Worldcup 2023: ಹುಟ್ಟುಹಬ್ಬದಂದೆ 49ನೇ ಶತಕ ಸಿಡಿಸಿ, ಸಚಿನ್ ರ ಅತ್ಯಧಿಕ ಶತಕಗಳ ದಾಖಲೆ ಸರಿಗಟ್ಟಿದ ಕೊಹ್ಲಿ

ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಏಕದಿನ ವೃತ್ತಿಜೀವನದ 49ನೇ ಶತಕವನ್ನು ಗಳಿಸಿದ್ದಾರೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಏಕದಿನ ವೃತ್ತಿಜೀವನದ 49ನೇ ಶತಕವನ್ನು ಗಳಿಸಿದ್ದಾರೆ. 

ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಆಫ್ರಿಕನ್ ತಂಡದ ವಿರುದ್ಧ ಸ್ಮರಣೀಯ ಇನ್ನಿಂಗ್ಸ್ ಆಡಿದರು. ಅಮೋಘ ಶತಕದ ಮೂಲಕ ಏಕದಿನದಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಕೊಹ್ಲಿ ಸರಿಗಟ್ಟಿದ್ದಾರೆ. ವಿಶೇಷವೆಂದರೆ ಅವರು ತಮ್ಮ 35ನೇ ಹುಟ್ಟುಹಬ್ಬದಂದು ಈ ಸಾಧನೆ ಮಾಡಿದ್ದಾರೆ.

ಸಚಿನ್‌ಗಿಂತ ಕಡಿಮೆ ಇನ್ನಿಂಗ್ಸ್‌ಗಳಲ್ಲಿ ಈ ದಾಖಲೆ
ಸಚಿನ್ ತಮ್ಮ ODI ವೃತ್ತಿಜೀವನದಲ್ಲಿ 463 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ 452 ಇನ್ನಿಂಗ್ಸ್‌ಗಳಲ್ಲಿ 18,426 ರನ್‌ ಸಿಡಿಸಿದ್ದಾರೆ. ಅವರ ಸರಾಸರಿ 44.83 ಆಗಿತ್ತು. ಸಚಿನ್ 49 ಶತಕ ಮತ್ತು 96 ಅರ್ಧ ಶತಕ ಗಳಿಸಿದ್ದಾರೆ. ವಿರಾಟ್ ತಮ್ಮ 277ನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದರು. ದಕ್ಷಿಣ ಆಫ್ರಿಕಾ ವಿರುದ್ಧ 49ನೇ ಓವರ್‌ನಲ್ಲಿ ಕೊಹ್ಲಿ 49ನೇ ಶತಕ ಪೂರೈಸಿದರು.

ಅಗ್ರ-5ರಲ್ಲಿ ಮೂವರು ಭಾರತೀಯರು
ತೆಂಡೂಲ್ಕರ್ ಮತ್ತು ಕೊಹ್ಲಿ ನಂತರ ಅತಿ ಹೆಚ್ಚು ಏಕದಿನ ಶತಕ ಗಳಿಸಿದವರಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ಸೇರಿದ್ದಾರೆ. ರೋಹಿತ್ 259 ಪಂದ್ಯಗಳ 251 ಇನ್ನಿಂಗ್ಸ್‌ಗಳಲ್ಲಿ 31 ಶತಕಗಳನ್ನು ಗಳಿಸಿದ್ದಾರೆ. ಅವರ ನಂತರ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಇದ್ದಾರೆ. ಪಾಂಟಿಂಗ್ 375 ಪಂದ್ಯಗಳನ್ನು ಆಡಿದ್ದಾರೆ. ಅವರು 365 ಇನ್ನಿಂಗ್ಸ್‌ಗಳಲ್ಲಿ 30 ಶತಕಗಳನ್ನು ಗಳಿಸಿದ್ದಾರೆ. ಇವರಿಬ್ಬರ ನಂತರ ಶ್ರೀಲಂಕಾದ ಮಾಜಿ ನಾಯಕ ಸನತ್ ಜಯಸೂರ್ಯ ಐದನೇ ಸ್ಥಾನದಲ್ಲಿದ್ದಾರೆ. ಅವರು 445 ಪಂದ್ಯಗಳ 433 ಇನ್ನಿಂಗ್ಸ್‌ಗಳಲ್ಲಿ 28 ಶತಕಗಳನ್ನು ಗಳಿಸಿದ್ದಾರೆ.

ಕೊಹ್ಲಿಗೆ ತೆಂಡೂಲ್ಕರ್ ಅಭಿನಂದನೆ
49 ಶತಕಗಳ ದಾಖಲೆಯನ್ನು ಸರಿಗಟ್ಟಿದ ವಿರಾಟ್ ಕೊಹ್ಲಿಯನ್ನು ಸಚಿನ್ ತೆಂಡೂಲ್ಕರ್ ಹೊಗಳಿದ್ದಾರೆ. ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಅವರು, 'ವಿರಾಟ್ ನೀವು ಚೆನ್ನಾಗಿ ಆಡಿದ್ದೀರಿ. 49 ರಿಂದ 50 ಶತಕ ತಲುಪಲು ನನಗೆ 365 ದಿನಗಳು ಬೇಕಾಯಿತು. ಮುಂದಿನ ದಿನಗಳಲ್ಲಿ ನೀವು 49 ರಿಂದ 50ಕ್ಕೆ ತಲುಪುತ್ತೀರಿ ಮತ್ತು ನನ್ನ ದಾಖಲೆಯನ್ನು ಮುರಿಯುತ್ತೀರಿ ಎಂದು ನಾನು ಭಾವಿಸುತ್ತೇನೆ. ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.

ವಿರಾಟ್ ಹುಟ್ಟುಹಬ್ಬದ ದಿನದಂದೇ ಶತಕ
ಈ ವಿಶ್ವಕಪ್‌ನಲ್ಲಿ ಇದುವರೆಗೆ ವಿರಾಟ್ 85,55*,16, 103*, 95, 0, 88 ಮತ್ತು 101* ರನ್‌ಗಳ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಇಂದು ಶತಕ ಬಾರಿಸುವ ಮೂಲಕ ಕೊಹ್ಲಿ ಏಕದಿನದಲ್ಲಿ ಹುಟ್ಟುಹಬ್ಬದಂದು ಶತಕ ಸಿಡಿಸಿದ ಏಳನೇ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಟಾಮ್ ಲ್ಯಾಥಮ್, ರಾಸ್ ಟೇಲರ್, ಸನತ್ ಜಯಸೂರ್ಯ, ಮಿಚೆಲ್ ಮಾರ್ಷ್, ಸಚಿನ್ ತೆಂಡೂಲ್ಕರ್ ಮತ್ತು ವಿನೋದ್ ಕಾಂಬ್ಳಿ ಈ ಸಾಧನೆ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com