ICC Cricket World Cup 2023: India vs Australia ಫೈನಲ್ ಪಂದ್ಯಕ್ಕೂ ಮುನ್ನ ವಾಯುಪಡೆಯಿಂದ ವಿಶೇಷ ಏರ್ ಷೋ!

ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯಕ್ಕೂ ಮುನ್ನ ನರೇಂದ್ರ ಮೋದಿ ಮೈದಾನದಲ್ಲಿ ಭಾರತೀಯ ವಾಯು ಸೇನೆ ವಿಶೇಷ ಏರ್ ಷೋ ಹಮ್ಮಿಕೊಂಡಿದೆ.
ನರೇಂದ್ರ ಮೋದಿ ಮೈದಾನದಲ್ಲಿ ವಾಯುಪಡೆಯಿಂದ ಏರ್ ಷೋ ಅಭ್ಯಾಸ
ನರೇಂದ್ರ ಮೋದಿ ಮೈದಾನದಲ್ಲಿ ವಾಯುಪಡೆಯಿಂದ ಏರ್ ಷೋ ಅಭ್ಯಾಸ

ಅಹ್ಮದಾಬಾದ್: ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯಕ್ಕೂ ಮುನ್ನ ನರೇಂದ್ರ ಮೋದಿ ಮೈದಾನದಲ್ಲಿ ಭಾರತೀಯ ವಾಯು ಸೇನೆ ವಿಶೇಷ ಏರ್ ಷೋ ಹಮ್ಮಿಕೊಂಡಿದೆ.

ಹೌದು.. ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಪ್ರಶಸ್ತಿಗಾಗಿ ಸೆಣಸಲಿದ್ದು, ಈ ರೋಚಕ ಫೈನಲ್ ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ಅಂದರೆ ಇದೇ ನವೆಂಬರ್ 19 ನಡೆಯಲಿದೆ. ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಆರಂಭಕ್ಕೂ ಮುನ್ನ ಭಾರತೀಯ ವಾಯುಪಡೆಯು ವಿಶೇಷ ವೈಮಾನಿಕ ಪ್ರದರ್ಶನವನ್ನು ನೀಡಲಿದ್ದು, ವಾಯುಪಡೆಯ ಸೂರ್ಯಕಿರಣ್ ತಂಡದ ನೇತೃತ್ವದಲ್ಲಿ ವೈಮಾನಿಕ ಸಾಹಸ ಪ್ರದರ್ಶನ ನಡೆಯಲಿದೆ. ಈ ನಿಟ್ಟಿನಲ್ಲಿ ಮೈದಾನದ ಮೇಲೆ ಪೂರ್ವಭ್ಯಾಸ ಕಸರತ್ತು ಭರದಿಂದ ಸಾಗುತ್ತಿದೆ. ಶುಕ್ರವಾರ ಮತ್ತು ಶನಿವಾರ ಮಧ್ಯಾಹ್ನ 1:30ಕ್ಕೆ ಸೂರ್ಯ ಕಿರಣ್ ತಂಡ ಎರಡು ದಿನಗಳ ಕಾಲ ಅಭ್ಯಾಸ ನಡೆಸಲಿದೆ.

ಸೂರ್ಯ ಕಿರಣ್, ಭಾರತೀಯ ವಾಯುಪಡೆಯ ಏರೋಬ್ಯಾಟಿಕ್ಸ್ ಪ್ರದರ್ಶನ ತಂಡವಾಗಿದ್ದು, ಇದು 1996 ರಲ್ಲಿ ರೂಪುಗೊಂಡಿತು ಮತ್ತು IAF ನ 52 ನೇ ಸ್ಕ್ವಾಡ್ರನ್‌ನ ಭಾಗವಾಗಿದೆ. ಅಂದಿನಿಂದ ತಂಡವು ಸಾಮಾನ್ಯವಾಗಿ ಒಂಬತ್ತು ವಿಮಾನಗಳೊಂದಿಗೆ ಹಲವಾರು ಪ್ರದರ್ಶನಗಳನ್ನು ಪ್ರದರ್ಶಿಸಿದೆ.

ಭಾರತ ಹಾಗೂ ಆಸ್ಟ್ರೇಲಿಯಾ ಪ್ರಧಾನಿಗಳು ಭಾಗಿ
ಇನ್ನು ಈ ಮಹತ್ವದ ಪಂದ್ಯಕ್ಕೆ ಭಾರತ ಮತ್ತು ಆಸ್ಟ್ರೇಲಿಯಾ ಪ್ರಧಾನಿಗಳು ಭಾಗಿಯಾಗುತ್ತಿದ್ದು, ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಏಕದಿನ ವಿಶ್ವಕಪ್ ಫೈನಲ್ ಪಂದ್ಯವನ್ನು ನೋಡಲು ಆಗಮಿಸುವ ನಿರೀಕ್ಷೆಯಿದೆ. ಆಸ್ಟ್ರೇಲಿಯಾದ ಪ್ರಧಾನಿ ಆ್ಯಂಟನಿ ಅಲ್ಬನೆಸ್‌ ಅವರಿಗೂ ಪ್ರಧಾನಿ ಮೋದಿ ಆಹ್ವಾನ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರಲ್ಲದೆ, ಹಲವಾರು ಹಿರಿಯ ರಾಜಕಾರಣಿಗಳು, ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಮತ್ತು ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್, ರಜನಿಕಾಂತ್, ಕಮಲ್ ಹಾಸನ್, ಮೋಹನ್ ಲಾಲ್, ತೆಲುಗು ನಟ ವೆಂಕಟೇಶ್, ನಾಗಾರ್ಜುನ ಮತ್ತು ರಾಮ್ ಚರಣ್ ಸೇರಿದಂತೆ ಭಾರತೀಯ ಚಿತ್ರರಂಗದ ದೊಡ್ಡ ಹೆಸರುಗಳು ಉನ್ನತ ಮಟ್ಟದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. 

ಕ್ರಿಕೆಟ್, ರಾಜಕೀಯ, ಬಾಲಿವುಡ್‌ನ ಸೇರಿದಂತೆ ಹಲವು ಗಣ್ಯರು ಈ ರೋಚಕ ಪಂದ್ಯಕ್ಕೆ ಸಾಕ್ಷಿಯಾಗಲಿದ್ದಾರೆ. 12 ವರ್ಷಗಳ ಬಳಿಕ ಫೈನಲ್ ತಲುಪಿರುವ ಭಾರತ ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿದೆ. 2011ರಲ್ಲಿ ತವರಿನಲ್ಲಿ ನಡೆದ ವಿಶ್ವಕಪ್‌ನಲ್ಲಿ ಭಾರತ ಚಾಂಪಿಯನ್ ಆಗಿತ್ತು. ಅಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ಭಾರತ ಜಯಭೇರಿ ಮೊಳಗಿಸಿತ್ತು. 

ಟಿಕೆಟ್ ಗಳು ಸೋಲ್ಡೌಟ್, ಮೈದಾನ ಫುಲ್
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಈ ಹೈ ಪ್ರೊಫೈಲ್ ಪಂದ್ಯಕ್ಕೆ ಲಕ್ಷಾಂತರ ಮಂದಿ ಸಾಕ್ಷಿಯಾಗುವ ನಿರೀಕ್ಷೆ ಇದೆ. ಈಗಾಗಲೇ ಪಂದ್ಯದ  ಟಿಕೆಟ್ ಗಳು ಸೋಲ್ಡ್ ಔಟ್ ಆಗಿದ್ದು, ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆಯಲಿರುವ ಐತಿಹಾಸಿಕ ಪಂದ್ಯವನ್ನು ಸುಮಾರು 1.40 ಲಕ್ಷ ಜನರು ವೀಕ್ಷಿಸುವ ನಿರೀಕ್ಷೆಯಿದೆ. ಈ ಹಿಂದೆ ಅಹಮದಾಬಾದ್‌ನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ಪಂದ್ಯದ ವೇಳೆ, ಗಾಯಕ ಅರಿಜಿತ್ ಸಿಂಗ್ ಅಕ್ಟೋಬರ್ 14 ರಂದು ಸುನಿಧಿ ಚೌಹಾಣ್, ಶಂಕರ್ ಮಹಾದೇವನ್ ಮತ್ತು ಸುಖ್ವಿಂದರ್ ಸಿಂಗ್ ಅವರೊಂದಿಗೆ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪ್ರದರ್ಶನ ನೀಡಿದ್ದರು.

ನರೇಂದ್ರ ಮೋದಿ ಸ್ಟೇಡಿಯಂ ಹಿನ್ನಲೆ
ನರೇಂದ್ರ ಮೋದಿ ಸ್ಟೇಡಿಯಂ ಈ ಹಿಂದಿನ ಸರ್ದಾರ್ ಪಟೇಲ್ ಸ್ಟೇಡಿಯಂ ಆಗಿತ್ತು. ಇದನ್ನು ಸರ್ದಾರ್ ಪಟೇಲ್ ಸ್ಟೇಡಿಯಂ ಅನ್ನು 1982 ರಲ್ಲಿ 49000 ಆಸನ ಸಾಮರ್ಥ್ಯದೊಂದಿಗೆ ನಿರ್ಮಿಸಲಾಗಿತ್ತು. ಆದಾಗ್ಯೂ ಅಕ್ಟೋಬರ್ 2015 ರಲ್ಲಿ, ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ ಅನ್ನು ಪುನರ್ನಿರ್ಮಿಸಲು ಮತ್ತು ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಮಾಡಲು ನಿರ್ಧರಿಸಿತು. ನವೀಕರಿಸಿದ ಕ್ರೀಡಾಂಗಣವು ದಾಖಲೆಯ ಮೆಲ್ಬೋರ್ನ್ ಕ್ರಿಕೆಟ್ ಮೈದಾನದ ಆಸನಗಳ ಸಾಮರ್ಥ್ಯವನ್ನು ಮೀರಿದೆ. ಇದು 1.30 ಲಕ್ಷಕ್ಕೂ ಹೆಚ್ಚು ಆಸನ ಸಾಮರ್ಥ್ಯದೊಂದಿಗೆ 90,000 ಪ್ರೇಕ್ಷಕರಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯವನ್ನು ಹೊಂದಿದೆ. 

63 ಎಕರೆಗಳಲ್ಲಿ ಈ ಸ್ಟೇಡಿಯಂ ಹರಡಿಕೊಂಡಿದ್ದು, ನಾಲ್ಕು ಪ್ರವೇಶ ದ್ವಾರಗಳೊಂದಿಗೆ, ನಾಲ್ಕು ತಂಡದ ಡ್ರೆಸ್ಸಿಂಗ್ ಕೊಠಡಿಗಳು, 6 ಒಳಾಂಗಣ ಅಭ್ಯಾಸ ಪಿಚ್‌ಗಳು, 3 ಹೊರಾಂಗಣ ಅಭ್ಯಾಸ ಪಿಚ್‌ಗಳನ್ನು ಹೊಂದಿದೆ. ಇದಲ್ಲದೇ ಒಳಾಂಗಣ ಕ್ರಿಕೆಟ್ ಅಕಾಡೆಮಿಯೊಂದಿಗೆ ಡಾರ್ಮಿಟರಿಯನ್ನು ಹೊಂದಿದೆ. ತಲಾ 25 ಆಸನ ಸಾಮರ್ಥ್ಯದ 40 ಕ್ರೀಡಾಪಟುಗಳ ಮತ್ತು 76 ಕಾರ್ಪೊರೇಟ್ ಬ್ಲಾಕ್ ಗಳನ್ನು ಹೊಂದಿದೆ. ಫೆಬ್ರವರಿ 2021 ರಲ್ಲಿ ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಆದ ನರೇಂದ್ರ ಮೋದಿ ಕ್ರೀಡಾಂಗಣವನ್ನು ಉದ್ಘಾಟಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com