
ಚಟ್ಟೋಗ್ರಾಮ್: ಬಾಂಗ್ಲಾದೇಶ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಭಾರತದ ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ಮೂಲಕ ಬೃಹತ್ ಮೊತ್ತಕ್ಕೆ ಕಾರಣವಾದ ಇಶಾನ್ ಕಿಶನ್ ಮತ್ತು ವಿರಾಟ್ ಕೊಹ್ಲಿ ಜೋಡಿ ಕ್ರಿಕೆಟ್ ಜಗತ್ತಿನ ದಾಖಲೆ ಪಟ್ಟಿಗೆ ಸೇರ್ಪಡೆಯಾಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 409 ರನ್ ಗಳಿಸಿತ್ತು. ಭಾರತದ ಬೃಹತ್ ಮೊತ್ತದಲ್ಲಿ ಆರಂಭಿಕ ಆಟಗಾರ ಇಶಾನ್ ಕಿಶನ್ (210) ಮತ್ತು ವಿರಾಟ್ ಕೊಹ್ಲಿ (113) ದಾಖಲೆಯ ಜೊತೆಯಾಟವಾಡಿದರು. ವಿರಾಟ್ ಕೊಹ್ಲಿ ಜೊತೆ ಸೇರಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಇಶಾನ್ ಕಿಶನ್ ಎರಡನೇ ವಿಕೆಟ್‌ಗೆ ಅಮೋಘ ಜೊತೆಯಾಟವಾಡಿದರು.
290 ರನ್‌ಗಳ ಬೃಹತ್ ಜೊತೆಯಾಟ
ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡಕ್ಕೆ ಆರಂಭಿಕ ಆಟಗಾರ ಉಂಟಾಯಿತು. ಶಿಖರ್ ಧವನ್ ತಂಡದ ಮೊತ್ತ 15 ರನ್‌ಗಳಿದ್ದಾಗ ಕೇವಲ 3 ರನ್‌ಗಳಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಸೇರಿಕೊಂಡರು. ಬಳಿಕ ಜೊತೆಯಾದ ಇಶಾನ್ ಕಿಶನ್ ಹಾಗೂ ವಿರಾಟ್ ಕೊಹ್ಲಿ ಜೋಡಿ ಅಮೋಘ ಜೊತೆಯಾಟವನ್ನು ಪ್ರದರ್ಶಿಸಿದರು. ಈ ಜೋಡಿ ಬರೊಬ್ಬರಿ 290 ರನ್‌ಗಳ ಜೊತೆಯಾಟವಾಡಿತು. 131 ಎಸೆತಗಳಲ್ಲಿ ಇಶಾನ್ ಕಿಶನ್ 10 ಸಿಕ್ಸರ್ ಮತ್ತು 24 ಬೌಂಡರಿಗಳ ನೆರವಿನಿಂದ 210 ರನ್ ಸಿಡಿಸಿದರೆ, 91 ಎಸೆತಗಳಲ್ಲಿ ವಿರಾಟ್ ಕೊಹ್ಲಿ 2 ಸಿಕ್ಸರ್ ಮತ್ತು 11 ಬೌಂಡರಿಗಳ ನೆರವಿನಿಂದ 113 ರನ್ ಗಳಿಸಿದರು.
ಭಾರತದ ಪರ 3ನೇ ಗರಿಷ್ಠ ಜೊತೆಯಾಟ
ಇಶಾನ್ ಕಿಶನ್-ವಿರಾಟ್ ಕೊಹ್ಲಿ ಜೋಡಿ ಗಳಿಸಿದ ಈ 290ರನ್ ಗಳ ಜೊತೆಯಾಟ ಭಾರತದ ಪರ ದಾಖಲಾದ ಮೂರನೇ ಗರಿಷ್ಠ ಜೊತೆಯಾಟ ಎಂಬ ಕೀರ್ತಿಗೆ ಪಾತ್ರವಾಗಿದೆ. ಇದಕ್ಕೂ ಮೊದಲು ಭಾರತದ ಶ್ರೇಷ್ಠ ಆಟಗಾರರಾದ ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಅವರು 1999 ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ 331 ರನ್ ಜೊತೆಯಾಟವಾಡಿದ್ದರು. ಇದು ಭಾರತದ ಪರ ದಾಖಲಾದ ಅತಿದೊಡ್ಡ ಜೊತೆಯಾಟ ಎಂಬ ದಾಖಲೆ ನಿರ್ಮಿಸಿದೆ.
ಬಳಿಕ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಕೂಡ ಅದೇ ವರ್ಷ ಶ್ರೀಲಂಕಾ ವಿರುದ್ಧದ ಟೌಂಟನ್‌ನಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯದ ವೇಳೆ ಭಾರತಕ್ಕೆ ಎರಡನೇ ಗರಿಷ್ಠ ರನ್ ಜೊತೆಯಾಟ ಅಂದರೆ 318 ರನ್‌ಗಳನ್ನು ಕಲೆ ಹಾಕಿದ್ದರು. ಇದು ಭಾರತದ ಪರ ದಾಖಲಾದ 2ನೇ ಗರಿಷ್ಠ ಜೊತೆಯಾಟವಾಗಿದೆ.
ಇನ್ನು ಜಾಗತಿಕ ಕ್ರಿಕೆಟ್ ನಲ್ಲಿ ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಮತ್ತು ಮರ್ಲಾನ್ ಸ್ಯಾಮುಯೆಲ್ಸ್ ಜೋಡಿ 2015 ರಲ್ಲಿ ಜಿಂಬಾಬ್ವೆ ವಿರುದ್ಧದ ODI ವಿಶ್ವಕಪ್ ಪಂದ್ಯದಲ್ಲಿ 372 ರನ್ ಗಳ ಜೊತೆಯಾಟವಾಡಿದ್ದರು. ಇದು ಏಕದಿನ ಕ್ರಿಕೆಟ್‌ನಲ್ಲಿ ದಾಖಲಾದ ಅತಿದೊಡ್ಡ ಜೊತೆಯಾಟ ಎಂಬ ದಾಖಲೆಗೆ ಪಾತ್ರವಾಗಿದೆ.
Advertisement