ಐಪಿಎಲ್ ತಂಡಗಳ ಹರಾಜು: ಬಿಸಿಸಿಐ ಬೊಕ್ಕಸಕ್ಕೆ 12,700 ಕೋಟಿ ರೂ..; ಏನಿದು ಚಿನ್ನದ ಮೊಟ್ಟೆ ಇಡುವ ಕೋಳಿ ಕಥೆ!

ಐಪಿಎಲ್-2022 ಸರಣಿಗೆ ಸೇರ್ಪಡೆಯಾಗುತ್ತಿರುವ ಲಖನೌ ಮತ್ತು ಅಹ್ಮದಾಬಾದ್ ತಂಡಗಳ ಬಿಡ್ಡಿಂಗ್ ಪ್ರಕ್ರಿಯೆ ಮುಕ್ತಾಯವಾಗಿದ್ದು, ಅದಾನಿ, ಮ್ಯಾಂಚೆಸ್ಟರ್ ಯುನೈಟೆಡ್ ನಂತಹ ದೈತ್ಯ ಸಂಸ್ಥೆಗಳನ್ನೇ ಹಿಂದಿಕ್ಕಿ ದುಬಾರಿ ಬೆಲೆಗೆ ಸಿವಿಸಿ ಮತ್ತು ಆರ್ ಪಿಎಸ್ ಜಿ ಗ್ರೂಪ್ಸ್ ತಂಡಗಳನ್ನು ಖರೀದಿ ಮಾಡಿವೆ.
ಐಪಿಎಲ್ ಬಿಡ್ಡಿಂಗ್
ಐಪಿಎಲ್ ಬಿಡ್ಡಿಂಗ್

ಮುಂಬೈ: ಐಪಿಎಲ್-2022 ಸರಣಿಗೆ ಸೇರ್ಪಡೆಯಾಗುತ್ತಿರುವ ಲಖನೌ ಮತ್ತು ಅಹ್ಮದಾಬಾದ್ ತಂಡಗಳ ಬಿಡ್ಡಿಂಗ್ ಪ್ರಕ್ರಿಯೆ ಮುಕ್ತಾಯವಾಗಿದ್ದು, ಅದಾನಿ, ಮ್ಯಾಂಚೆಸ್ಟರ್ ಯುನೈಟೆಡ್ ನಂತಹ ದೈತ್ಯ ಸಂಸ್ಥೆಗಳನ್ನೇ ಹಿಂದಿಕ್ಕಿ ದುಬಾರಿ ಬೆಲೆಗೆ ಸಿವಿಸಿ ಮತ್ತು ಆರ್ ಪಿಎಸ್ ಜಿ ಗ್ರೂಪ್ಸ್ ತಂಡಗಳನ್ನು ಖರೀದಿ ಮಾಡಿವೆ.

ಮೂಲಗಳ ಪ್ರಕಾರ ಲಖನೌ ತಂಡವನ್ನು ಆರ್‌ಪಿ-ಸಂಜೀವ್‌ ಗೋಯೆಂಕಾ ಸಂಸ್ಥೆಯು ಬರೋಬ್ಬರಿ 7,090 ಕೋಟಿಗೆ ಖರೀದಿಸಿದ್ದು, ಅಹ್ಮದಾಬಾದ್‌ ತಂಡವನ್ನು 5,625 ಕೋಟಿಗೆ ಯುರೋಪ್‌ನ ಸಿವಿಸಿ ಖರೀದಿ ಮಾಡಿದೆ. 2 ತಂಡಗಳ ಮಾರಾಟದಿಂದ ಬಿಸಿಸಿಐ ಬೊಕ್ಕಸಕ್ಕೆ ಬರೊಬ್ಬರಿ 12,700 ಕೋಟಿ ರುಪಾಯಿ ಹರಿದುಬಂದಂತಾಗಿದೆ.  

ಬಿಸಿಸಿಐಗೆ ಸಾವಿರಾರು ಕೋಟಿ ಹಣ
ಆದರೆ 2008ರಲ್ಲಿ ನಡೆದಿದ್ದ ತಂಡಗಳ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 8 ತಂಡಗಳ ಬಿಡ್ಡಿಂಗ್ ನಿಂದ 3,000 ಕೋಟಿ ರುಪಾಯಿಗೂ ಕಡಿಮೆ ಮೊತ್ತಕ್ಕೆ ಮಾರಾಟವಾಗಿದ್ದವು. 2 ವರ್ಷಗಳ ಬಳಿಕ ಕೊಚ್ಚಿ ಟಸ್ಕ​ರ್ಸ್‌ 1,533 ಕೋಟಿ ರೂ.ಗೆ ಮಾರಾಟವಾಗಿತ್ತು. ಪುಣೆ ವಾರಿಯರ್ಸ್‌ 1,702 ಕೋಟಿ ರುಪಾಯಿಗೆ ಬಿಡ್‌ ಆಗಿತ್ತು. ಆದರೆ ಇದೀಗ ಈ ದಾಖಲೆ ಮುರಿದಿದ್ದು, ಎರಡೇ ಎರಡು ತಂಡಗಳಿಂದ ಬಿಸಿಸಿಐ ಬರೊಬ್ಬರಿ 12,700 ಕೋಟಿ ರೂ ಹಣ ಸಂಪಾದನೆ ಮಾಡಿದಂತಾಗಿದೆ.

ತಂಡ ಖರೀದಿ ದುಬಾರಿ ಆಗಲು ಕಾರಣವೇನು?
2008ರಲ್ಲಿ ಗರಿಷ್ಠ ಮೊತ್ತಕ್ಕೆ ಮಾರಾಟವಾದ ತಂಡ ಎಂದರೆ ಮುಂಬೈ ಇಂಡಿಯನ್ಸ್‌. 111.9 ಮಿಲಿಯನ್‌ ಡಾಲರ್‌ (447.6 ಕೋಟಿ ರುಪಾಯಿ)ಗೆ ಮುಖೇಶ್‌ ಅಂಬಾನಿ ತಂಡ ಖರೀದಿಸಿದ್ದರು. ಆಗ ಒಂದು ಅಮೆರಿಕನ್‌ ಡಾಲರ್‌ಗೆ ಸುಮಾರು 43 ರುಪಾಯಿ ಇತ್ತು. ಈಗ ಡಾಲರ್‌ ಮೌಲ್ಯ 74.93 ರು. ಇದೆ. ಐಪಿಎಲ್‌ ಅನ್ನು ಒಂದು ವ್ಯವಹಾರವಾಗಿ ಹೇಗೆ ನಿರ್ವಹಿಸಬೇಕು ಎನ್ನುವ ಮಾಹಿತಿ ಬಹುತೇಕ ಮಾಲಿಕರಿಗೆ ಇರಲಿಲ್ಲ. ಅಲ್ಲದೇ ಸ್ವತಃ ಬಿಸಿಸಿಐಗೇ ಐಪಿಎಲ್‌ ಟೂರ್ನಿ ಇಷ್ಟು ದೊಡ್ಡದಾಗಿ ಬೆಳೆಯಲಿದೆ ಎನ್ನುವ ಸುಳಿವು ಇರಲಿಲ್ಲ. 2008ರಲ್ಲಿ ಸೋನಿ ಸಂಸ್ಥೆಯು 918 ಮಿಲಿಯನ್‌ ಡಾಲರ್‌ (ಅಂದಿನ ಡಾಲರ್‌ ಮೌಲ್ಯದಲ್ಲಿ ಅಂದಾಜು 4,000 ಕೋಟಿ ರು.)ಗೆ ಮಾಧ್ಯಮ ಹಕ್ಕು ಖರೀದಿಸಿತ್ತು. 2017ರಲ್ಲಿ ಸ್ಟಾರ್‌ ಸಂಸ್ಥೆಯು ಬರೋಬ್ಬರಿ 16,347.5 ಕೋಟಿ ರು. ನೀಡಿ 5 ವರ್ಷಕ್ಕೆ ಮಾಧ್ಯಮ ಹಕ್ಕು ಖರೀದಿ ಮಾಡಿತ್ತು.

ತಂಡಗಳಿಗೆ ಲಾಭ ಹೇಗೆ?
ಬಿಸಿಸಿಐ ತನಗೆ ಐಪಿಎಲ್‌ನಿಂದ ಬರುವ ಒಟ್ಟು ಆದಾಯದಲ್ಲಿ ಶೇ.50ರಷ್ಟು ಹಣವನ್ನು ಫ್ರಾಂಚೈಸಿಗಳಿಗೆ ಸಮನಾಗಿ ಹಂಚಲಿದೆ. ಜೊತೆಗೆ ಪ್ರಾಯೋಜಕತ್ವ, ಜೆರ್ಸಿ ಮಾರಾಟ, ಟಿಕೆಟ್‌ ಮಾರಾಟದಿಂದ ಪ್ರತಿ ವರ್ಷ ಫ್ರಾಂಚೈಸಿಗಳು ಹಣ ಸಂಪಾದಿಸಲಿದ್ದಾರೆ. ಪ್ರತಿ ಫ್ರಾಂಚೈಸಿಗೆ ಒಂದು ಆವೃತ್ತಿ ಅಂದಾಜು 300-350 ಕೋಟಿ ರು. ಹಣ ಸಂಪಾದನೆ ಆಗಲಿದೆ. 

ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಘಟಾನುಘಟಿಗಳು
2022ನೇ ಸಾಲಿನ ಐಪಿಎಲ್ ಟೂರ್ನಿಗೆ ಫ್ರಾಂಚೈಸಿಗಳಾಗಲು ಖ್ಯಾತ ಉಧ್ಯಮಿಗಳಾದ ಅದಾನಿ ಗ್ರೂಪ್, ಕೋಟಕ್, ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್ ತಂಡದ ಮಾಲೀಕರು ಸೇರಿದಂತೆ ಪ್ರಮುಖ ಉಧ್ಯಮಿಗಳು ಆಸಕ್ತಿ ತೋರಿದ್ದರು. ಆದರೆ ಸಿವಿಸಿ ಗ್ರೂಪ್ ಹಾಗೂ ಆರ್‌ಪಿಎಸ್‌ಜಿ ಗ್ರೂಪ್‌ ಹೊಸ ತಂಡಗಳನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com