ಇಷ್ಟು ಕೆಳಮಟ್ಟಕ್ಕಿಳಿದ ಮತ್ತೊಂದು ತಂಡವನ್ನು ನೋಡಿಲ್ಲ.. ಇನ್ನು ಗೌರವ ಕೊಡಲ್ಲ; ಬಾಂಗ್ಲಾದೇಶದ ವಿರುದ್ಧ ಏಂಜಲೋ ಮ್ಯಾಥ್ಯೂಸ್ ಕಿಡಿ

ಇಷ್ಟು ಕೆಳಮಟ್ಟಕ್ಕಿಳಿದ ಮತ್ತೊಂದು ತಂಡವನ್ನು ನೋಡಿಲ್ಲ.. ಅವರಿಗೆ ಇನ್ನು ಗೌರವ ಕೊಡಲ್ಲ ಎಂದು ಹೇಳುವ ಮೂಲಕ ಬಾಂಗ್ಲಾದೇಶದ ವಿರುದ್ಧ ಶ್ರೀಲಂಕಾ ಆಟಗಾರ ಏಂಜಲೋ ಮ್ಯಾಥ್ಯೂಸ್ ಕಿಡಿಕಾರಿದ್ದಾರೆ.
ಏಂಜಲೋ ಮ್ಯಾಥ್ಯೂಸ್ -ಶಕೀಬ್ ಅಲ್ ಹಸನ್ ಕಿತ್ತಾಟ
ಏಂಜಲೋ ಮ್ಯಾಥ್ಯೂಸ್ -ಶಕೀಬ್ ಅಲ್ ಹಸನ್ ಕಿತ್ತಾಟ
Updated on

ನವದೆಹಲಿ: ಇಷ್ಟು ಕೆಳಮಟ್ಟಕ್ಕಿಳಿದ ಮತ್ತೊಂದು ತಂಡವನ್ನು ನೋಡಿಲ್ಲ.. ಅವರಿಗೆ ಇನ್ನು ಗೌರವ ಕೊಡಲ್ಲ ಎಂದು ಹೇಳುವ ಮೂಲಕ ಬಾಂಗ್ಲಾದೇಶದ ವಿರುದ್ಧ ಶ್ರೀಲಂಕಾ ಆಟಗಾರ ಏಂಜಲೋ ಮ್ಯಾಥ್ಯೂಸ್ ಕಿಡಿಕಾರಿದ್ದಾರೆ.

ನಿನ್ನೆ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಶ್ರೀಲಂಕಾ ಮತ್ತು ಬಾಂಗ್ಲಾದೇಶ ಪಂದ್ಯದ ನಡುವೆ ದೊಡ್ಡ ಹೈಡ್ರಾಮಾವೇ ನಡೆದಿದ್ದು, ಬಾಂಗ್ಲಾದೇಶ ತಂಡ ಶ್ರೀಲಂಕಾ ಆಟಗಾರ ಏಂಜಲೋ ಮ್ಯಾಥ್ಯೂಸ್ ರನ್ನು ಟೈಮ್ಡ್ ಔಟ್ ಮಾಡುವ ಮೂಲಕ 146 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಆಟಗಾರನೊಬ್ಬನನ್ನು ಟೈಮ್ಡ್ ಔಟ್ ಮಾಡಿದೆ. ಲಂಕಾ ಬ್ಯಾಟಿಂಗ್ ಇನ್ನಿಂಗ್ಸ್​ನ 25ನೇ ಓವರ್‌ನ ಎರಡನೇ ಎಸೆತದಲ್ಲಿ ಸಮರವಿಕ್ರಮ ಔಟಾದರು. ಆ ಬಳಿಕ ಕ್ರೀಸ್​ಗಿಳಿದ ಮ್ಯಾಥ್ಯೂಸ್ ಚೆಂಡನ್ನು ಎದುರಿಸಲು ಸಾಕಷ್ಟು ಸಮಯ ತೆಗೆದುಕೊಂಡರು. ಇದನ್ನು ಗಮನಿಸಿದ ಬಾಂಗ್ಲಾ ನಾಯಕ ಶಕೀಬ್ ಅಲ್ ಹಸನ್, ಮ್ಯಾಥ್ಯೂಸ್ ವಿರುದ್ಧ ಅಂಪೈರ್ ಬಳಿ ಟೈಮ್ ಔಟ್ ಮನವಿ ಮಾಡಿದರು. ಬಾಂಗ್ಲಾ ನಾಯಕನ ಮನವಿ ಪುರಸ್ಕರಿಸಿದ ಆನ್​ಪೀಲ್ಡ್ ಅಂಪೈರ್, ಮ್ಯಾಥ್ಯೂಸ್ ಔಟೆಂದು ತೀರ್ಪು ನೀಡಿದರು.

ನಿಯಮಗಳ ಪ್ರಕಾರ, ಒಬ್ಬ ಬ್ಯಾಟರ್ ಔಟಾದ ಬಳಿಕ ಹೊಸ ಬ್ಯಾಟ್ಸ್‌ಮನ್ ಎರಡು ನಿಮಿಷಗಳಲ್ಲಿ ಚೆಂಡನ್ನು ಎದುರಿಸಲು ಸಿದ್ಧರಾಗಿರಬೇಕು. ಆದರೆ ಮ್ಯಾಥ್ಯೂಸ್‌ಗೆ ಹಾಗೆ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಅಂಪೈರ್ ಔಟ್ ನೀಡಬೇಕಾಯಿತು. ಒಂದು ವೇಳೆ ಬಾಂಗ್ಲಾದೇಶದ ನಾಯಕ ಹಸನ್, ಇಲ್ಲಿ ಮ್ಯಾಥ್ಯೂಸ್ ಔಟ್​ಗೆ ಮನವಿ ಮಾಡದಿದ್ದರೆ ಮ್ಯಾಥ್ಯೂಸ್ ಔಟಾಗುತ್ತಿರಲಿಲ್ಲ. ಇದಾದ ಬಳಿಕ ಬಾಂಗ್ಲಾ-ಲಂಕಾ ನಡುವಣ ಪಂದ್ಯ ಮತ್ತಷ್ಟು ಕಾವೇರಿತು. ಬಾಂಗ್ಲಾ ಬ್ಯಾಟಿಂಗ್ ಮಾಡುವ ವೇಳೆ ಶಕಿಬ್ ಅವರು ಮ್ಯಾಥ್ಯೂಸ್ ಬೌಲಿಂಗ್​ನಲ್ಲೇ ಔಟ್ ಆದರು. ಈ ಸಂದರ್ಭ ಮ್ಯಾಥ್ಯೂಸ್ ‘ನಿನ್ ಟೈಮ್ ಆಯ್ತು’ ಎಂಬಂತೆ ಸನ್ನೆ ಮಾಡಿ ಪೆವಿಲಿಯನ್​​ಗೆ ಹೋಗು ಎಂದರು. ಪಂದ್ಯ ಮುಗಿದ ಬಳಿಕ ಲಂಕಾ ಆಟಗಾರರು ಬಾಂಗ್ಲಾ ಆಟಗಾರರ ಜೊತೆ ಹಸ್ತಲಾಘವ ಕೂಡ ಮಾಡಲಿಲ್ಲ.

ಪಂದ್ಯದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಮ್ಯಾಥ್ಯೂಸ್ ಬಾಂಗ್ಲಾದ ನಡೆಯನ್ನು ಖಂಡಿಸಿದ್ದಾರೆ. ”ನಾನೇನೂ ತಪ್ಪು ಮಾಡಿಲ್ಲ. ನಾನು ತಯಾರಾಗಲು ಎರಡು ನಿಮಿಷಗಳ ಕಾಲಾವಕಾಶವಿತ್ತು, ಆದರೆ ಹೆಲ್ಮೆಟ್​ನಲ್ಲಿ ತೊಂದರೆಯಾಗಿತ್ತು. ಇವರಿಗೆ ಕಾಮನ್ಸೆನ್ಸ್ ಎಂಬುದು ಇಲ್ಲ. ಇದು ಶಕೀಬ್ ಮತ್ತು ಬಾಂಗ್ಲಾದೇಶದಿಂದ ಅವಮಾನಕರವಾಗಿದೆ” ಎಂದು ಮ್ಯಾಥ್ಯೂಸ್ ಹೇಳಿದ್ದಾರೆ.

”ಇಷ್ಟು ಕೆಳ ಮಟ್ಟಕ್ಕೆ ಇಳಿದು ಕ್ರಿಕೆಟ್ ಆಡುವುದು ತಪ್ಪು. ನಿಯಮಗಳ ಪ್ರಕಾರ, ನಾನು ಎರಡು ನಿಮಿಷಗಳಲ್ಲಿ ತಯಾರಾಗಬೇಕು, ನನಗೆ ಅಲ್ಲಿ ಇನ್ನೂ ಐದು ಸೆಕೆಂಡುಗಳು ಕಾಲಾವಕಾಶವಿತ್ತು. ಈರೀತಿಯ ಘಟನೆ ಅವಮಾನಕರವಾಗಿದೆ. ನಮ್ಮನ್ನು ಗೌರವಿಸುವ ಜನರನ್ನಷ್ಟೆ ನಾವೂ ಗೌರವಿಸುತ್ತೇವೆ. ನಾವೆಲ್ಲರೂ ಉತ್ತಮವಾಗಿ ಕ್ರಿಕೆಟ್ ಆಡಲು ಬಂದಿದ್ದೇವೆ. ನೀವು ಇದಕ್ಕೆ ಗೌರವ ಕೊಡದಿದ್ದರೆ ಇನ್ನೇನು ಹೇಳಲು ಸಾಧ್ಯ. ಈವರೆಗೂ ನಾನು ಶಕೀಬ್ ಮತ್ತು ಬಾಂಗ್ಲಾದೇಶ ತಂಡದ ಬಗ್ಗೆ ಗೌರವವನ್ನು ಹೊಂದಿದ್ದೆ. ಆದರೀಗ ಆ ಗೌರವವೆಲ್ಲ ಹೋಗಿದೆ. ನಾವೆಲ್ಲರೂ ಗೆಲ್ಲಲು ಆಡುತ್ತೇವೆ, ಅದು ನಿಯಮದೊಳಗೆ ಇದ್ದರೆ ಉತ್ತಮ. ಆದರೆ ಎರಡು ನಿಮಿಷಗಳಲ್ಲಿ ನಾನು ಅಲ್ಲಿದ್ದೆ… ನಮ್ಮ ಬಳಿ ವಿಡಿಯೋ ಸಾಕ್ಷ್ಯವಿದೆ. ಇದನ್ನು ನಾವು ಹೊರಗಡೆ ತರುತ್ತೇವೆ. ನಾನು ಸಾಕ್ಷಿಯೊಂದಿಗೆ ಮಾತನಾಡುತ್ತಿದ್ದೇನೆ ಎಂದು ಮ್ಯಾಥ್ಯೂಸ್ ಹೇಳಿದ್ದಾರೆ.

ಅಂತೆಯೇ 'ನಾವು ಆಟಗಾರರ ಸುರಕ್ಷತೆಯ ಬಗ್ಗೆ ಮಾತನಾಡುತ್ತೇವೆ. ಹೀಗಾದಾಗ, ನಾನು ಹೆಲ್ಮೆಟ್ ಇಲ್ಲದೆ ಆಡಬೇಕೇ? ಅನುಮಾನವಿದ್ದರೆ ಸ್ವತಃ ಅಂಪೈರ್ ಇದನ್ನು ಪರೀಕ್ಷಿಸಬಹುದಿತ್ತು. ನನ್ನ 15 ವರ್ಷಗಳ ಕ್ರಿಕೆಟ್ ಜೀವನದಲ್ಲಿ, ಈ ಮಟ್ಟಕ್ಕೆ ಇಳಿದ ತಂಡವನ್ನು ನಾನು ನೋಡಿಲ್ಲ. ನಾನು ಬ್ಯಾಟಿಂಗ್ ಮಾಡಿದರೆ ಪಂದ್ಯ ಗೆಲ್ಲುತ್ತಿತ್ತು ಎಂದು ಹೇಳುತ್ತಿಲ್ಲ. ಆದರೆ, ನಾವು ಕಾಮನ್ಸೆನ್ಸ್ ಹೊಂದಿರಬೇಕು, ಇದು ತೀರಾ ಕಳಪೆಯಾಗಿದೆ. ಬಾಂಗ್ಲಾದೇಶ ಬಿಟ್ಟು ಬೇರೆ ಯಾವುದೇ ತಂಡವು ಈರೀತಿ ಮಾಡುತ್ತದೆ ಎಂದು ನಾನು ಭಾವಿಸುವುದಿಲ್ಲ.

ನಾನು ಅಲ್ಲಿ ಬೇಕೆಂದು ಸಮಯ ವ್ಯರ್ಥ ಮಾಡಲಿಲ್ಲ ಎಂಬುದು ಶಕೀಬ್‌ ಅವರಿಗೆ ಕೂಡ ತಿಳಿದಿತ್ತು. ಇದು ಸಾಮಾನ್ಯ ವಿಷಯ ಆಗಿರುವುದರಿಂದ ಅಂಪೈರ್ ಬಳಿ ಹೋಗದೆ ಮಾನವೀಯತೆ ಮೆರೆಯಬಹುದಿತ್ತು. ಆದರೆ ಅವರು ಬೇರೆ ದಾರಿ ಹಿಡಿದರು, ಎಂದು ಮ್ಯಾಥ್ಯೂಸ್ ಕಿಡಿಕಾರಿದ್ದಾರೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com