ಬಾರ್ಡರ್-ಗವಾಸ್ಕರ್ ಟ್ರೋಫಿ: ಕಾಂಗರೂಗಳಿಗೆ ಮತ್ತೊಂದು ಆಘಾತ: ಗಾಯಾಳು ಡೇವಿಡ್ ವಾರ್ನರ್ ಟೆಸ್ಟ್ ಸರಣಿಯಿಂದ ಔಟ್!

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೂರನೇ ಪಂದ್ಯಕ್ಕೆ ಉಭಯ ತಂಡಗಳು ಸಿದ್ಧತೆ ನಡೆಸಿದ್ದು, ಈ ನಡುವೆ ಪ್ರವಾಸಿ ಆಸ್ಟ್ರೇಲಿಯಾ ತಂಡಕ್ಕೆ ಗಾಯದ ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತಿದೆ.
ಡೇವಿಡ್ ವಾರ್ನರ್
ಡೇವಿಡ್ ವಾರ್ನರ್

ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೂರನೇ ಪಂದ್ಯಕ್ಕೆ ಉಭಯ ತಂಡಗಳು ಸಿದ್ಧತೆ ನಡೆಸಿದ್ದು, ಈ ನಡುವೆ ಪ್ರವಾಸಿ ಆಸ್ಟ್ರೇಲಿಯಾ ತಂಡಕ್ಕೆ ಗಾಯದ ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತಿದೆ.

ಹೌದು.. ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಡೇವಿಡ್ ವಾರ್ನರ್ ಗಾಯದ ಸಮಸ್ಯೆಯಿಂದಾಗಿ ಬಾಕಿ ಇರುವ 2 ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಈ ಹಿಂದೆ ಆಸಿಸ್ ದೈತ್ಯ ಆಟಗಾರ ಹೇಜಲ್ ವುಡ್ ಕೂಡ ಗಾಯದ ಸಮಸ್ಯೆಯಿಂದಾಗಿ ಭಾರತ ಪ್ರವಾಸವನ್ನು ಮೊಟಕುಗೊಳಿಸಿ ಆಸ್ಟ್ರೇಲಿಯಾಗೆ ವಾಪಸ್ ಆಗಿದ್ದರು.

ಭಾರತ ವಿರುದ್ಧ ಎರಡನೇ ಟೆಸ್ಟ್‌ ಪಂದ್ಯದ ವೇಳೆ ಗಾಯಕ್ಕೆ ತುತ್ತಾಗಿದ್ದ ಆಸ್ಟ್ರೇಲಿಯಾ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್‌ ಪ್ರಸ್ತುತ ನಡೆಯುತ್ತಿರುವ ಬಾರ್ಡರ್‌-ಗವಾಸ್ಕರ್ ಟ್ರೋಫಿ ಟೆಸ್ಟ್‌ ಸರಣಿಯ ಕೊನೆಯ ಎರಡು ಪಂದ್ಯಗಳಿಂದ ಹೊರ ಬಿದ್ದಿದ್ದಾರೆ. ಆ ಮೂಲಕ ಆರಂಭಿಕ ಎರಡೂ ಪಂದ್ಯಗಳಲ್ಲಿ ಹೀನಾಯ ಸೋಲು ಅನುಭವಿಸಿರುವ ಪ್ರವಾಸಿಗರಿಗೆ ಮತ್ತೊಂದು ಆಘಾತವಾಗಿದೆ. ದೆಹಲಿಯ ಅರುಣ್‌ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದಿದ್ದ ಎರಡನೇ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಡೇವಿಡ್‌ ವಾರ್ನರ್‌, ಮೊಹಮ್ಮದ್‌ ಶಮಿ ಹಾಗೂ ಮೊಹಮ್ಮದ್‌ ಸಿರಾಜ್‌ ಅವರ ಮಾರಕ ಎಸೆತಗಳಲ್ಲಿ ಸಾಕಷ್ಟು ತಿಣುಕಾಡಿದ್ದರು. ಅದರಲ್ಲೂ ವಿಶೇಷವಾಗಿ ಸಿರಾಜ್‌ ಎಸೆತಗಳಲ್ಲಿ ವಾರ್ನರ್‌ ಒಮ್ಮೆ ಚೆಂಡನ್ನು ಹೆಲ್ಮೆಟ್‌ಗೆ ಹಾಗೂ ಮತ್ತೊಮ್ಮೆ ಮೊಣಕೈಗೆ ಪೆಟ್ಟು ಮಾಡಿಕೊಂಡಿದ್ದರು.

ಬಳಿಕ ಅವರು ಭಾರತ ತಂಡದ ಪ್ರಥಮ ಇನಿಂಗ್ಸ್‌ನಲ್ಲಿ ಡೇವಿಡ್‌ ವಾರ್ನರ್‌ ಕನ್ಕಷನ್‌ಗೆ ಒಳಗಾಗಿದ್ದರು. ಈ ಕಾರಣದಿಂದಾಗಿ ಭಾರತ ತಂಡದ ಇನಿಂಗ್ಸ್‌ನಲ್ಲಿ ವಾರ್ನರ್‌ ಫೀಲ್ಡಿಂಗ್‌ಗೆ ಬಂದಿರಲಿಲ್ಲ. ಅಂತಿಮವಾಗಿ ಇವರ ಸ್ಥಾನದಲ್ಲಿ ಆಡಲು ಮ್ಯಾಟ್‌ ರೆನ್‌ಶಾ ಸ್ಥಾನ ಪಡೆದಿದ್ದರು. ಅದರಂತೆ ದ್ವಿತೀಯ ಇನಿಂಗ್ಸ್‌ನಲ್ಲಿ ಉಸ್ಮಾನ್‌ ಖವಾಜ ಜೊತೆ ಟ್ರಾವಿಸ್‌ ಹೆಡ್‌ ಇನಿಂಗ್ಸ್ ಆರಂಭಿಸಿದ್ದರು. ಡೇವಿಡ್‌ ವಾರ್ನರ್‌ ಮೊಣಕೈನಲ್ಲಿ ಗಂಭೀರ ಗಾಯವಾಗಿರುವುದು ಎಕ್ಸ್‌ರೇ ವರದಿಯಲ್ಲಿ ಧೃಡಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಡೇವಿಡ್‌ ವಾರ್ನರ್ ಅವರು ತವರಿಗೆ ಮರಳಲಿದ್ದಾರೆ ಹಾಗೂ ಟೆಸ್ಟ್‌ ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ ಎಂದು ಮಂಗಳವಾರ ಕ್ರಿಕೆಟ್‌ ಆಸ್ಟ್ರೇಲಿಯಾ ಸ್ಪಷ್ಟಪಡಿಸಿದೆ.

ವಾರ್ನರ್ ಬದಲಿಗೆ ಮ್ಯಾಟ್‌ ರೆನ್‌ಶಾಗೆ ಸ್ಥಾನ
ಇನ್ನು ಡೇವಿಡ್‌ ವಾರ್ನರ್‌ ಅವರು ಸರಣಿಯ ಇನ್ನುಳಿದ ಭಾಗದಿಂದ ಹೊರ ಬಿದ್ದಿರುವ ಹಿನ್ನೆಲೆಯಲ್ಲಿ ಅವರ ಸ್ಥಾನದಲ್ಲಿ ಮ್ಯಾಟ್‌ ರೆನ್‌ ಶಾ ಮುಂದುವರಿಯುವ ಸಾಧ್ಯತೆ ಇದೆ. ಮತ್ತೊಂದೆಡೆ ಡೇವಿಡ್‌ ವಾರ್ನರ್‌ ಅವರ ಆರಂಭಿಕ ಸ್ಥಾನದಲ್ಲಿ ಉಸ್ಮಾನ್‌ ಖವಾಜ ಅವರ ಜೊತೆ ಟ್ರಾವಿಸ್‌ ಹೆಡ್‌ ಇನ್ನುಳಿದ ಎರಡು ಪಂದ್ಯಗಳಲ್ಲಿ ಇನಿಂಗ್ಸ್ ಆರಂಭಿಸುವುದು ಬಹುತೇಕ ಖಚಿತವಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com