ಏಷ್ಯಾಕಪ್ 2022: ಶ್ರೀಲಂಕಾ ವಿರುದ್ಧ ಆಫ್ಘಾನಿಸ್ತಾನಕ್ಕೆ 8 ವಿಕೆಟ್ ಭರ್ಜರಿ ಜಯ
ಬಹು ನಿರೀಕ್ಷಿತ ಏಷ್ಯಾಕಪ್ 2022 ಟೂರ್ನಿ ಭರ್ಜರಿ ಆರಂಭವನ್ನೇ ಪಡೆದಿದ್ದು, ಅನುಭವಿ ಶ್ರೀಲಂಕಾ ತಂಡದ ವಿರುದ್ಧ ಕ್ರಿಕೆಟ್ ಶಿಶು ಆಫ್ಘಾನಿಸ್ತಾನ ತನ್ನ ಚೊಚ್ಚಲ ಪಂದ್ಯದಲ್ಲೇ ಭರ್ಜರಿ ಜಯ ದಾಖಲಿಸಿದೆ.
Published: 28th August 2022 12:53 AM | Last Updated: 28th August 2022 12:53 AM | A+A A-

ಆಫ್ಘಾನಿಸ್ತಾನಕ್ಕೆ ಜಯ
ದುಬೈ: ಬಹು ನಿರೀಕ್ಷಿತ ಏಷ್ಯಾಕಪ್ 2022 ಟೂರ್ನಿ ಭರ್ಜರಿ ಆರಂಭವನ್ನೇ ಪಡೆದಿದ್ದು, ಅನುಭವಿ ಶ್ರೀಲಂಕಾ ತಂಡದ ವಿರುದ್ಧ ಕ್ರಿಕೆಟ್ ಶಿಶು ಆಫ್ಘಾನಿಸ್ತಾನ ತನ್ನ ಚೊಚ್ಚಲ ಪಂದ್ಯದಲ್ಲೇ ಭರ್ಜರಿ ಜಯ ದಾಖಲಿಸಿದೆ.
ದುಬೈನ ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಶ್ರೀಲಂಕಾ ನೀಡಿದ 106 ರನ್ ಗಳ ಗುರಿಯನ್ನು ಆಫ್ಘಾನಿಸ್ತಾನ ತಂಡ ಕೇವಲ 10.1 ಓವರ್ ನಲ್ಲಿ 2 ವಿಕೆಟ್ ನಷ್ಟಕ್ಕೆ ಕಳೆದುಕೊಂಡು ಗುರಿ ತಲುಪಿ ಟೂರ್ನಿಯ ಚೊಚ್ಚಲ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ತಂಡ ಆಫ್ಘಾನಿಸ್ತಾನದ ಬೌಲರ್ ಗಳ ಸಾಂಘಿಕ ಹೋರಾಟಕ್ಕೆ ಪತರಗುಟ್ಟಿತು. ಆರಂಭದಿಂದಲೂ ನಿಯಮಿತವಾಗಿ ವಿಕೆಟ್ ಕಳೆದುಕೊಂಡ ಶ್ರೀಲಂಕಾ ತಂಡ ರನ್ ಗಳಿಸಲು ಪರದಾಡಿತು. ರಾಜಪಕ್ಸ (38) ಮತ್ತು ಕರುಣರತ್ನೆ (31) ಬಿಟ್ಟರೆ ಉಳಿದಾವ ಆಟಗಾರರೂ ಎರಡಂಕಿ ಮೊತ್ತ ದಾಟಲಿಲ್ಲ. ಪರಿಣಾಮ ಲಂಕಾ ತಂಡ 19.4 ಓವರ್ ನಲ್ಲಿ ಕೇವಲ 105ರನ್ ಗಳಿಸಿ ಆಲೌಟ್ ಆಯಿತು.
ಇದನ್ನೂ ಓದಿ: ಏಷ್ಯಾಕಪ್: ಒಂದು ವರ್ಷದ ನಂತರ ನಾಳೆ ಭಾರತ- ಪಾಕ್ ಮುಖಾಮುಖಿ, ಉಭಯ ನಾಯಕರ ಮಾತುಕತೆ
ಆಫ್ಧಾನಿಸ್ತಾನ ಪರ ಫಾರೂಕಿ 3 ವಿಕೆಟ್ ಪಡೆದರೆ, ಮುಜೀಬ್ ಮತ್ತು ನಬಿ ತಲಾ 2 ವಿಕೆಟ್ ಪಡೆದರು. ಲಂಕಾ ನೀಡಿದ 106 ರನ್ ಗಳ ಸಾಧಾರಣ ಗುರಿಯನ್ನು ಬೆನ್ನು ಹತ್ತಿದ ಆಫ್ಘಾನಿಸ್ತಾನ ತಂಡ ಆರಂಭಿಕ ಆಟಗಾರ ಹಜ್ರತುಲ್ಲಾ ಝಝೈ (ಅಜೇಯ 37) ಮತ್ತು ಗುರ್ಬಾಜ್ (40 ರನ್) ಅವರ ಅಘೋಘ ಬ್ಯಾಟಿಂಗ್ ನೆರವಿನಿಂದ ಕೇವಲ 10.1 ಓವರ್ ನಲ್ಲಿ 106ರನ್ ಚಚ್ಚಿ 8 ವಿಕೆಟ್ ಅಂತರದ ಭರ್ಜರಿ ಜಯ ಸಾಧಿಸಿತು. ಆಫ್ಘನ್ ಪರ 3 ವಿಕೆಟ್ ಪಡೆದ ಫಾರೂಕಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಈ ಗೆಲುವಿನ ಮೂಲಕ ಆಫ್ಘಾನಿಸ್ತಾನ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದು, ನಾಳಿನ ಹೈ ವೋಲ್ಟೇಜ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಎದುರಾಗಲಿವೆ.