ ವಿರುದ್ಧ ಕಿವೀಸ್ ಬೌಲರ್ ಗಳು ಪಾರಮ್ಯ ಮೆರೆದರು. ಇಂದು ತಂಡ ಕೇವಲ 8 ರನ್ ಗಳಿಸುವಷ್ಟರಲ್ಲಿ ಜಡೇಜಾ ಅರ್ಧಶತಕ ಗಳಿಸಿ ಸೌಥಿ ಬೌಲಿಂಗ್ ನಲ್ಲಿ ಕ್ಲೀನ್ ಬೋಲ್ಡ್ ಆದರು. ಬಳಿಕ ವೃದ್ದಿಮಾನ್ ಸಹಾ ಅವರ  ಬೆನ್ನಲ್ಲೇ ಶತಕ ವೀರ ಶ್ರೇಯಸ್ ಅಯ್ಯರ್ ಕೂಡ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ತಂಡದ ಮೊತ್ತ 313ರನ್ ಗಳಾಗಿದ್ದಾಗ ಅಕ್ಸರ್ ಪಟೇಲ್ ಕೂಡ ಸೌಥಿ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು.

ಭೋಜನ ವಿರಾಮದ ವೇಳೆಗೆ ಟೀಂ ಇಂಡಿಯಾ 8 ವಿಕೆಟ್ ನಷ್ಟಕ್ಕೆ 339ರನ್ ಗಳಿಸಿದ್ದು, 38ರನ್ ಗಳಿಸಿರುವ ಆರ್ ಅಶ್ವಿನ್ ಹಾಗೂ 4ರನ್ ಗಳಿಸಿರುವ ಉಮೇಶ್ ಯಾದವ್ ಕ್ರೀಸ್ ಕಾಯ್ದುಕೊಂಡಿದ್ದರು. ಆದರೆ ಭೋಜನ ವಿರಾಮದ ಬೆನ್ನಲ್ಲೇ ಅಶ್ವಿನ್ ವಿಕೆಟ್ ಒಪ್ಪಿಸಿದರೆ, ಅವರ ಹಿಂದೆಯೇ ಇಶಾಂತ್ ಶರ್ಮಾ ಕೂಡ ಶೂನ್ಯ ಸುತ್ತಿ ಔಟ್ ಆದರು. ಇದರೊಂದಿಗೆ ಭಾರತ ತಂಡ ಕೇವಲ ಭೋಜನ ವಿರಾಮದ ಬಳಿಕ ಕೇವಲ 6 ರನ್ ಗಳಿಸಿ ತನ್ನ ಮೊದಲ ಇನ್ನಿಂಗ್ಸ್ ಗೆ ತೆರೆ ಎಳೆಯಿತು.

ಇನ್ನು ಕಿವೀಸ್ ಪರ ಟಿಮ್ ಸೌಥಿ 5 ವಿಕೆಟ್ ಪಡೆದರೆ, ಜೇಮಿಸನ್ 3 ವಿಕೆಟ್ ಪಡೆದು ಮಿಂಚಿದರು. ಅಂತೆಯೇ ಎಜಾಜ್ ಪಟೇಲ್ 2 ವಿಕೆಟ್ ಪಡೆದದ್ದು ವಿಶೇಷವಾಗಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com