ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಗೆ ಬಾಂಗ್ಲಾ ಸ್ಟಾರ್ ಕ್ರಿಕೆಟಿಗ ಮುಶ್ಫಿಕರ್ ರಹೀಂ ವಿದಾಯ
ಢಾಕಾ: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಗೆ ಬಾಂಗ್ಲಾದೇಶ ವಿಕೆಟ್ ಕೀಪರ್ ಬ್ಯಾಟರ್ ಮುಶ್ಫಿಕರ್ ರಹೀಂ ನಿವೃತ್ತಿ ಘೋಷಿಸಿದ್ದಾರೆ.
ದುಬೈನಲ್ಲಿ ನಡೆಯುತ್ತಿರುವ ಹಾಲಿ ಏಷ್ಯಾಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ತಂಡ ಸೂಪರ್ 4 ಹಂತಕ್ಕೇರುವಲ್ಲಿ ವಿಫಲವಾಗಿ ಟೂರ್ನಿಯಿಂದ ಹೊರ ಬಿದ್ದ ಬೆನ್ನಲ್ಲೇ ಮುಶ್ಫಿಕರ್ ರಹೀಂ ನಿವೃತ್ತಿ ಘೋಷಿಸಿದ್ದಾರೆ. ಅವರು ಹಾಲಿ ಟೂರ್ನಿಯ ಎರಡೂ ಪಂದ್ಯಗಳಲ್ಲಿ ಬಾಂಗ್ಲಾದೇಶ ತಂಡವನ್ನು ಪ್ರತಿನಿಧಿಸಿದ್ದರು. ಮಾತ್ರವಲ್ಲದೇ ತಂಡದ ಸ್ಟಾರ್ ಆಟಗಾರ ಕೂಡ ಆಗಿದ್ದರು. ಅವರ ದಿಢೀರ್ ನಿವೃತ್ತಿ ಕ್ರಿಕೆಟ್ ಜಗತ್ತಿಗೆ ಅಚ್ಚರಿ ಮೂಡಿಸಿದೆ.
ಇಂದು ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಮುಷ್ಫಿಕುರ್ ರಹೀಂ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಇದೇ ವೇಳೆ ತಾವು ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್‌ನಲ್ಲಿ ಮುಂದುವರೆಯುವುದಾಗಿಯೂ ಸ್ಪಷ್ಟಪಡಿಸಿದ್ದಾರೆ. ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್‌ನತ್ತ ಹೆಚ್ಚು ಗಮನ ಕೇಂದ್ರೀಕರಿಸುವ ಉದ್ದೇಶದಿಂದ ನಾನಿಂದು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನನ್ನ ವಿದಾಯವನ್ನು ಘೋಷಿಸುತ್ತಿದ್ದೇನೆ. ಅವಕಾಶ ಒದಗಿ ಬಂದರೆ ನಾನು ಫ್ರಾಂಚೈಸಿ ಲೀಗ್‌ಗಳಲ್ಲಿ ಪಾಲ್ಗೊಳ್ಳಲು ಲಭ್ಯವಿದ್ದೇನೆ. ಮುಂಬರುವ ದಿನಗಳಲ್ಲಿ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್‌ನಲ್ಲಿ ನನ್ನ ದೇಶವನ್ನು ಪ್ರತಿನಿಧಿಸಲು ಹೆಮ್ಮೆ ಪಡುತ್ತೇನೆ ಎಂದು ಮುಷ್ಫಿಕುರ್ ರಹೀಂ ಟ್ವೀಟ್ ಮಾಡಿದ್ದಾರೆ.
ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಮುಷ್ಫಿಕುರ್ ರಹೀಂ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದು, ಬಾಂಗ್ಲಾದೇಶ ಕ್ರಿಕೆಟ್ ತಂಡದ ಪಾಲಿಗೆ ಕೊಂಚ ಹಿನ್ನಡೆಯಾಗುವ ಸಾಧ್ಯತೆಯಿದೆ. ಕಳೆದ ಜುಲೈ ಬಳಿಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಬಾಂಗ್ಲಾದೇಶದ ಎರಡನೇ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ ಮುಷ್ಫಿಕುರ್ ರಹೀಂ. ಈ ಮೊದಲು ಕಳೆದ ಜುಲೈನಲ್ಲಿ ಆರಂಭಿಕ ಎಡಗೈ ಬ್ಯಾಟರ್ ತಮೀಮ್ ಇಕ್ಬಾಲ್ ಕೂಡಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು.
ಮುಷ್ಫಿಕುರ್ ರಹೀಂ, ಬಾಂಗ್ಲಾದೇಶ ಪರ 102 ಟಿ20 ಪಂದ್ಯಗಳನ್ನಾಡಿ 19.48ರ ಬ್ಯಾಟಿಂಗ್ ಸರಾಸರಿಯಲ್ಲಿ 1,500 ರನ್ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಚುಟುಕು ಕ್ರಿಕೆಟ್‌ನಲ್ಲಿ ಮುಷ್ಫಿಕುರ್ ರಹೀಂ ಅವರ ಗರಿಷ್ಠ ವೈಯುಕ್ತಿಕ ಸ್ಕೋರ್ 72 ರನ್‌ಗಳೆನಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ