3ನೇ ಏಕದಿನ: ಬಾಂಗ್ಲಾದೇಶ ವಿರುದ್ಧ ಭಾರತ ಭರ್ಜರಿ ಬ್ಯಾಟಿಂಗ್: ಒಂದೇ ಪಂದ್ಯದಲ್ಲಿ 7 ವಿಶ್ವ ದಾಖಲೆ ನಿರ್ಮಾಣ

ಬಾಂಗ್ಲಾದೇಶ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ಮೂಲಕ ಭಾರತ ತಂಡ 227 ರನ್ ಗಳ ಅಂತರದಲ್ಲಿ ಭರ್ಜರಿ ಜಯಸಾಧಿದ್ದು ಮಾತ್ರವಲ್ಲದೇ ಒಂದೇ ಪಂದ್ಯದಲ್ಲಿ 7 ವಿಶ್ವ ದಾಖಲೆಗಳನ್ನು ನಿರ್ಮಿಸಿದೆ.
ಟೀಂ ಇಂಡಿಯಾ ದಾಖಲೆ
ಟೀಂ ಇಂಡಿಯಾ ದಾಖಲೆ

ಚಟ್ಟೋಗ್ರಾಮ್: ಬಾಂಗ್ಲಾದೇಶ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ಮೂಲಕ ಭಾರತ ತಂಡ 227 ರನ್ ಗಳ ಅಂತರದಲ್ಲಿ ಭರ್ಜರಿ ಜಯಸಾಧಿದ್ದು ಮಾತ್ರವಲ್ಲದೇ ಒಂದೇ ಪಂದ್ಯದಲ್ಲಿ 7 ವಿಶ್ವ ದಾಖಲೆಗಳನ್ನು ನಿರ್ಮಿಸಿದೆ.

ಭಾರತ ನೀಡಿದ 410 ರನ್ ಗಳ ಬೃಹತ್ ಗುರಿ ಬೆನ್ನು ಹತ್ತಿದ ಬಾಂಗ್ಲಾದೇಶ ತಂಡ 34 ಓವರ್ ಗಳಲ್ಲಿ 182 ರನ್ ಗಳಿಗೆ ಆಲೌಟ್ ಆಯಿತು. ಆ ಮೂಲಕ 227ರನ್ ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದ ಜಯದ ಹೊರತಾಗಿಯೂ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 2-1 ಅಂತರದಲ್ಲಿ ಸರಣಿ ಸೋಲು ಕಂಡಿದೆ. ಇಂದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 409 ರನ್‌ ಗಳಿಸಿತ್ತು. ಇಶಾನ್‌ ಕಿಶನ್‌ ಅವರು ದ್ವಿಶತಕ (210) ಸಿಡಿಸಿದರೆ, ಕೊಹ್ಲಿ ಶತಕ (113) ಗಳಿಸಿದರು.

ಇನ್ನು ಈ ಪಂದ್ಯದಲ್ಲಿ ಕ್ರಿಕೆಟ್ ಜಗತ್ತಿನ 7 ವಿಶ್ವ ದಾಖಲೆಗಳು ನಿರ್ಮಾಣವಾಗಿವೆ.

1. ಚೊಚ್ಚಲ ಶತಕವನ್ನೇ ದ್ವಿಶತಕವಾಗಿ ಪರಿವರ್ತಿಸಿದ ಮೊದಲ ಬ್ಯಾಟರ್ ಇಶಾನ್ ಕಿಶನ್ 
ಇಶಾನ್ ಕಿಶನ್ ಈ ಪಂದ್ಯದಲ್ಲಿ ತಮ್ಮ ಚೊಚ್ಚಲ ಏಕದಿನ ಶತಕವನ್ನು ಸಿಡಿಸಿದರು ಮತ್ತು ಅಂತೆಯೇ ತಮ್ಮ ಚೊಚ್ಚಲ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸಿದ ಜಗತ್ತಿನ ಮೊದಲ ಬ್ಯಾಟರ್ ಎನಿಸಿಕೊಂಡರು. ಇಂತೆಯೇ ಇಶಾನ್ ಕಿಶನ್ ಚೊಚ್ಚಲ ಏಕದಿನ ಶತಕದಲ್ಲಿ ಭಾರತದ ಕ್ರಿಕೆಟ್ ದಂತಕಥೆ ಮಾಜಿ ನಾಯಕ ಕಪಿಲ್ ದೇವ್ ಅವರನ್ನು ಹಿಂದಿಕ್ಕಿದರು.

2. ವೇಗದ ದ್ವಿಶತಕ
ಇಶಾನ್ ಕಿಶನ್ ಕೇವಲ 128 ಎಸೆತಗಳಲ್ಲಿ ತಮ್ಮ ದ್ವಿಶತಕವನ್ನು ಪೂರ್ಣಗೊಳಿಸಿದ್ದು, ಇದು ಏಕದಿನ ಕ್ರಿಕೆಟ್ ನಲ್ಲಿ ದಾಖಲಾದ ವೇಗದ ದ್ವಿಶತಕವಾಗಿದೆ. ಈ ಹಿಂದೆ ಕ್ರಿಸ್ ಗೇಲ್ 2015ರ ವಿಶ್ವಕಪ್‌ನಲ್ಲಿ ಜಿಂಬಾಬ್ವೆ ವಿರುದ್ಧ 138 ಎಸೆತಗಳಲ್ಲಿ 200 ರನ್ ಗಳಿಸಿ ದಾಖಲೆ ಬರೆದಿದ್ದರು.

3. ವಿದೇಶದಲ್ಲಿ ಭಾರತೀಯ ಆಟಗಾರನೊಬ್ಬನ ಅತ್ಯಧಿಕ ಸ್ಕೋರ್
ಇನ್ನು ಇಶಾನ್ ಕಿಶನ್ ತಮ್ಮ ಭರ್ಜರಿ ಬ್ಯಾಟಿಂಗ್ ಮೂಲಕ ಮತ್ತೊಂದು ದಾಖಲೆ ನಿರ್ಮಿಸಿದ್ದು, ವಿದೇಶದಲ್ಲಿ ಭಾರತದ ಪರ ಗರಿಷ್ಠ ರನ್ ಗಳಿಕೆ ಸಾಧನೆ ಮಾಡಿದ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಈ ಹಿಂದೆ, ವೀರೇಂದ್ರ ಸೆಹ್ವಾಗ್ 2011 ರ ಏಕದಿನ ವಿಶ್ವಕಪ್‌ನಲ್ಲಿ ಮಿರ್‌ಪುರದಲ್ಲಿ 2011 ರಲ್ಲಿ ಬಾಂಗ್ಲಾದೇಶ ವಿರುದ್ಧ 175 ರನ್ ಗಳಿಸಿದ್ದರು. ಇದು ಭಾರತೀಯ ಆಟಗಾರ ವಿದೇಶದಲ್ಲಿ ಗಳಿಸಿದ್ದ ಗರಿಷ್ಠ ಸ್ಕೋರ್ ಆಗಿತ್ತು. 

4. ವಿದೇಶದಲ್ಲಿ ದ್ವಿಶತಕ ಗಳಿಸಿದ ಮೂರನೇ ಬ್ಯಾಟರ್ ಇಶಾನ್ ಕಿಶನ್
ಇನ್ನು ಜಾಗತಿಕ ಕ್ರಿಕೆಟ್ ನಲ್ಲಿ ವಿದೇಶಿ ಪಿಚ್ ನಲ್ಲಿ ದ್ವಿಶತಕ ಸಿಡಿಸಿದ ಮೂರನೇ ಆಟಗಾರ ಎಂಬ ಕೀರ್ತಿಗೆ ಇಶಾನ್ ಕಿಶನ್ ಭಾಜನರಾಗಿದ್ದಾರೆ. ಇದಕ್ಕೂ ಮೊದಲು ವಿಂಡೀಸ್ ದೈತ್ಯ ಕ್ರಿಸ್ ಗೇಯ್ಲ್ ಮತ್ತು ಪಾಕಿಸ್ತಾನ ಆಟಗಾರ ಫಖರ್ ಜಮಾನ್ ಈ ಸಾಧನೆ ಮಾಡಿದ್ದರು.

5. ಏಕದಿನ ಕ್ರಿಕೆಟ್ ನಲ್ಲಿ ದ್ವಿಶತಕ ಸಿಡಿಸಿದ 4ನೇ ಭಾರತೀಯ ಮತ್ತು ದ್ವಿಶತಕ ಗಳಿಸಿದ ಲಿಸ್ಟ್ A ನ 12 ನೇ ಭಾರತೀಯ ಆಟಗಾರ ಇಶಾನ್ ಕಿಶನ್
ಸಚಿನ್, ಸೆಹ್ವಾಗ್ ಮತ್ತು ರೋಹಿತ್ ಶರ್ಮಾ ಬಳಿಕ ಏಕದಿನ ಕ್ರಿಕೆಟ್ ನಲ್ಲಿ ದ್ವಿಶತಕ ಗಳಿಸಿದ ನಾಲ್ಕನೇ ಆಟಗಾರ ಎಂಬ ಕೀರ್ತಿಗೆ ಇಶಾನ್ ಕಿಶನ್ ಭಾಜನರಾಗಿದ್ದು, ಅಲ್ಲದೇ ದ್ವಿಶತಕ ಗಳಿಸಿದ ಲಿಸ್ಟ್ A ನ 12 ನೇ ಭಾರತೀಯ ಆಟಗಾರ ಕೀರ್ತಿಗೂ ಅವರು ಭಾಜನರಾಗಿದ್ದಾರೆ.

6. ಡಬಲ್ ಸೆಂಚುರಿ ಸಿಡಿಸಿದ ಕಿರಿಯ
ಇನ್ನು ದ್ವಿಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಕೀರ್ತಿಗೂ ಇಶಾನ್ ಕಿಶನ್ ಭಾಜನರಾಗಿದ್ದು, ಇಶಾನ್ ಕಿಶನ್, 25 ನೇ ವಯಸ್ಸಿನಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಅತ್ಯಂತ ಕಿರಿಯ ಕ್ರಿಕೆಟಿಗರಾಗಿದ್ದಾರೆ.

7. ಭಾರತಕ್ಕೆ ಮೂರನೇ ಅತ್ಯಧಿಕ ಜೊತೆಯಾಟ
ಇಂದಿನ ಪಂದ್ಯದಲ್ಲಿ ಇಶಾನ್ ಕಿಶನ್-ವಿರಾಟ್ ಕೊಹ್ಲಿ ಜೋಡಿ ಗಳಿಸಿದ ಈ 290ರನ್ ಗಳ ಜೊತೆಯಾಟ ಭಾರತದ ಪರ ದಾಖಲಾದ ಮೂರನೇ ಗರಿಷ್ಠ ಜೊತೆಯಾಟ ಎಂಬ ಕೀರ್ತಿಗೆ ಪಾತ್ರವಾಗಿದೆ. ಇದಕ್ಕೂ ಮೊದಲು ಭಾರತದ ಶ್ರೇಷ್ಠ ಆಟಗಾರರಾದ ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಅವರು 1999 ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ 331 ರನ್ ಜೊತೆಯಾಟವಾಡಿದ್ದರು. ಇದು ಭಾರತದ ಪರ ದಾಖಲಾದ ಅತಿದೊಡ್ಡ ಜೊತೆಯಾಟ ಎಂಬ ದಾಖಲೆ ನಿರ್ಮಿಸಿದೆ.

ಬಳಿಕ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಕೂಡ ಅದೇ ವರ್ಷ ಶ್ರೀಲಂಕಾ ವಿರುದ್ಧದ ಟೌಂಟನ್‌ನಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯದ ವೇಳೆ ಭಾರತಕ್ಕೆ ಎರಡನೇ ಗರಿಷ್ಠ ರನ್ ಜೊತೆಯಾಟ ಅಂದರೆ 318 ರನ್‌ಗಳನ್ನು ಕಲೆ ಹಾಕಿದ್ದರು. ಇದು ಭಾರತದ ಪರ ದಾಖಲಾದ 2ನೇ ಗರಿಷ್ಠ ಜೊತೆಯಾಟವಾಗಿದೆ.  ಇನ್ನು ಜಾಗತಿಕ ಕ್ರಿಕೆಟ್ ನಲ್ಲಿ ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಮತ್ತು ಮರ್ಲಾನ್ ಸ್ಯಾಮುಯೆಲ್ಸ್  ಜೋಡಿ 2015 ರಲ್ಲಿ ಜಿಂಬಾಬ್ವೆ ವಿರುದ್ಧದ ODI ವಿಶ್ವಕಪ್ ಪಂದ್ಯದಲ್ಲಿ 372 ರನ್ ಗಳ ಜೊತೆಯಾಟವಾಡಿದ್ದರು. ಇದು ಏಕದಿನ ಕ್ರಿಕೆಟ್‌ನಲ್ಲಿ ದಾಖಲಾದ ಅತಿದೊಡ್ಡ ಜೊತೆಯಾಟ ಎಂಬ ದಾಖಲೆಗೆ ಪಾತ್ರವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com