ಭಾರತ-ನ್ಯೂಜಿಲೆಂಡ್ ಮೊದಲ ಟೆಸ್ಟ್, 2ನೇ ದಿನ: ಭೋಜನ ವಿರಾಮದ ವೇಳೆಗೆ ಭಾರತ 339/8
ಕಾನ್ಪುರ: ನ್ಯೂಜಿಲೆಂಡ್ ಬೌಲರ್ ಗಳ ಕಮ್ ಬ್ಯಾಕ್ ನಿಂದಾಗಿ ಭಾರತದ ಬೃಹತ್ ಮೊತ್ತ ಪೇರಿಸುವ ಕನಸು ಕಠಿಣವಾಗಿದ್ದು, 2ನೇ ದಿನ ಭೋಜನ ವಿರಾಮದ ವೇಳೆ ಭಾರತ 8 ವಿಕೆಟ್ ನಷ್ಟಕ್ಕೆ 339 ರನ್ ಗಳಿಸಿದೆ.
ಮೊದಲ ದಿನದಾಟದ ಅಂತ್ಯಕ್ಕೆ ಕೇವಲ 4 ವಿಕೆಟ್ ನಷ್ಟಕ್ಕೆ 258ರನ್ ಗಳಿಸಿ ಬೃಹತ್ ಮೊತ್ತದ ಸೂಚನೆ ನೀಡಿತ್ತು. ಆದರೆ 2ನೇ ದಿನದ ಆರಂಭಿಕ ಸೆಷನ್ ನಲ್ಲಿ ಟೀಂ ಇಂಡಿಯಾ ಬ್ಯಾಟರ್ ಗಳ ವಿರುದ್ಧ ಕಿವೀಸ್ ಬೌಲರ್ ಗಳು ಪಾರಮ್ಯ ಮೆರೆದರು. ಇಂದು ತಂಡ ಕೇವಲ 8 ರನ್ ಗಳಿಸುವಷ್ಟರಲ್ಲಿ ಜಡೇಜಾ ಅರ್ಧಶತಕ ಗಳಿಸಿ ಸೌಥಿ ಬೌಲಿಂಗ್ ನಲ್ಲಿ ಕ್ಲೀನ್ ಬೋಲ್ಡ್ ಆದರು.
ಬಳಿಕ ವೃದ್ದಿಮಾನ್ ಸಹಾ ಅವರ ಬೆನ್ನಲ್ಲೇ ಶತಕ ವೀರ ಶ್ರೇಯಸ್ ಅಯ್ಯರ್ ಕೂಡ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ತಂಡದ ಮೊತ್ತ 313ರನ್ ಗಳಾಗಿದ್ದಾಗ ಅಕ್ಸರ್ ಪಟೇಲ್ ಕೂಡ ಸೌಥಿ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು.
ಭೋಜನ ವಿರಾಮದ ವೇಳೆಗೆ ಟೀಂ ಇಂಡಿಯಾ 8 ವಿಕೆಟ್ ನಷ್ಟಕ್ಕೆ 339ರನ್ ಗಳಿಸಿದ್ದು, 38ರನ್ ಗಳಿಸಿರುವ ಆರ್ ಅಶ್ವಿನ್ ಹಾಗೂ 4ರನ್ ಗಳಿಸಿರುವ ಉಮೇಶ್ ಯಾದವ್ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಕಿವೀಸ್ ಪರ ಟಿಮ್ ಸೌಥಿ 5 ವಿಕೆಟ್ ಪಡೆದರೆ, ಜೇಮಿಸನ್ 3 ವಿಕೆಟ್ ಪಡೆದು ಮಿಂಚಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ