ICC World Cup-ರೋಚಕ ಘಟ್ಟಕ್ಕೆ ವಿಶ್ವಕಪ್: ವಾಂಖೆಡೆ ಸ್ಟೇಡಿಯಂನಲ್ಲಿ ಇಂದು ಭಾರತ-ನ್ಯೂಜಿಲ್ಯಾಂಡ್ ಹಣಾಹಣಿ, ಕ್ರಿಕೆಟ್ ಪ್ರೇಮಿಗಳಿಂದ ಪ್ರಾರ್ಥನೆ, ಪೂಜೆ

ವಿಶ್ವಕಪ್ ಕ್ರಿಕೆಟ್ ನ ಹಣಾಹಣಿ ರೋಚಕ ಘಟ್ಟಕ್ಕೆ ತಲುಪಿದೆ. ಇಂದು ಬುಧವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ 2023ರ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಸೆಣಸಾಡಲಿದೆ. ಈ ಪಂದ್ಯವು ಭಾರತೀಯ ಕಾಲಮಾನ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ.
ಭಾರತ-ನ್ಯೂಜಿಲ್ಯಾಂಡ್ ಸೆಮಿಫೈನಲ್ ಪಂದ್ಯ
ಭಾರತ-ನ್ಯೂಜಿಲ್ಯಾಂಡ್ ಸೆಮಿಫೈನಲ್ ಪಂದ್ಯ
Updated on

ವಾಂಖೆಡೆ(ಮುಂಬೈ): ವಿಶ್ವಕಪ್ ಕ್ರಿಕೆಟ್ ನ ಹಣಾಹಣಿ ರೋಚಕ ಘಟ್ಟಕ್ಕೆ ತಲುಪಿದೆ. ಇಂದು ಬುಧವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ 2023ರ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಸೆಣಸಾಡಲಿದೆ. ಈ ಪಂದ್ಯವು ಭಾರತೀಯ ಕಾಲಮಾನ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ. ಬೆಳಗ್ಗೆಯೇ ಕ್ರಿಕೆಟ್ ಪ್ರೇಮಿಗಳ ದಂಡು ಭಾರತದ ತ್ರಿವರ್ಣ ಧ್ವಜವನ್ನು ಹಿಡಿದುಕೊಂಡು ಭಾರತ ತಂಡದ ಪರ ಘೋಷಣೆ ಕೂಗುತ್ತಾ ವಾಂಖೆಡೆ ಕ್ರೀಡಾಂಗಣಕ್ಕೆ ದಾಂಗುಡಿಯಿಡುತ್ತಿದ್ದಾರೆ. 

ಭಾರತಕ್ಕೆ ಸಿಗಲಿದೆಯೇ ದೀಪಾವಳಿ ಹಬ್ಬದ ಸಿಹಿ?: ಭಾರತಕ್ಕೆ ಈ ಮೈದಾನ ಸೆಮೀಸ್‌‌ ಹಣಾಹಣಿಯಲ್ಲಿ ದೊಡ್ಡ ತಲೆನೋವಾಗಿದೆ. ಏಕೆಂದರೆ ಈವರೆಗೆ ಈ ಮೈದಾನದಲ್ಲಿ ಆಡಿದ ಎಲ್ಲಾ ಸೆಮಿ ಫೈನಲ್‌ ಪಂದ್ಯವನ್ನು ಭಾರತ ಸೋತಿದೆ. 1987ರಲ್ಲಿ ನಡೆದ ವಿಶ್ವಕಪ್‌ ಭಾರತದಲ್ಲಿ ನಡೆದಿತ್ತು. ಅಂದು ಭಾರತ ಉತ್ತಮ ಪ್ರದರ್ಶನ ನೀಡಿ ಸೆಮೀಸ್‌ಗೆ ಲಗ್ಗೆಯಿಟ್ಟಿತ್ತು. ಆದರೆ, ಸೆಮಿಸ್‌ನಲ್ಲಿ ಇಂಗ್ಲೆಂಡ್‌‌ ವಿರುದ್ಧ ಆಡಿದ ಪಂದ್ಯದಲ್ಲಿ 35 ರನ್‌ ಸೋಲನ್ನಪ್ಪಿತು. ಈ ಪಂದ್ಯ ನಡೆದದ್ದು, ವಾಂಖೆಡೆ ಮೈದಾನದಲ್ಲಿ.

1989ರಲ್ಲಿ ನಡೆದ ನೆಹರು ಕಪ್‌ನಲ್ಲಿಯೂ ಭಾರತ ಸೆಮೀಸ್‌ಗೆ ಎಂಟ್ರಿಕೊಟ್ಟಿತ್ತು. ಆದರೆ ಆ ವೇಳೆ ವೆಸ್ಟ್ ಇಂಡಿಸ್‌ 8 ವಿಕೆಟ್‌ನಿಂದ ಭಾರತವನ್ನು ಸೋಲಿಸಿತ್ತು. ಇದು ಮಾತ್ರವಲ್ಲದೇ 2016ರ ಟಿ20 ವಿಶ್ವಕಪ್‌ ಸೆಮೀಸ್‌ನಲ್ಲಿ ವೆಸ್ಟ್‌ ಇಂಡಿಸ್‌ ಭಾರತವನ್ನು ಸೋಲಿಸಿತ್ತು.ಹೀಗಾಗಿ ಭಾರತ ವಾಂಖೆಡೆ ಮೈದಾನದಲ್ಲಿ ಆಡಿದ ಮೂರು ಸೆಮಿ ಫೈನಲ್‌ ಪಂದ್ಯವನ್ನೂ ಸಹ ಸೋತಿದೆ. 

ಇದೀಗ ಕಿವೀಸ್‌ ವಿರುದ್ಧ ಭಾರತ ಮತ್ತೆ ಇದೇ ಮೈದಾನದಲ್ಲಿ ಸೆಮಿ ಫೈನಲ್‌ ಪಂದ್ಯ ಆಡಲಿದೆ. ಆದರೆ ಈ ಬಾರಿ ಭಾರತ ಗೆಲ್ಲುವ ಎಲ್ಲಾ ಲಕ್ಷಣಗಳೂ ಎದ್ದುಕಾಣುತ್ತಿದೆ.ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ಮೊದಲು ಬೌಲಿಂಗ್‌ ಆಯ್ಕೆ ಮಾಡುವ ಸಾದ್ಯತೆ ಇದೆ.

ಗೆದ್ದರೆ ಫೈನಲ್ ಗೆ ಸೋತರೆ ಮನೆಗೆ: ಐಸಿಸಿ ಏಕದಿನ ವಿಶ್ವಕಪ್ 2023 ರ ಗುಂಪು ಹಂತದ 9 ಪಂದ್ಯಗಳಲ್ಲಿ ಒಂಬತ್ತನ್ನೂ ಗೆದ್ದು ಬೀಗಿರುವ ಭಾರತ ಕ್ರಿಕೆಟ್ ತಂಡಕ್ಕೆ ಇಂದು ನಿಜವಾದ ಪರೀಕ್ಷೆ ಪ್ರಾರಂಭ. ಇಂದಿನ ವಾಂಖೆಡೆ ಕ್ರೀಡಾಂಗಣ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಭಾರತಕ್ಕೆ ಇದೊಂದು ಸೇಡಿನ ಪಂದ್ಯ ಎಂದು ಕೂಡ ಹೇಳಬಹುದು. ಕಿವೀಸ್ ವಿರುದ್ಧ 2019 ರ ವಿಶ್ವಕಪ್ ಸೆಮಿ-ಫೈನಲ್​ನಲ್ಲಿ ಭಾರತ ಸೋತು ಟೂರ್ನಿಯಿಂದ ನಿರ್ಗಮಿಸಿತ್ತು. ಈಗ ಮತ್ತೊಮ್ಮೆ ಉಭಯ ತಂಡಗಳು ಸೆಮಿಫೈನಲ್​ನಲ್ಲಿ ಸೆಣೆಸಾಟ ನಡೆಸಲು ಸಜ್ಜಾಗುತ್ತಿದೆ.

ಭಾರತ ಗೆಲುವಿಗೆ ಹಲವೆಡೆ ಪೂಜೆ, ಪ್ರಾರ್ಥನೆ: ದೀಪಾವಳಿ ಹಬ್ಬ ಮುಗಿದ ಬೆನ್ನಲ್ಲೇ ವಿಶ್ವಕಪ್ ಪಂದ್ಯ ನಡೆಯುತ್ತಿದ್ದು, ಇಂದು ದೇಶದ ಹಲವು ಕಡೆಗಳಲ್ಲಿ ಭಾರತ ತಂಡದ ಗೆಲುವಿಗೆ ಕ್ರಿಕೆಟ್ ಪ್ರೇಮಿಗಳು ಬೆಳಗ್ಗೆಯೇ ದೇವಾಲಯಗಳಲ್ಲಿ ಪೂಜೆ, ಹರಕೆ ಸಲ್ಲಿಸುತ್ತಿರುವುದು ಕಂಡುಬಂತು. 

ಇಂದು ಉತ್ತರ ಭಾರತೀಯರಿಗೆ ಬಾಯಿ ದೂಜ್ ಅಂದರೆ ದೀಪಾವಳಿ ಮುಗಿದ ನಂತರ ಸೋದರ-ಸೋದರಿಯರ ಹಬ್ಬ. ಹೀಗಾಗಿ ದೇವಸ್ಥಾನಗಳಲ್ಲಿ ಭಕ್ತರ ದಂಡು, ಪ್ರಾರ್ಥನೆ, ಪೂಜೆಗಳು ಹೆಚ್ಚಾಗಿವೆ. 

ಉಭಯ ತಂಡಗಳ ಆಟಗಾರರು: ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ಉಪನಾಯಕ), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಪ್ರಸಿದ್ಧ್ ಕೃಷ್ಣ.

ನ್ಯೂಜಿಲ್ಯಾಂಡ್ ತಂಡ: ಕೇನ್ ವಿಲಿಯಮ್ಸನ್ (ನಾಯಕ), ಟ್ರೆಂಟ್ ಬೌಲ್ಟ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೇ, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಟಾಮ್ ಲೇಥಮ್, ಡೇರಿಲ್ ಮಿಚೆಲ್, ಜೇಮ್ಸ್ ನೀಶಮ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ವಿಲ್ ಯಂಗ್ , ಕೈಲ್ ಜಾಮಿಸನ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com