

ದುಬೈ: ಏಷ್ಯಾಕಪ್ 2022 ಟೂರ್ನಿಯ ಇಂದಿನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಕ್ರಿಕೆಟ್ ಶಿಶು ಹಾಂಗ್ ಕಾಂಗ್ ವಿರುದ್ಧ ಪಾಕಿಸ್ತಾನ 155 ರನ್ ಗಳ ಭರ್ಜರಿ ಜಯ ಸಾಧಿಸಿದ್ದು, ಸೂಪರ್ 4 ಹಂತದಲ್ಲಿ ಮತ್ತೆ ಭಾರತವನ್ನು ಎದುರಿಸಲಿದೆ.
ಪಾಕಿಸ್ತಾನ ನೀಡಿದ 194 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಹಾಂಗ್ ಕಾಂಗ್ ತಂಡದ ಬ್ಯಾಟರ್ ಗಳು ಅಕ್ಷರಶಃ ಪಾಕಿಸ್ತಾನ ಬೌಲಿಂಗ್ ದಾಳಿಗೆ ಮಕಾಡೆ ಮಲಗಿ ಕೇವಲ 38ರನ್ ಗಳಿಗೆ ಆಲೌಟ್ ಆಗಿ, 155 ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡರು. ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ಹಾಂಗ್ ಕಾಂಗ್ ತಂಡ ಶಾಬಾದ್ ಖಾನ್ (4 ವಿಕೆಟ್) ಮತ್ತು ಮಹಮದ್ ನವಾಜ್ (3 ವಿಕೆಟ್) ಬೌಲಿಂಗ್ ದಾಳಿಗೆ ತತ್ತರಿಸಿತು. ಹಾಂಗ್ ಕಾಂಗ್ ನ ಯಾವೊಬ್ಬ ಬ್ಯಾಟರ್ ಕೂಡ ಎರಡಂಕಿ ಮೊತ್ತ ದಾಟಲಿಲ್ಲ. ಆರಂಭಿಕ ಆಟಗಾರ ನಾಯಕ ನಿಜಾಕತ್ ಖಾನ್ ಗಳಿಸಿದ 8 ರನ್ ಗಳೇ ಆ ತಂಡದ ಬ್ಯಾಟರ್ ವೊಬ್ಬ ಗಳಿಸಿದ ಗರಿಷ್ಠ ವೈಯುಕ್ತಕ ರನ್ ಗಳಿಕೆಯಾಗಿದೆ. ಇದು ಹಾಂಗ್ ಕಾಂಗ್ ತಂಡದ ಬ್ಯಾಟಿಂಗ್ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಅಂತಿಮವಾಗಿ ಹಾಂಗ್ ಕಾಂಗ್ ತಂಡ 10.4 ಓವರ್ ನಲ್ಲಿ ಕೇವಲ 38 ರನ್ ಗಳಿಗೆ ಆಲೌಟ್ ಆಯಿತು. ಆ ಮೂಲಕ 155 ರನ್ ಗಳ ಅಂತರದ ಹೀನಾಯ ಸೋಲು ಕಂಡಿತು.
ಇದಕ್ಕೂ ಮೊದಲು ಭರ್ಜರಿ ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ತಂಡ ಆರಂಭಿಕ ಆಟಗಾರ ರಿಜ್ವಾನ್ (ಅಜೇಯ 78) ಮತ್ತು ಮದ್ಯಮ ಕ್ರಮಾಂಕದ ಆಟಗಾರ ಫಖರ್ ಜಮಾನ್ (53 ರನ್) ಅಮೋಘ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 193ರನ್ ಗಳಿಸಿತು. ಈ ಪಂದ್ಯದಲ್ಲಿ ಭಾರತದ ವಿರುದ್ಧ ವಿಫಲವಾಗಿದ್ದ ಪಾಕ್ ತಂಡದ ನಾಯಕ ಬಾಬರ್ ಅಜಮ್ ಹಾಂಗ್ ಕಾಂಗ್ ವಿರುದ್ಧವೂ ವಿಫಲರಾದರು. 9 ರನ್ ಗಳಿಸಿದ್ದ ವೇಳೆ ಎಹ್ಸಾನ್ ಖಾನ್ ಬೌಲಿಂಗ್ ನಲ್ಲಿ ಕ್ಯಾಚ್ ನೀಡಿ ಔಟಾದರು.
ಗ್ರೂಪ್ ಸುತ್ತಿನ ಕೊನೆಯ ಪಂದ್ಯವು ಶುಕ್ರವಾರದಂದು ಶಾರ್ಜಾದಲ್ಲಿ ಸೆಪ್ಟೆಂಬರ್ 2 ರಂದು ನಡೆದಿದ್ದು, ಇಲ್ಲಿ ಗೆಲ್ಲುವ ತಂಡವು ಮುಂದಿನ ಸುತ್ತಿನಲ್ಲಿ ಸ್ಥಾನ ಪಡೆಯಬೇಕಾಗಿತ್ತು. ಪಾಕಿಸ್ತಾನ ತನ್ನ ಕೊನೆಯ ಪಂದ್ಯದಲ್ಲಿ ಹಾಂಗ್ ಕಾಂಗ್ ತಂಡವನ್ನು ಹೀನಾಯವಾಗಿ ಸೋಲಿಸಿ, ಏಷ್ಯಾಕಪ್‌ನ ಸೂಪರ್ ಫೋರ್‌ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಇದರೊಂದಿಗೆ ಟೀಮ್ ಇಂಡಿಯಾದೊಂದಿಗೆ ಒಂದು ವಾರದಲ್ಲಿ ಎರಡನೇ ಪಂದ್ಯವನ್ನು ಆಡಲಿದೆ.
Advertisement