Asia Cup 2023: ಪಾಕಿಸ್ತಾನಕ್ಕೆ ಬರುವಂತೆ ಜಯ್ ಶಾಗೆ ಪಿಸಿಬಿ ಆಹ್ವಾನ

ಏಷ್ಯಾಕಪ್ 2023ರ ಟೂರ್ನಿಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಟೂರ್ನಿಯ ಮೊದಲ ಪಂದ್ಯ ವೀಕ್ಷಣೆಗೆ ಆಗಮಿಸುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ಜಯ್ ಶಾ ಅವರಿಗೆ ಆಹ್ವಾನ ನೀಡಿದೆ.
ಜೈ ಷಾ
ಜೈ ಷಾ
Updated on

ನವದೆಹಲಿ: ಏಷ್ಯಾಕಪ್ 2023ರ ಟೂರ್ನಿಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಟೂರ್ನಿಯ ಮೊದಲ ಪಂದ್ಯ ವೀಕ್ಷಣೆಗೆ ಆಗಮಿಸುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ಜಯ್ ಶಾ ಅವರಿಗೆ ಆಹ್ವಾನ ನೀಡಿದೆ.

ಆಗಸ್ಟ್ 30 ರಿಂದ ಪ್ರಾರಂಭವಾಗುವ ಏಷ್ಯಾಕಪ್‌ನ (Asia Cup 2023) ಆರಂಭಿಕ ಪಂದ್ಯ ವೀಕ್ಷಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕಾರ್ಯದರ್ಶಿ ಜಯ್ ಶಾ ಅವರಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಆಹ್ವಾನ ಕಳುಹಿಸಿದೆ. ಏಷ್ಯಾಕಪ್‌ನ ಮೊದಲ ಪಂದ್ಯ ಪಾಕಿಸ್ತಾನ ಮತ್ತು ನೇಪಾಳ ನಡುವೆ ಮುಲ್ತಾನ್‌ನಲ್ಲಿ ನಡೆಯಲಿದೆ. ಹೀಗಾಗಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ (ACC) ಅಧ್ಯಕ್ಷರಾಗಿರುವ ಜಯ್​ ಶಾಗೆ (Jay Shah) ಪಿಸಿಬಿ ಆಹ್ವಾನ ಕಳುಹಿಸಿದೆ. ಶಾ ಅವರನ್ನು ಹೊರತುಪಡಿಸಿ, ಎಸಿಸಿಯ ಭಾಗವಾಗಿರುವ ಇತರ ಮಂಡಳಿಯ ಸದಸ್ಯರನ್ನೂ ಆಹ್ವಾನಿಸಲಾಗಿದೆ ಎಂದು ಪಿಸಿಬಿ ಹೇಳಿದೆ.

ಆಹ್ವಾನ ನೀಡಿದ ಅಶ್ರಫ್
ಜಯ್ ಶಾ ಅವರಿಗೆ ನಿರೀಕ್ಷೆಯಂತೆ ಆಹ್ವಾನ ಕಳುಹಿಸಲಾಗಿದ್ದು, ಪಿಸಿಬಿ ಜಯ್ ಶಾ ಅವರಿಗೆ ಆಹ್ವಾನ ಕಳುಹಿಸಿದೆ. ಆದರೆ ಅವರು ಪಾಕಿಸ್ತಾನಕ್ಕೆ ಬರುವ ಸಾಧ್ಯತೆ ತುಂಬಾ ಕಡಿಮೆ. ಡರ್ಬನ್‌ನಲ್ಲಿ ನಡೆದ ಐಸಿಸಿ ಸಭೆಯಲ್ಲಿ ಜಯ್ ಶಾ ಮತ್ತು ಪಿಸಿಬಿ ಅಧ್ಯಕ್ಷ ಝಾಕಾ ಅಶ್ರಫ್ ಭೇಟಿಯಾಗಿದ್ದರು. ನಂತರ ಅಶ್ರಫ್ ಶಾ ಅವರನ್ನು ಮೌಖಿಕವಾಗಿ ಕರೆದಿದ್ದರು. ಆದರೆ ಈಗ ಪಿಸಿಬಿ ಔಪಚಾರಿಕವಾಗಿ ಆಹ್ವಾನವನ್ನು ಕಳುಹಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ಮೊದಲು ಪಿಸಿಬಿಯ ಆಹ್ವಾನವನ್ನು ಜಯ್ ಶಾ ಒಪ್ಪಿಕೊಂಡಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮಗಳು ಹೇಳಿದ್ದವು. ಆದರೆ ಬಿಸಿಸಿಐ ಕಾರ್ಯದರ್ಶಿ ಇದನ್ನು ನಿರಾಕರಿಸಿದ್ದ ಹಿನ್ನಲೆಯಲ್ಲಿ ಪಿಸಿಬಿ ಸಾಕಷ್ಟು ಮುಜುಗರ ಎದುರಿಸಬೇಕಾಯಿತು ಎಂದು ಮೂಲಗಳು ತಿಳಿಸಿವೆ.

ಸ್ಪಷ್ಟ ಸಂದೇಶ ರವಾನಿಸಿದ ಪಿಸಿಬಿ
ವಾಸ್ತವವಾಗಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳು ಉತ್ತಮವಾಗಿಲ್ಲ. ಹೀಗಾಗಿ ಉಭಯ ದೇಶಗಳ ತಂಡಗಳು ದ್ವಿಪಕ್ಷೀಯ ಸರಣಿಯನ್ನು ಆಡುತ್ತಿಲ್ಲ. ಕ್ರೀಡೆ ಮತ್ತು ರಾಜಕೀಯವನ್ನು ಬೆರೆಸಬಾರದು ಎಂಬ ಸಂದೇಶವನ್ನು ಪಿಸಿಬಿ ರವಾನಿಸಲು ಬಯಸುತ್ತದೆ. ಭಾರತದೊಂದಿಗಿನ ಕ್ರಿಕೆಟ್ ಸಂಬಂಧದ ಬಗ್ಗೆ ಪಾಕಿಸ್ತಾನದ ನಿಲುವನ್ನು ತೆರವುಗೊಳಿಸುವುದು. ಇದರ ಹಿಂದಿನ ಆಲೋಚನೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಆದರೆ ಏಷ್ಯಾಕಪ್‌ನ ಮೊದಲ ಪಂದ್ಯವನ್ನು ವೀಕ್ಷಿಸಲು ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ಜಯ್ ಶಾ ಈ ಮೊದಲೇ ಸ್ಪಷ್ಟವಾಗಿ ಹೇಳಿದ್ದರು. ಇದೀಗ ಪಾಕಿಸ್ತಾನದಿಂದ ಈ ಔಪಚಾರಿಕ ಆಹ್ವಾನದ ನಂತರ ಜಯ್ ಶಾ ತಮ್ಮ ನಿಲುವನ್ನು ಬದಲಿಸಿ ಮೊದಲ ಪಂದ್ಯಕ್ಕೆ ಹಾಜರಾಗುತ್ತಾರೆಯೇ ಎಂದು ಕಾದು ನೋಡಬೇಕಿದೆ.

ಏಷ್ಯಾಕಪ್ ಆತಿಥ್ಯಕ್ಕೆ ಸಂಬಂಧಿಸಿದಂತೆ ಈ ಹಿಂದೆ ಸಾಕಷ್ಟು ವಿವಾದಗಳು ನಡೆದಿದ್ದವು. ಈ ಟೂರ್ನಿಗೆ ತನ್ನ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟವಾಗಿ ಹೇಳಿತ್ತು. ಅಲ್ಲದೆ ಏಷ್ಯಾಕಪ್ ಅನ್ನು ಪಾಕಿಸ್ತಾನದ ಹೊರಗೆ ಆಯೋಜಿಸಲು ಮುಂದಾಗಿತ್ತು. ಈ ಕಾರಣಕ್ಕಾಗಿ ಏಷ್ಯಾಕಪ್​ನ ನಾಲ್ಕು ಪಂದ್ಯಗಳು ಮಾತ್ರ ಪಾಕಿಸ್ತಾನದಲ್ಲಿ ನಡೆಯಲಿದ್ದು, ಉಳಿದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com