ದೀಪಕ್ ಚಹರ್
ದೀಪಕ್ ಚಹರ್

ಟಿ20 ವಿಶ್ವಕಪ್: ದೀಪಕ್ ಚಹರ್ ಕೂಡ ಟೂರ್ನಿಯಿಂದ ಔಟ್; ಸಿರಾಜ್, ಶಾರ್ದೂಲ್, ಶಮಿಗೆ ಮಣೆ!

ಟಿ20 ವಿಶ್ವಕಪ್ ಟೂರ್ನಿಗೆ ಸಜ್ಜಾಗುತ್ತಿರುವ ಟೀಂ ಇಂಡಿಯಾಗೆ ಗಾಯದ ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತಿದ್ದು ಬುಮ್ರಾ ಬೆನ್ನಲ್ಲೇ ಇದೀಗ ದೀಪಕ್ ಚಾಹರ್ ಕೂಡ ಟೂರ್ನಿಯಿಂದ ಹೊರಗುಳಿಯಲಿದ್ದಾರೆ.

ನವದೆಹಲಿ: ಟಿ20 ವಿಶ್ವಕಪ್ ಟೂರ್ನಿಗೆ ಸಜ್ಜಾಗುತ್ತಿರುವ ಟೀಂ ಇಂಡಿಯಾಗೆ ಗಾಯದ ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತಿದ್ದು ಬುಮ್ರಾ ಬೆನ್ನಲ್ಲೇ ಇದೀಗ ದೀಪಕ್ ಚಾಹರ್ ಕೂಡ ಟೂರ್ನಿಯಿಂದ ಹೊರಗುಳಿಯಲಿದ್ದಾರೆ.

ಹೌದು.. ಗಾಯದ ಸಮಸ್ಯೆ ಎದುರಿಸುತ್ತಿರುವ ದೀಪಕ್ ಚಹರ್, ಮುಂಬರುವ ಟ್ವೆಂಟಿ-20 ವಿಶ್ವಕಪ್‌ನಿಂದ ದೂರ ಉಳಿಯಲಿದ್ದಾರೆ. ಈ ಮೊದಲು ಟ್ವೆಂಟಿ-20 ವಿಶ್ವಕಪ್‌ಗೆ ಘೋಷಿಸಿದ ಟೀಮ್ ಇಂಡಿಯಾದ ಮೀಸಲು ಆಟಗಾರರ ಪಟ್ಟಿಯಲ್ಲಿ ಚಾಹರ್ ಸ್ಥಾನ ಗಿಟ್ಟಿಸಿದ್ದರು. ಆದರೆ ಗಾಯದ ಸಮಸ್ಯೆಯಿಂದಾಗಿ ಇದೀಗ ಚಹರ್ ಕೂಡ ತಂಡದಿಂದ ಔಟ್ ಆಗಿದ್ದಾರೆ. ಚಹರ್ ಈಗಾಗಲೇ ನಿರ್ಗಮಿಸಿರುವ ಜಸ್‌ಪ್ರೀತ್ ಬೂಮ್ರಾ ಸ್ಥಾನವನ್ನು ತುಂಬುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿತ್ತು. ಆದರೆ ಇದೀಗ ತಂಡದ ಯೋಜನೆ ತಲೆಕೆಳಗಾಗಿದೆ.

ಚಹರ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಪುನಶ್ಚೇತನ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಟ್ವೆಂಟಿ-20 ಸರಣಿಯಲ್ಲಿ ಚಹರ್ ಆಡಿದ್ದರು. ಆದರೆ ಗಾಯದಿಂದಾಗಿ ಏಕದಿನ ಸರಣಿಗೆ ಅಲಭ್ಯರಾಗಿದ್ದರು.

ಸಿರಾಜ್, ಶಾರ್ದೂಲ್, ಶಮಿಗೆ ಮಣೆ
ಮತ್ತೊಂದೆಡೆ ವೇಗಿಗಳಾದ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಅವರು ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲಿದ್ದು, ಶೀಘ್ರದಲ್ಲೇ ಟೀಮ್ ಇಂಡಿಯಾ ಕ್ಯಾಂಪ್ ಸೇರಲಿದ್ದಾರೆ ಎನ್ನಲಾಗಿದೆ. ಅಲ್ಲದೆ ಬೂಮ್ರಾ ಬದಲಿ ಆಟಗಾರನನ್ನು ಘೋಷಿಸಲು ಅಕ್ಟೋಬರ್ 15ರವರೆಗೆ ಕಾಲಾವಕಾಶವಿದೆ. ಹಾಗಾಗಿ ಶಮಿ, ಸಿರಾಜ್ ಹಾಗೂ ಶಾರ್ದೂಲ್ ಪೈಕಿ ಯಾವ ಆಟಗಾರನಿಗೆ ಅವಕಾಶ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಒಂದು ವೇಳೆ ಹಾರ್ದಿಕ್ ಪಾಂಡ್ಯಗೆ ಗಾಯದ ಸಮಸ್ಯೆ ಎದುರಾದಲ್ಲಿ, ಆ ಸ್ಥಾನವನ್ನು ತುಂಬುವುದಕ್ಕಾಗಿ ಶಾರ್ದೂಲ್ ಅವರನ್ನು ಹೆಚ್ಚುವರಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಸದ್ಯಕ್ಕೆ ಶ್ರೇಯಸ್ ಅಯ್ಯರ್ ಹಾಗೂ ರವಿ ಬಿಷ್ಣೋಯಿ ಆಸೀಸ್‌ಗೆ ಪ್ರಯಾಣಿಸುವ ಸಾಧ್ಯತೆ ಕಡಿಮೆಯಾಗಿದೆ. ಹಾಗೆಯೇ ಯಜುವೇಂದ್ರ ಚಾಹಲ್‌ಗೆ ಗಾಯದ ಸಮಸ್ಯೆ ಎದುರಾದರೆ ಬಿಷ್ಣೋಯಿ ಅವರನ್ನು ಆಯ್ಕೆಗೆ ಪರಿಗಣಿಸುವ ಸಾಧ್ಯತೆಯಿದೆ.
 

Related Stories

No stories found.

Advertisement

X
Kannada Prabha
www.kannadaprabha.com