ವಿಡಿಯೋ: ಕೈಯಿಂದ ಬಾಲ್ ತಡೆದು ಔಟ್​; ಕ್ರಿಕೆಟ್ ಜಗತ್ತಿನ ಹೀನಾಯ ದಾಖಲೆ ಬರೆದ ಬಾಂಗ್ಲಾದೇಶದ ಮುಷ್ಫಿಕರ್‌ ರಹೀಂ

ಬಾಂಗ್ಲಾದೇಶ ತಂಡದ ಹಿರಿಯ ಆಟಗಾರ ಮುಷ್ಫಿಕರ್‌ ರಹೀಂ(Mushfiqur Rahim) ಅವರು ನ್ಯೂಜಿಲ್ಯಾಂಡ್​ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಚೆಂಡನ್ನು ಕೈಯಿಂದ ಹಿಡಿಯುವ ಮೂಲಕ ಔಟಾಗಿ ಹೀನಾಯ ದಾಖಲೆಗೆ ಪಾತ್ರರಾಗಿದ್ದಾರೆ.
ಮುಷ್ಫಿಕರ್ ರಹೀಂ
ಮುಷ್ಫಿಕರ್ ರಹೀಂ

ಢಾಕಾ: ಬಾಂಗ್ಲಾದೇಶ ತಂಡದ ಹಿರಿಯ ಆಟಗಾರ ಮುಷ್ಫಿಕರ್‌ ರಹೀಂ(Mushfiqur Rahim) ಅವರು ನ್ಯೂಜಿಲ್ಯಾಂಡ್​ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಚೆಂಡನ್ನು ಕೈಯಿಂದ ಹಿಡಿಯುವ ಮೂಲಕ ಔಟಾಗಿ ಹೀನಾಯ ದಾಖಲೆಗೆ ಪಾತ್ರರಾಗಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್​ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಮುಷ್ಫಿಕರ್ ರಹೀಂ ಅತ್ಯಂತ ಅವಮಾನಕರ ರೀತಿಯಲ್ಲಿ ವಿಕೆಟ್​ ಒಪ್ಪಿಸಿದ್ದಾರೆ. ವಿಕೆಟ್​ಗೆ ಬಡಿಯುವ ಚೆಂಡನ್ನು ಕೈ ಯಿಂದ ತಡೆದು ವಿಚಿತ್ರವಾಗಿ ಔಟ್ ಆಗಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್(Cricket Viral Video)​ ಆಗಿದೆ.

ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಬಾಂಗ್ಲಾದೇಶ ಆರಂಭಿಕ ಆಘಾತ ಎದುರಿಸಿತು. 50 ರನ್​ ಗಳಿಸುವ ಮುನ್ನವೇ 4 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಬ್ಯಾಟಿಂಗ್​ಗೆ ಇಳಿದ ಮುಷ್ಫಿಕರ್‌ ತಾಳ್ಮೆಯುತ ಬ್ಯಾಟಿಂಗ್​ ನಡೆಸುವ ಮೂಲಕ ತಂಡಕ್ಕೆ ಆಸರೆಯಾಗುತ್ತಿದ್ದರು. ಆದರೆ ಕೈಲ್​ ಜಾಮಿಸನ್​ ಅವರ ಓವರ್​ನಲ್ಲಿ ಚೆಂಡನ್ನು ಡಿಫೆನ್ಸ್ ಮಾಡುವ ವೇಳೆ ಚೆಂಡು ಬ್ಯಾಟ್​ಗೆ ಬಡಿದು ಮುಂದೆ ಸಾಗಿತ್ತು. ಈ ವೇಳೆ ಚೆಂಡು ವಿಕೆಟ್ ಗೆ ಬೀಳುತ್ತದೆ ಎಂದು ಭಾವಿಸಿದ ಮುಷ್ಫಿಕರ್ ಗಲಿಬಿಲಿಗೊಂಡು ತಮ್ಮ ಕೈಗಳಿಂದಲೇ ಚೆಂಡನ್ನು ತಡೆದರು.

ಈ ವೇಳೆ ನ್ಯೂಜಿಲೆಂಡ್ ಆಟಗಾರರು ಕೂಡಲೇ ಔಟ್ ಗಾಗಿ ಅಂಪೈರ್ ಗಳತ್ತ ಮನವಿ ಮಾಡಿದರು. ಈ ವೇಳೆ ಫೀಲ್ಡ್​ ಅಂಪೈರ್​ ಮೊದಲಿಗೆ ಔಟ್​ ನೀಡದೆ ಲೆಗ್​ ಅಂಪೈರ್​ ಬಳಿ ಚರ್ಚಿಸಿ ಬಳಿಕ ಮೂರನೇ ಅಂಪೈರ್​ಗೆ ಪರಿಶೀಲಿಸುವಂತೆ ಮನವಿ ಮಾಡಿದರು. ಬಳಿಕ 3ನೇ ಅಂಪೈರ್ ವಿಡಿಯೋ ಪರಿಶೀಲಿಸಿ ಮುಷ್ಫಿಕರ್ ರಹೀಂ ಚೆಂಡನ್ನು ಕೈಯಿಂದ ತಡೆದಿರುವುದು ನಿಯಮ ಬಾಹಿರ ಎಂದು ಪರಿಗಣಿಸಿ ಔಟ್ ನೀಡಿದ್ದಾರೆ.

ನಿಯಮ ಏನು ಹೇಳುತ್ತದೆ?
ಬೌಲರ್​ ಒಬ್ಬ ಎಸೆದ ಎಸೆತ ಬ್ಯಾಟ್​ಗೆ ಬಡಿದು ಚೆಂಡು ವಿಕೆಟ್​ಗೆ ಬಡಿಯುವ ಮುನ್ನ ಬ್ಯಾಟ್​ನಿಂದ ಅಥವಾ ಕಾಲಿನಿಂದ ಇದನ್ನು ತಡೆದರೆ ಇದನ್ನು ಔಟ್​ ಎಂದು ಪರಿಗಣಿಸುವುದಿಲ್ಲ. ಆದರೆ ಕೈಗಳಿಂದ ಚೆಂಡನ್ನು ತಡೆದರೆ ಇದನ್ನು ಔಟ್​ ಎಂದು ಒಂದು ತೀರ್ಪು ನೀಡಲಾಗುತ್ತದೆ. ಒಂದೊಮ್ಮೆ ಬ್ಯಾಟರ್​ ಕ್ರೀಸ್​ ಬಿಟ್ಟು ಮುಂದೆ ಬಂದ ವೇಳೆ ಫೀಲ್ಡರ್​ ಒಬ್ಬ ವಿಕೆಟ್​ನತ್ತ ಚೆಂಡನ್ನು ಎಸೆದರೆ ಅದನ್ನು ಬ್ಯಾಟರ್​ ತಡೆದರೆ ಇದು ಕೂಡ ಔಟ್​ ಎಂದು ನಿರ್ಧರಿಸಲಾಗುತ್ತದೆ.

ಹೀನಾಯ ದಾಖಲೆ
ಮುಷ್ಫಿಕರ್‌ ರಹೀಂ ಅವರು ಈ ರೀತಿ ಔಟ್​ ಆದ 11ನೇ ಆಟಗಾರ ಎನಿಸಿಕೊಂಡರು. 22 ವರ್ಷಗಳಲ್ಲಿ ಪುರುಷರ ಟೆಸ್ಟ್‌ನಲ್ಲಿ ಚೆಂಡನ್ನು ಕೈಯಿಂದ ತಡೆಯುವ ಮೂಲಕ ಔಟಾದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಕೊನೆಯದಾಗಿ ಈ ರೀತಿ ಔಟಾದ ಆಟಗಾರ ಎಂದರೆ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕಲ್ ವಾನ್.. 2001ಲ್ಲಿ ನಡೆದ ಭಾರತದ ವಿರುದ್ಧದ ಪಂದ್ಯದಲ್ಲಿ ಮೈಕಲ್ ವಾನ್ ಇದೇ ರೀತಿ ಕೈಯಿಂದ ಚೆಂಡನ್ನು ತಡೆದು ಔಟ್ ಆಗಿದ್ದರು.

ಇದೇ ರೀತಿ ಆಸ್ಟ್ರೇಲಿಯಾ ನಾಯಕ ಸ್ಟೀವ್ ವಾ ಕೂಡ ಇದೇ ರೀತಿ ಭಾರತದ ವಿರುದ್ಧವೇ 2001ರಲ್ಲಿ ಕೈಯಿಂದ ಚೆಂಡನ್ನು ತಡೆದು ಔಟಾಗಿದ್ದರು. ಅಂದು ಭಾರತದ ಸ್ಪಿನ್ನರ್ ಹರ್ಭಜನ್ ಸಿಂಗ್ ಎಸೆದಿದ್ದ ಎಸೆತವನ್ನು ಸ್ಟ್ವೀವ್ ವಾ ಡಿಫೆಂಡ್ ಮಾಡಿದ್ದರು. ಆದರೆ ಚೆಂಡು ನೆಲಕ್ಕೆ ಬಡಿದು ಬಳಿಕ ಸ್ಟಂಪ್ ನತ್ತ ಸಾಗಿತ್ತು. ಇದನ್ನು ಗಮನಿಸಿದ ಸ್ಟ್ವೀವ್ ವಾ ಕೂಡಲೇ ಕೈಯಿಂದಲೇ ಚೆಂಡನ್ನು ತಡೆದಿದ್ದರು. ಹೀಗಾಗಿ ಅವರು ಔಟ್ ಎಂದು ಘೋಷಣೆ ಮಾಡಲಾಗಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com