ನವದೆಹಲಿ: ಚೆನ್ನೈನಲ್ಲಿ ಇದೇ ತಿಂಗಳ 22 ರಂದು ಆರಂಭವಾಗಲಿರುವ ನ್ಯೂಜಿಲೆಂಡ್ ಎ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಸಂಜು ಸ್ಯಾಮ್ಸನ್ ನೇತೃತ್ವದ ಟೀಂ ಇಂಡಿಯಾ ಎ ತಂಡಕ್ಕೆ ಯುವ ಆಲ್ ರೌಂಡರ್ ರಾಜ್ ಅಂಗಾದ್ ಬಾವಾ ಚೊಚ್ಚಲ ಬಾರಿಗೆ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಸೆಪ್ಟೆಂಬರ್ 25 ಮತ್ತು 27 ರಂದು ಕ್ರಮವಾಗಿ ಎರಡು ಮತ್ತು ಮೂರನೇ ಪಂದ್ಯಗಳು ನಡೆಯಲಿವೆ. ದುಲೀಪ್ ಟ್ರೋಫಿಯಲ್ಲಿ ಉತ್ತಮ ಫಾರ್ಮ್ ನಲ್ಲಿದ್ದ ಪೃಥ್ವಿ ಶಾ ಸೇರಿದಂತೆ ಜಿಂಬಾಬ್ವೆಯಲ್ಲಿ ನಡೆದ ಏಕದಿನ ಸರಣಿಯಲ್ಲಿದ್ದ ಬಹುತೇಕ ಆಟಗಾರರು ಈ ತಂಡದಲ್ಲಿದ್ದಾರೆ. 19 ವರ್ಷದೊಳಗಿನವರ ವಿಶ್ವಕಪ್ ವಿಜೇತ ಭಾರತ ತಂಡದ ಹಿರೋ ಬಾವಾ, ಮಧ್ಯಮ ಕ್ರಮಂಕದ ಬೌಲರ್ ಹಾಗೂ ಎಡಗೈ ಬ್ಯಾಟರ್ ಆಗಿದ್ದಾರೆ.
ಬಾವಾ ಚಂಡೀಗಡ ಪರ ಕೇವಲ ಎರಡು ರಣಜಿ ಟ್ರೋಫಿ ಗೇಮ್ ಗಳಲ್ಲಿ ಆಡಿದ್ದಾರೆ. ಹೀಗಿರುವಾಗಲೇ ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯ ಗಮನ ಸೆಳೆದಿರುವ ಬಾವಾ, ಭವಿಷ್ಯದಲ್ಲಿ ಹಾರ್ದಿಕ್ ಪಾಂಡ್ಯ ಅವರ ಬ್ಯಾಕ್ -ಅಪ್ ಆಟಗಾರ ಎಂದೂ ಹೇಳಲಾಗುತ್ತಿದೆ.
ಆಲ್ರೌಂಡರ್ಗಳಾದ ಶಿವಂ ದುಬೆ ಮತ್ತು ವಿಜಯ್ ಶಂಕರ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರೀಕ್ಷಿತ ಗಮನ ಸೆಳೆಯುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಆಯ್ಕೆಗಾರರು ಬಾವಾ ಅವರನ್ನು ಪರಿಗಣಿಸಿದ್ದಾರೆ,. ಭಾರತವು ಹಲವು ಸ್ಪಿನ್ ಬೌಲಿಂಗ್ ಆಲ್ರೌಂಡರ್ಸ್ ಆಯ್ಕೆ ಹೊಂದಿದ್ದರೂ ಕೂಡ, ಉತ್ತಮ ಕೆಳ ಮಧ್ಯಮ ಕ್ರಮಾಂಕದ ಆಕ್ರಮಣಕಾರಿ ಬ್ಯಾಟರ್ ಹಾಗೂ ವೇಗದ ಬೌಲರ್‌ಗಳಿಲ್ಲ. ಬಾವಾ ಅವರ ಆಲ್‌ರೌಂಡ್ ಸಾಮರ್ಥ್ಯ ಪರಿಶೀಲಿಸಿದ ಬಳಿಕ ಹಿರಿಯರ ತಂಡಕ್ಕೆ ಆಯ್ಕೆ ಮಾಡಲು ಪರಿಗಣಿಸುವ ಸಾಧ್ಯತೆ ದಟ್ಟವಾಗಿದೆ.
ಭಾರತ ಎ ತಂಡ: ಪೃಥ್ವಿ ಶಾ, ಅಭಿಮನ್ಯು ಈಶ್ವರನ್, ರುತುರಾಜ್ ಗಾಯಕ್ವಾಡ್, ರಾಹುಲ್ ತ್ರಿಪಾಠಿ, ರಜತ್ ಪಾಟಿದಾರ್, ಸಂಜು ಸ್ಯಾಮ್ಸನ್ (ನಾಯಕ), ಕೆಎಸ್ ಭರತ್ (ವಿಕೆಟ್ ಕೀಪರ್), ಕುಲದೀಪ್ ಯಾದವ್, ಶಭಾಜ್ ಅಹ್ಮದ್, ರಾಹುಲ್ ಚಹರ್, ತಿಲಕ್ ವರ್ಮಾ, ಕುಲದೀಪ್ ಸೇನ್, ಶಾರ್ದೂಲ್ ಠಾಕೂರ್, ಉಮ್ರಾನ್ ಮಲಿಕ್, ನವದೀಪ್ ಸೈನಿ, ರಾಜ್ ಅಂಗದ್ ಬಾವಾ.
Advertisement