
ಚಟ್ಟೋಗ್ರಾಮ್: ಬಾಂಗ್ಲಾದೇಶ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಭಾರತದ ಭರ್ಜರಿ ಬ್ಯಾಟಿಂಗ್ ಮೂಲಕ ದ್ವಿಶತಕ ಸಾಧನೆ ಮಾಡಿದ ಇಶಾನ್ ಕಿಶನ್ ಜಾಗತಿಕ ಮತ್ತು ಅಪರೂಪದ ದಾಖಲೆ ನಿರ್ಮಿಸಿದ್ದಾರೆ.
ಹೌದು... ಬಾಂಗ್ಲಾದೇಶ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಇಶಾನ್ ಕಿಶನ್ ಬರೊಬ್ಬರಿ 210 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. 131 ಎಸೆತಗಳನ್ನು ಎದುರಿಸಿದ ಕಿಶನ್ 24 ಬೌಂಡರಿ ಹಾಗೂ 10 ಸಿಕ್ಸರ್ ಸಿಡಿಸಿದ್ದಾರೆ. ಇಶಾನ್ ಕಿಶನ್ 85 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರ್ಣಗೊಳಿಸಿದರು. ಅದಾದ ಬಳಿಕ ರನ್ ವೇಗವನ್ನು ಮತ್ತಷ್ಟು ಹೆಚ್ಚಿಸಿದ ಇಶಾನ್ ಕಿಶನ್ ರನ್ ವೇಗವನ್ನು ಭಾರೀ ಪ್ರಮಾಣದಲ್ಲಿ ಏರಿಸಿದರು. ಬಳಿಕ ದ್ವಿಶತಕ ಸಿಡಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ವೇಗದ ದ್ವಿಶತಕ; ಕ್ರಿಸ್ ಗೇಯ್ಲ್ ದಾಖಲೆ ಪತನ
ಬಾಂಗ್ಲಾದೇಶ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಇಶಾನ್ ಕಿಶನ್ ಬೌಂಡರಿ ಸಿಕ್ಸರ್‌ಗಳ ಮಳೆಗೈದಿದ್ದಾರೆ. ಕೇವಲ 126 ಎಸೆತಗಳಲ್ಲಿ ದ್ವಿಶತಕದ ಮೈಲಿಗಲ್ಲುದಾಟಿದ ಇಶಾನ್ ಕಿಶನ್ ಅತ್ಯಂತ ವೇಗವಾಗಿ ದ್ವಿಶತಕ ಸಿಡಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಕ್ರಿಸ್ ಗೇಲ್ 138 ಎಸೆತಗಳಲ್ಲಿ ದ್ವಿಶತಕ ಸಿಡಿಸಿ ಈ ದಾಖಲೆಯನ್ನು ಬರೆದಿದ್ದರು. ಈ ದಾಖಲೆ ಈಗ ಮುರಿದಿದೆ.
ವೇಗದ ದ್ವಿಶತಕ: ಅಗ್ರ ಸ್ಥಾನದಲ್ಲಿ ಇಶಾನ್ ಕಿಶನ್
ಇನ್ನು ಈ ವರೆಗೂ ದಾಖಲಾದ ವೇಗದ ದ್ವಿಶತಕಗಳ ಪೈಕಿ ಇಂದು ಇಶಾನ್ ಕಿಶನ್ ಸಿಡಿಸಿದ ದ್ವಿಶತಕ ಅಗ್ರ ಸ್ಥಾನಕ್ಕೇರಿದೆ. ಈ ಪಟ್ಟಿಯಲ್ಲಿ 138 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ ವಿಂಡೀಸ್ ದೈತ್ಯ ಕ್ರಿಸ್ ಗೇಯ್ಲ್ 2ನೇ ಸ್ಥಾನಕ್ಕೆ ಕುಸಿದಿದ್ದು, 140 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ್ದ ಭಾರತದ ವಿರೇಂದ್ರ ಸೆಹ್ವಾಗ್ 3 ಮತ್ತು 147 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ ಸಚಿನ್ ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. 148 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ ಪಾಕಿಸ್ತಾನದ ಫಖರ್ ಜಮಾನ್ 5ನೇ ಸ್ಥಾನದಲ್ಲಿದ್ದಾರೆ.
Advertisement