ಸೀಮಿತ ಓವರ್ ಗಳ ವೈಫಲ್ಯದ ನಡುವೆ ಟೆಸ್ಟ್‌ನಲ್ಲಿ ಎರಡು ದಾಖಲೆ ಬರೆದ ರಿಷಬ್ ಪಂತ್!

ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಟೀಕೆ ಎದುರಿಸಿದ್ದ ಟೀಂ ಇಂಡಿಯಾದ ಯುವ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ರಿಷಬ್ ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ.
ರಿಷಬ್ ಪಂತ್
ರಿಷಬ್ ಪಂತ್

ಚಿತ್ತಗಾಂಗ್‌(ಬಾಂಗ್ಲಾದೇಶ): ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಟೀಕೆ ಎದುರಿಸಿದ್ದ ಟೀಂ ಇಂಡಿಯಾದ ಯುವ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ರಿಷಬ್ ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಎರಡು ಟೆಸ್ಟ್‌ಗಳ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಪಂತ್ 45 ಎಸೆತಗಳಲ್ಲಿ 46 ರನ್ ಪೇರಿಸಿದರು. ಅಲ್ಲದೆ ಈ ವೇಳೆ ಪಂತ್ ಎರಡು ದಾಖಲೆಗಳನ್ನು ಬರೆದಿದ್ದಾರೆ.

ಏಕದಿನ ಹಾಗೂ ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ವಿಫಲರಾಗಿದ್ದ ಪಂತ್, ಟೆಸ್ಟ್ ಕ್ರಿಕೆಟ್ ನಲ್ಲಿ ಮತ್ತೆ ಫಾರ್ಮ್ ಪಡೆದುಕೊಂಡಿದ್ದಾರೆ. ಬಾಂಗ್ಲಾದೇಶ ವಿರುದ್ಧ ಭಾರತ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಭಾರತವು ಆರಂಭಿಕ ಆಘಾತ ಎದುರಿಸಿದ್ದು ಪ್ರಮುಖ ಮೂರು ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಈ ವೇಳೆ ಚೇತೇಶ್ವರ ಪೂಜಾರಾ ಮತ್ತು ರಿಷಬ್ ಪಂತ್ ತಾಳ್ಮೆಯ ಆಟವಾಡಿ ಉತ್ತಮ ಜೊತೆಯಾಟ ನೀಡಿದರು. 

50 ಸಿಕ್ಸರ್ ಬಾರಿಸಿದ ಪಟ್ಟಿಗೆ ಸೇರಿದ ಪಂತ್
ಮೈದಾನಕ್ಕೆ ಬಂದ ಪಂತ್ ತಮ್ಮದೇ ಶೈಲಿಯಲ್ಲಿ ಕ್ರಿಕೆಟ್ ಆಡಿದರು. ಪಂತ್ ಔಟಾಗುವ ಮುನ್ನ 6 ಬೌಂಡರಿ ಹಾಗೂ 2 ಸಿಕ್ಸರ್ ಬಾರಿಸಿದ್ದರು. ಪಂತ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ವೇಗವಾಗಿ 50 ಸಿಕ್ಸರ್ ಬಾರಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರಿಷಭ್ 54 ಇನ್ನಿಂಗ್ಸ್‌ಗಳಲ್ಲಿ 50 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇದಕ್ಕೂ ಮುನ್ನ ರೋಹಿತ್ ಶರ್ಮಾ 51 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು. ಇನ್ನು ರವೀಂದ್ರ ಜಡೇಜಾ 71, ಎಂಎಸ್ ಧೋನಿ 92 ಮತ್ತು ವೀರೇಂದ್ರ ಸೆಹ್ವಾಗ್ 92 ಇನ್ನಿಂಗ್ಸ್‌ಗಳಲ್ಲಿ 50 ಸಿಕ್ಸರ್ ಬಾರಿಸಿದ ದಾಖಲೆಯನ್ನು ಬರೆದಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 4000 ರನ್ ಪೂರೈಸಿದ ಪಂತ್
ಇದೇ ಸಮಯದಲ್ಲಿ 46 ರನ್‌ಗಳ ಇನ್ನಿಂಗ್ಸ್‌ನೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರಿಷಬ್ ಪಂತ್ 4000 ರನ್‌ಗಳನ್ನು ಪೂರೈಸಿದರು. ಪಂತ್ 32 ಟೆಸ್ಟ್ ಪಂದ್ಯಗಳ 54 ಇನ್ನಿಂಗ್ಸ್‌ಗಳಲ್ಲಿ 2169 ರನ್ ಗಳಿಸಿದ್ದಾರೆ. 30 ಏಕದಿನ ಪಂದ್ಯಗಳ 26 ಇನ್ನಿಂಗ್ಸ್‌ಗಳಲ್ಲಿ 865 ರನ್ ಮತ್ತು ಟಿ20ಯಲ್ಲಿ 987 ರನ್ ಗಳಿಸಿದ್ದಾರೆ. ರಿಷಬ್ ಟೆಸ್ಟ್ ನಲ್ಲಿ 5 ಶತಕ ಹಾಗೂ ಏಕದಿನದಲ್ಲಿ 1 ಶತಕ ಸಿಡಿಸಿದ್ದಾರೆ.

ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡು ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯ ಚಿತ್ತಗಾಂಗ್‌ನಲ್ಲಿ ನಡೆಯುತ್ತಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ, ಸುದ್ದಿ ಬರೆಯುವವರೆಗೂ 6 ವಿಕೆಟ್ ನಷ್ಟದಲ್ಲಿ 278 ರನ್ ಗಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com