ಕ್ರಿಕೆಟಿಗರಿಂದ ನಿಷೇಧಿತ ಚುಚ್ಚುಮದ್ದು ಬಳಕೆ, ಕೊಹ್ಲಿ ಸುಳ್ಳುಗಾರ, ಟೀಂ ಇಂಡಿಯಾದಲ್ಲಿ ಗ್ರೂಪಿಸಂ: ಚೇತನ್ ಶರ್ಮಾ ಸ್ಫೋಟಕ ಹೇಳಿಕೆ

ಭಾರತ ಕ್ರಿಕೆಟ್ ತಂಡದ ಆಟಗಾರರು ಆಡಲು ಸಾಕಷ್ಟು ಫಿಟ್ ಆಗಿಲ್ಲದಿದ್ದರೂ ಸಹ ಶೇ.100 ಪ್ರತಿಶತ ಫಿಟ್ ಆಗಲು ನಿಷೇಧಿತ ಚುಚ್ಚುಮದ್ದನ್ನು ಬಳಸುತ್ತಿದ್ದಾರೆ ಎಂದು ಬಿಸಿಸಿಐ ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ(Chetan Sharma) ಸ್ಫೋಟಕ ಹೇಳಿಕೆ ನೀಡಿದ್ದಾರೆ. 
ಚೇತನ್ ಶರ್ಮಾ ಮತ್ತು ಟೀಂ ಇಂಡಿಯಾ
ಚೇತನ್ ಶರ್ಮಾ ಮತ್ತು ಟೀಂ ಇಂಡಿಯಾ

ಮುಂಬೈ: ಭಾರತ ಕ್ರಿಕೆಟ್ ತಂಡದ ಆಟಗಾರರು ಆಡಲು ಸಾಕಷ್ಟು ಫಿಟ್ ಆಗಿಲ್ಲದಿದ್ದರೂ ಸಹ ಶೇ.100 ಪ್ರತಿಶತ ಫಿಟ್ ಆಗಲು ನಿಷೇಧಿತ ಚುಚ್ಚುಮದ್ದನ್ನು ಬಳಸುತ್ತಿದ್ದಾರೆ ಎಂದು ಬಿಸಿಸಿಐ ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ(Chetan Sharma) ಸ್ಫೋಟಕ ಹೇಳಿಕೆ ನೀಡಿದ್ದಾರೆ. 

ಖಾಸಗಿ ವಾಹಿನಿ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ (ರಹಸ್ಯ ಕಾರ್ಯಾಚರಣೆ)ಶರ್ಮಾ ಇಂಥದ್ದೇ ಹಲವಾರು ವಿಷಯಗಳನ್ನು ಬಹಿರಂಗ ಪಡಿಸಿದ್ದು, ಈ ಚುಚ್ಚುಮದ್ದುಗಳಲ್ಲಿ ಡ್ರಗ್ಸ್ ಇದೆ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.. ಅಚ್ಚರಿ ಎಂದರೆ ಕ್ರಿಕೆಟಿಗರು ತೆಗೆದುಕೊಂಡ ಈ ಡ್ರಗ್ಸ್ ಡೋಪಿಂಗ್ ಪರೀಕ್ಷೆಯಲ್ಲೂ ಸಿಕ್ಕಿಬೀಳುವುದಿಲ್ಲ ಎಂದು ಚೇತನ್ ಶರ್ಮಾ ಹೇಳಿದ್ದಾರೆ ಎಂದು ಹೇಳಲಾಗಿದೆ.

ಇಷ್ಟು ಮಾತ್ರವಲ್ಲದೇ ಭಾರತ ತಂಡದ ಹಿರಿಯ ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ಸಾಕಷ್ಟು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. 

ತಂಡದಲ್ಲಿ ಉಳಿದುಕೊಳ್ಳಲು ಚುಚ್ಚುಮದ್ದು
ಜಸ್ಪ್ರೀತ್ ಬುಮ್ರಾ ಅವರು ಸಂಪೂರ್ಣವಾಗಿ ಆಡಲು ಫಿಟ್ ಆಗಿರಲಿಲ್ಲ. ಆದರೆ ಇಂಜೆಕ್ಷನ್ ಸಹಾಯದಿಂದ ಬಲವಂತವಾಗಿ ಆಡುವಂತೆ ಮಾಡಲಾಯಿತು. ಆದರೆ ಈಗ ಅವರು ಇನ್ನೂ ಆಡಲು ಫಿಟ್ ಆಗಿಲ್ಲ. ಕಳಪೆ ಪ್ರದರ್ಶನ ತೋರುತ್ತಿರುವ ಕೆಲವು ಆಟಗಾರರು ತಂಡದಲ್ಲಿ ಹಾಗೇ ಉಳಿಯಲು ಚುಚ್ಚುಮದ್ದನ್ನು ಬಳಸುತ್ತಿದ್ದಾರೆ. ಇಶಾನ್ ಕಿಶನ್ ಮತ್ತು ಶುಭ್ ಮನ್ ಗಿಲ್ ಅವರ ಇತ್ತೀಚಿನ ಉತ್ತಮ ಫಾರ್ಮ್ ಸಂಜು ಸ್ಯಾಮ್ಸನ್, ಕೆಎಲ್ ರಾಹುಲ್ ಮತ್ತು ಶಿಖರ್ ಧವನ್ ಅವರ ವೃತ್ತಿಜೀವನವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ನಡುವೆ ದೊಡ್ಡ ಅಹಂ ಘರ್ಷಣೆ ಇತ್ತು. ವಿರಾಟ್ ಅವರು ಮಂಡಳಿಗಿಂತ ಮೇಲಿದ್ದಾರೆಂದು ಭಾವಿಸಿದ್ದರು ಮತ್ತು ಗಂಗೂಲಿ ತಮ್ಮದೇ ಆದ ನಿಲುವಿಗೆ ಬದ್ಧರಾಗಿದ್ದರು ಎಂದು ಹೇಳಿದ್ದಾರೆ.

ಗಂಗೂಲಿ-ಕೊಹ್ಲಿ ನಡುವೆ ಶೀಥಲ ಸಮರ
ಅಂತೆಯೇ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರ ಕಾರಣದಿಂದ ತಮ್ಮ ನಾಯಕತ್ವವನ್ನು ಕೈಯಿಂದ ಜಾರಿತು ಎಂದು ವಿರಾಟ್ ಕೊಹ್ಲಿ ಎಂದು ಭಾವಿಸಿದ್ದಾರೆ. ಹಾಗಾಗಿಯೇ ದಕ್ಷಿಣ ಆಫ್ರಿಕಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಗಂಗೂಲಿ ವಿರುದ್ಧ ವಾಗ್ದಾಳಿ ನಡೆಸಿದರು. ವಿರಾಟ್ ಕೊಹ್ಲಿ ಸುಳ್ಳುಗಾರ, ಅವರ ನಾಯಕತ್ವವನ್ನು ಬಿಟ್ಟುಕೊಡಬೇಡಿ ಎಂದು ಮೊದಲೇ ತಿಳಿಸಲಾಗಿತ್ತು. ನಾಯಕತ್ವದಿಂದ ಕೆಳಗಿಳಿಯಬೇಡಿ ಎಂದು ಗಂಗೂಲಿ ಹೇಳಿದ್ದರು. ಆದರೆ ಅಹಂನಿಂದಾಗಿ ವಿರಾಟ್ ಕೊಹ್ಲಿ ಸುದ್ದಿಗೋಷ್ಠಿಯಲ್ಲಿ ಗಂಗೂಲಿಯನ್ನು ದೂಷಿಸಿದರು. ವಿರಾಟ್ ಕೊಹ್ಲಿಯನ್ನು ನಾಯಕ ಸ್ಥಾನದಿಂದ ತೆಗೆದುಹಾಕುವುದು ಗಂಗೂಲಿಯದ್ದು ಮಾತ್ರ ನಿರ್ಧಾರ ಆಗಿರಲಿಲ್ಲ. ಅದು ಆಯ್ಕೆಗಾರರ ಒಟ್ಟು ನಿರ್ಧಾರವಾಗಿತ್ತು.  ರವಿಶಾಸ್ತ್ರಿ ಅವರನ್ನು ಕೋಚ್ ಮಾಡುವಲ್ಲಿ ಕೊಹ್ಲಿಯ ಪಾತ್ರವೂ ದೊಡ್ಡದಿದೆ ಎಂದು ಹೇಳಿದ್ದಾರೆ.

ನಾಯಕತ್ವ ಪ್ರಯೋಗ
ಬಿಸಿಸಿಐ ಆಯ್ಕೆದಾರರು ನಾಯಕತ್ವದ ಪಾತ್ರಗಳಲ್ಲಿ ಪ್ರಯೋಗ ಮಾಡಲು ಬಯಸಿದ್ದರು ಎಂದು ಶರ್ಮಾ ಬಹಿರಂಗಪಡಿಸಿದ್ದಾರೆ, ಅದಕ್ಕಾಗಿಯೇ ಇತ್ತೀಚಿನ ವರ್ಷಗಳಲ್ಲಿ ಭಾರತವು ಹಲವಾರು ನಾಯಕರನ್ನು ಕಂಡಿದೆ. ಆದರೆ ಕೊಹ್ಲಿ ಸಮಯದಲ್ಲಿ, ಆಯ್ಕೆದಾರರು ಎಲ್ಲಾ ಫಾರ್ಮ್ಯಾಟ್‌ಗಳಲ್ಲಿ ಒಬ್ಬನೇ ನಾಯಕ ಇರುತ್ತಾರೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಡುವೆ ಯಾವುದೇ ಸಂಘರ್ಷವಿಲ್ಲ, ಆದರೆ ಕೆಲವು ಅಹಂ ಸಂಘರ್ಷವಿದೆ. ಅವರಿಬ್ಬರನ್ನು ಧರ್ಮೇಂದ್ರ ಮತ್ತು ಅಮಿತಾಭ್ ಬಚ್ಚನ್ ಜೊತೆ ಹೋಲಿಕೆ ಮಾಡಿದ್ದಾರೆ ಶರ್ಮಾ. ರೋಹಿತ್ ಮತ್ತು ವಿರಾಟ್ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಯಾವುದೇ ಸಂಘರ್ಷ ನಡೆದಿದ್ದರೆ ನನಗೆ ತಿಳಿಸಲಾಗುತ್ತಿತ್ತು. ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಸೇರಿದಂತೆ ಭಾರತೀಯ ಆಟಗಾರರು ತಮ್ಮನ್ನು ಕಣ್ಮುಚ್ಚಿ ನಂಬುತ್ತಾರೆ ಎಂದು ಹೇಳಿದ್ದಾರೆ.

ಟೀಂ ಇಂಡಿಯಾದಲ್ಲಿ ಗ್ರೂಪಿಸಂ
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಜೊತೆ ಮಾತುಕತೆ ನಡೆಸಿದಾಗಲೆಲ್ಲ ಇಬ್ಬರೂ 30 ನಿಮಿಷಗಳ ಕಾಲ ಮಾತನಾಡುತ್ತೇವೆ.  ಎರಡು ಗ್ರೂಪ್ ಇದೆ. ಒಂದನ್ನು ರೋಹಿತ್ ಶರ್ಮಾ ಮುನ್ನಡೆಸಿದರೆ, ಇನ್ನೊಂದನ್ನು ವಿರಾಟ್ ಕೊಹ್ಲಿ ಮುನ್ನಡೆಸುತ್ತಿದ್ದಾರೆ. ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ದೀಪಕ್ ಹೂಡಾ, ಶುಭಮನ್ ಗಿಲ್ ಮತ್ತು ಇತರ 15-20 ಆಟಗಾರರನ್ನು ತಂಡಕ್ಕೆ ಕರೆತಂದಿದ್ದೇನೆ. ಶುಭ್​ಮನ್ ಗಿಲ್‌ಗೆ ಅವಕಾಶ ನೀಡಲು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಗೆ’ವಿಶ್ರಾಂತಿ’ ನೀಡಲಾಗಿದೆ ಭವಿಷ್ಯದಲ್ಲಿ ರೋಹಿತ್ ಶರ್ಮಾ T20I ಸೆಟಪ್‌ನ ಭಾಗವಾಗುವುದಿಲ್ಲ. ಹಾರ್ದಿಕ್ ಪಾಂಡ್ಯ ದೀರ್ಘಾವಧಿಗೆ ನಾಯಕರಾಗಿರುತ್ತಾರೆ ಎಂದು ಚೇತನ್ ಶರ್ಮಾ ಹೇಳಿದ್ದಾರೆ.

ಇನ್ನು ಚೇತನ್ ಶರ್ಮಾ ಅವರ ಈ ಹೇಳಿಕೆ ಕ್ರಿಕೆಟ್ ವಲಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದು, ಬಿಸಿಸಿಐ  ಈ ಕುರಿತು ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com