ಏಷ್ಯಾ ಕಪ್ 2023: ಬಾಂಗ್ಲಾ ವಿರುದ್ಧದ ಪಂದ್ಯ, ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ
ಕೊಲಂಬೋ: ಬಹು ನಿರೀಕ್ಷಿತ ಏಷ್ಯಾ ಕಪ್ ಸೂಪರ್ 4 ಪಂದ್ಯದಲ್ಲಿ, ಭಾರತ ಇಂದು ಬಾಂಗ್ಲಾದೇಶವನ್ನು ಎದುರಿಸುತ್ತಿದೆ. ಇದರ ಫಲಿತಾಂಶ ಟೂರ್ನಿಯ ಅಂಕಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಬಾಂಗ್ಲಾದೇಶ ತನ್ನನ್ನು ಮತ್ತಷ್ಟು ಸಾಬೀತುಪಡಿಸಲು ಪ್ರಯತ್ನಿಸುತ್ತಿದ್ದರೆ, ಭಾರತ ಈಗಾಗೇ ಪೈನಲ್ ಗೇರಿದ್ದು, ಇಂದಿನ ಪಂದ್ಯದಲ್ಲಿ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿದೆ.
ಟಾಸ್ ಗೆದ್ದ ಭಾರತ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಟೀಂ ಇಂಡಿಯಾದಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದೆ. ವಿರಾಟ್ ಕೊಹ್ಲಿ ಬದಲಿಗೆ ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ ಬದಲಿಗೆ ಶ್ರೇಯಸ್ ಅಯ್ಯರ್ ಮತ್ತು ಜಸ್ಪ್ರೀತ್ ಬುಮ್ರಾ ಬದಲಿಗೆ ಮೊಹಮ್ಮದ್ ಶಮಿ ಆಡುವ ಸಾಧ್ಯತೆಯಿದೆ. ಐಪಿಎಲ್ ಮತ್ತು ಭಾರತ-ವೆಸ್ಟ್ ಇಂಡೀಸ್ ಸರಣಿಗಳಲ್ಲಿ ಸಾಕಷ್ಟು ಪ್ರಭಾವ ಬೀರಿದ ಯುವ ಆಟಗಾರ ತಿಲಕ್ ವರ್ಮಾ ಅವರು ಚೊಚ್ಚಲ ಬಾರಿಗೆ ಏಷ್ಯಾಕಪ್ ನಲ್ಲಿ ಆಡುವ ಸಾಧ್ಯತೆಯಿದೆ. ಬಾಂಗ್ಲಾದೇಶ ತಂಡದಲ್ಲಿ ಮುಶ್ಫಿಕರ್ ರಹೀಮ್ ಆಡುತ್ತಿಲ್ಲ.
ಪಂದ್ಯ ಸಂಪೂರ್ಣ ರದ್ದಾಗುವ ಸಾಧ್ಯತೆಗಳು ಕಡಿಮೆ, ಆದರೆ ಅಲ್ಪ ಪ್ರಮಾಣದ ಮಳೆಯಾಗಬಹುದು ಎನ್ನಲಾಗಿದೆ. ಇಲ್ಲಿಯವರೆಗೆ, ಭಾರತ ಮತ್ತು ಬಾಂಗ್ಲಾದೇಶ ಏಕದಿನ ಮತ್ತು ಟಿ-20 ಗಳಲ್ಲಿ 14 ಬಾರಿ ಪರಸ್ಪರರ ವಿರುದ್ಧ ಆಡಿದೆ, ಭಾರತವು ಒಟ್ಟು 13 ಬಾರಿ ಗೆದ್ದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ