ಭಾರತ vs ನ್ಯೂಜಿಲೆಂಡ್ ಮೊದಲ ಟೆಸ್ಟ್: ಕಿವೀಸ್ ಬ್ಯಾಟ್ಸ್ ಮನ್ ಗೆ 3 ಬಾರಿ ಜೀವದಾನ, ದಾಖಲೆ ನಿರ್ಮಾಣ

ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ನ್ಯೂಜಿಲೆಂಡ್ ಪಡೆಗೆ ಅದೃಷ್ಟ ಕೈ ಹಿಡಿದಂತಿದ್ದು, ಕಿವೀಸ್ ಬ್ಯಾಟ್ಸ್ ಮನ್ ಗಳು 4 ಬಾರಿ ಜೀವದಾನ ಪಡೆಯುವ ಮೂಲಕ ಅದರಲ್ಲೂ ದಾಖಲೆಗೆ ಪಾತ್ರರಾಗಿದ್ದಾರೆ.  
ಲಾಥಮ್ ಮತ್ತು ಯಂಗ್ ಜೋಡಿ
ಲಾಥಮ್ ಮತ್ತು ಯಂಗ್ ಜೋಡಿ

ಕಾನ್ಪುರ: ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ನ್ಯೂಜಿಲೆಂಡ್ ಪಡೆಗೆ ಅದೃಷ್ಟ ಕೈ ಹಿಡಿದಂತಿದ್ದು, ಕಿವೀಸ್ ಬ್ಯಾಟ್ಸ್ ಮನ್ ಗಳು 4 ಬಾರಿ ಜೀವದಾನ ಪಡೆಯುವ ಮೂಲಕ ಅದರಲ್ಲೂ ದಾಖಲೆಗೆ ಪಾತ್ರರಾಗಿದ್ದಾರೆ.  

ಟಾಮ್ ಲಥಾಮ್‌, ವಿಲ್ ಯಂಗ್ ಶತಕದ ಜೊತೆಯಾಟ ಟೀಮ್ ಇಂಡಿಯಾ ಮೂವರು ಸ್ಪಿನ್ನರ್‌ಗಳನ್ನು ಕಾಡಿದ ವಿಲ್ ಯಂಗ್ ಟೆಸ್ಟ್‌ ಕ್ರಿಕೆಟ್‌ನಲ್ಲಿ ಎರಡನೇ ಅರ್ಧಶತಕಗಳಿಸಿದ್ರು. 180 ಎಸೆತಗಳನ್ನ ಎದುರಿಸಿದ ವಿಲ್ ಯಂಗ್ ಅಜೇಯ 75 ರನ್ ಕಲೆಹಾಕುವ ಮೂಲಕ ಶತಕದ ಜೊತೆಯಾಟವಾಡಿದ್ರು. ಇವರ ಇನ್ನಿಂಗ್ಸ್‌ನಲ್ಲಿ 12 ಅಮೋಘ ಬೌಂಡರಿಗಳಿದ್ದವು. ಎರಡನೇ ದಿನದಾಟದಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದ ನ್ಯೂಜಿಲೆಂಡ್ ದಿನದಾಟದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 129 ರನ್ ತಲುಪಿದೆ. ಭಾರತದ ಟಾರ್ಗೆಟ್ ಬೆನ್ನತ್ತಲು ಇನ್ನೂ 216 ರನ್‌ಗಳು ಬಾಕಿ ಉಳಿದಿವೆ. ಭಾರತದ ಪರ ಇಬ್ಬರು ಬೌಲರ್ಸ್ ಮತ್ತು ಮೂವರು ಸ್ಪಿನ್ನರ್ಸ್‌ ಒಂದೂ ವಿಕೆಟ್ ಸಿಗದೆ ನಿರಾಸೆಯಿಂದ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದ್ರು. ಭಾರತದಲ್ಲಿ ನ್ಯೂಜಿಲೆಂಡ್ ತಂಡದ ಮೂರನೇ ಶ್ರೇಷ್ಠ ಆರಂಭಿಕ ಜೊತೆಯಾಟ ಇದಾಗಿದೆ.

ನ್ಯೂಜಿಲೆಂಡ್ ನ ಮೊದಲ ಇನ್ನಿಂಗ್ಸ್ ನ 2ನೇ ದಿನದಾಟದ ವೇಳೆ ಕಿವೀಸ್ ಬ್ಯಾಟ್ಸ್ ಮನ್ ಗಳನ್ನು ಔಟ್ ಮಾಡುವಲ್ಲಿ ಹರಸಾಹಸ ಪಟ್ಟ ಭಾರತೀಯ ಬೌಲರ್ ಗಳು ಒಂದೇ ಒಂದು ವಿಕೆಟ್  ಪಡೆಯಲೂ ಸಹ ಸಫಲವಾಗಲಿಲ್ಲ. ಕಿವೀಸ್ ಬ್ಯಾಟ್ಸ್ ಮನ್ ಗಳ ಅದೃಷ್ಟ ಚೆನ್ನಾಗಿತ್ತೋ ಅಥವಾ ಭಾರತೀಯ ಬೌಲರ್ ಗಳ ಸಮಯ ಸರಿ ಇರಲಿಲ್ಲವೋ ಏನೋ.. ಸಾಕಷ್ಟು ಪ್ರಯತ್ನಗಳ ಹೊರತಾಯಿಗೂ ಭಾರತಕ್ಕೆ ಒಂದೇ ಒಂದು ವಿಕೆಟ್ ಪಡೆಯಲೂ ಸಾಧ್ಯವಾಗಲಿಲ್ಲ. 

ಕಿವೀಸ್ ಬ್ಯಾಟ್ಸ್ ಮನ್ ಗಳಿಗೆ 4 ಬಾರಿ ಜೀವದಾನ
ಇನ್ನು ಮೊದಲ ಇನ್ನಿಂಗ್ಸ್ ನಲ್ಲಿ ಭಾರತೀಯ ಬೌಲರ್ ಗಳ ಮೇಲೆ ಸವಾರಿ ಮಾಡುತ್ತಿರುವ ಕಿವೀಸ್ ನ ಆರಂಭಿಕರಾದ ವಿಲ್ ಯಂಗ್ ಮತ್ತು ಟಾಮ್ ಲಥಾಮ್ 4 ಬಾರಿ ಜೀವದಾನ ಪಡೆದಿದ್ದರು. ಇನ್ನಿಂಗ್ಸ್ 3ನೇ ಓವರ್ ನಲ್ಲಿಯೇ ಭಾರತಕ್ಕೆ ಮೊದಲ ವಿಕೆಟ್ ಬೀಳಬೇಕಿತ್ತು. ಇಶಾಂತ್ ಶರ್ಮಾ ಬೌಲಿಂಗ್ ನಲ್ಲಿ  ಲಾಥಮ್ ಎಲ್ ಬಿ ಬಲೆಗೆ ಬಿದ್ದಿದ್ದರು. ಅಂಪೈರ್ ಕೂಡ ಔಟ್ ಎಂದು ತೀರ್ಪು ಕೊಟ್ಟಿದ್ದರು. ಆದರೆ ಈ ತೀರ್ಪಿನ ವಿರುದ್ಧ ಲಾಥಮ್ ಡಿಆರ್ ಎಸ್ ಮೊರೆ ಹೋದರು. ಆದರೆ ಡಿಆರ್ ಎಸ್ ನಲ್ಲಿ ಥರ್ಡ್ ಅಂಪೈರ್ ನಾಟ್ ಔಟ್ ಎಂದು ತೀರ್ಪು ನೀಡಿದರು. ಬಳಿಕ ರವೀಂದ್ರ ಜಡೇಡಾ ಎಸೆದ 15ನೇ ಓವರ್ ಮೊದಲ ಎಸೆತದಲ್ಲಿಯೇ ಮತ್ತೆ ಲಾಥಮ್ ಎಲ್ ಬಿ ಬಲೆಗೆ ಬಿದ್ದಿದ್ದರು. ಈ ವೇಳೆ ಜಡೇಜಾ ಔಟ್ ಗಾಗಿ ಮನವಿ ಸಲ್ಲಿಸಿದರೂ ಅಂಪೈರ್ ನಾಟೌಟ್ ತೀರ್ಪು ನೀಡಿದರು. ಆದರೆ ಜಡೇಜಾ ರಿವ್ಯೂಗಾಗಿ ವಿಕೆಟ್ ಕೀಪರ್ ವೃದಿಮಾನ್ ಸಾಹರತ್ತ ನೋಡಿದರು. ವಿಕೆಟ್ ಹಿಂದೆ ಇದ್ದ ವಿಕೆಟ್ ಕೀಪರ್ ವೃದಿಮಾನ್ ಸಾಹ ಗೊಂದಲದಲ್ಲಿದ್ದರು. ಹೀಗಾಗಿ ನಾಯಕ ರಹಾನೆ ಔಟ್ ಗಾಗಿ ಮನವಿ ಸಲ್ಲಿಸಲಿಲ್ಲ. 

ಇನ್ನು ಅದೇ ಓವರ್ ನ ಕೊನೆಯ ಎಸೆತದಲ್ಲಿ ಮತ್ತೆ ಜಡೇಜಾ ಕ್ಯಾಚ್ ಗಾಗಿ ಮನವಿ ಸಲ್ಲಿಸಿದರು. ಆನ್ ಫೀಲ್ಡ್ ಅಂಪೈರ್ ಮೆನನ್ ಔಟ್ ನೀಡಿದರು. ಆದರೆ ಲಾಥಮ್ ರಿವ್ಯೂ ಪಡೆದರು. ಚೆಂಡು ಬ್ಯಾಟ್ ಗೆ ತಾಗದೇ ಪ್ಯಾಡ್ ತಾಗಿ ಶಬ್ಧ ಬಂದಿತ್ತು. ಹೀಗಾಗಿ ಮತ್ತೆ ಲಾಥಮ್ ಜೀವದಾನ ಪಡೆದರು. ಮತ್ತೆ 35ನೇ ಓವರ್ ನಲ್ಲಿ ವಿಲ್ ಯಂಗ್ ರನ್ನು ಜಡೇಜಾ ಎಲ್ ಬಿ ಬಲೆಗೆ ಕೆಡವಿದ್ದರು. ಆಗ ಅಂಪೈರ್ ನಾಟೌಟ್ ಎಂದಾಗ ಭಾರತ ರೀವ್ಯೂ ಪಡೆದಿತ್ತು. ಈ ವೇಳೆಯೂ ಅದೃಷ್ಟ ಭಾರತದ ಕೈ ಹಿಡಿಯಲಿಲ್ಲ. ವಿಲ್ ಯಂಗ್ ನಾಟೌಟ್ ಆಗಿ ಉಳಿದರು. ದಿನದಾಟದ ಅಂತಿಮ ಹಂತದಲ್ಲಿ ತನ್ನ ಪ್ರಯತ್ನವನ್ನು ಇಮ್ಮಡಿ ಮಾಡಿದ ಭಾರತೀಯ ಬೌಲರ್ ಗಳಿಗೆ 56ನೇ ಓವರ್ ಅತ್ಯಂತ ರೋಚಕವಾಗಿತ್ತು. ಅಲ್ಲಿಯೂ ಅದೃಷ್ಟ ಭಾರತದ ಕೈ ಹಿಡಿಯಲಿಲ್ಲ.

ಆರ್ ಅಶ್ವಿನ್ ಎಸೆದ ಆ ಓವರ್ ನಲ್ಲಿ ಲಾಥಮ್ ರನ್ನು ಎಲ್ ಬಿ ಬಲೆಗೆ ಕೆಡವಾಗಿತ್ತು. ಆನ್ ಫೀಲ್ಡ್ ಅಂಪೈರ್ ಕೂಡ ಔಟ್ ಎಂದು ತೀರ್ಪು ನೀಡಿದ್ದೇ ತಡ ಭಾರತೀಯ ಆಟಗಾರರು ಸಂಭ್ರಮಿಸಿದ್ದರು. ಆದರೆ ಲಾಥಮ್ ರಿವ್ಯೂ ತೆಗೆದುಕೊಂಡ ಪರಿಣಾಮ ಸಂಭ್ರಮಾಚರಣೆ ಮೊಟಕುಗೊಂಡಿತು. ಬಳಿಕ ಥರ್ಡ್ ಅಂಪೈರ್ ತೀರ್ಪಿನಲ್ಲಿ ಚೆಂಡು ಬ್ಯಾಟ್ ಗೆ ತಾಗಿರುವುದು ಸ್ಪಷ್ಟವಾಗಿತ್ತು. ಹೀಗಾಗಿ ಅಂಪೈರ್ ತೀರ್ಪನ್ನು ಅಮಾನತುಗೊಳಿಸಿ ನಾಟೌಟ್ ಎಂದು ತೀರ್ಪು ನೀಡಿದರು.

ಜೀವದಾನದಲ್ಲೂ ಲಾಥಮ್ ದಾಖಲೆ
ಒಟ್ಟಾರೆ ಕಿವೀಸ್ ಬ್ಯಾಟ್ಸ್ ಮನ್ ಗಳ ಅದೃಷ್ಟ ಇಂದು ಚೆನ್ನಾಗಿತ್ತು. ವಿಲ್ ಯಂಗ್ ಒಮ್ಮೆ ಜೀವದಾನ ಪಡೆದರೆ, ಟಾಮ್ ಲಾಥಮ್ ಮೂರು ಬಾರಿ ಜೀವದಾನ ಪಡೆದು ಕ್ರೀಸ್ ನಲ್ಲಿ ಮುಂದುವರೆದಿದ್ದಾರೆ. ಅಲ್ಲದೆ ಮೂರು ಬಾರಿ ರಿವ್ಯೂ ಪಡೆದರೂ ನಾಟೌಟ್ ಆಗಿ ಉಳಿದು ದಾಖಲೆಗೂ ಪಾತ್ರರಾಗಿದ್ದಾರೆ. ಈ ಹಿಂದೆ ಅತೀ ಹೆಚ್ಚು ರಿವ್ಯೂ ಪಡೆದು ನಾಟೌಟ್ ಆದ ಬ್ಯಾಟ್ಸ್ ಮನ್ ಗಳ ಸಾಲಿನಲ್ಲಿ ಇಂಗ್ಲೆಂಡ್ ಆಟಗಾರ ಮೊಯಿನ್ ಅಲಿ ಇದ್ದಾರೆ. 2016/17ರಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಮೂರು ಬಾರಿ ಔಟ್ ಆಗಿ ರಿವ್ಯೂ ಬಳಿಕ ಜೀವದಾನ ಪಡೆದಿದ್ದರು.ಇದಾದ ಬಳಿಕ ಮೂರು ಬಾರಿ ರಿವ್ಯೂ ಪಡೆದು ನಾಟೌಟ್ ಆದ ಬ್ಯಾಟ್ಸ್ ಮನ್ ಎಂಬ ದಾಖಲೆಗೆ ಲಾಥಮ್ ಪಾತ್ರರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com