'ನನ್ನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ, ಗುಣಮುಖನಾಗುತ್ತಿದ್ದೇನೆ, ಸವಾಲುಗಳ ಎದುರಿಸಲು ಸಜ್ಜಾಗಿದ್ದೇನೆ': ರಿಷಬ್ ಪಂತ್

ಕಳೆದ ತಿಂಗಳು ಕಾರು ಅಪಘಾತದಲ್ಲಿ ತೀವ್ರ ಗಾಯವಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಭಾರತ ತಂಡದ ಕ್ರಿಕೆಟಿಗ ರಿಷಭ್‌ ಪಂತ್‌ ಅಪಘಾತದ ಬಳಿಕ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಆರೋಗ್ಯ ಚೇತರಿಕೆಗೆ ಹಾರೈಸಿದ ಎಲ್ಲರಿಗೂ ಧನ್ಯವಾದ ಹೇಳಿದ್ದು ಚೇತರಿಸಿಕೊಳ್ಳುತ್ತಿದ್ದೇನೆ, ಮುಂದಿನ ಸವಾಲುಗಳಿಗೆ ಸಿದ್ಧನಾಗುತ್ತಿದ್ದೇನೆ ಎಂದು ಹೇಳಿದ್ದಾರೆ.
ರಿಷಬ್ ಪಂತ್
ರಿಷಬ್ ಪಂತ್

ಮುಂಬೈ: ಕಳೆದ ತಿಂಗಳು ಕಾರು ಅಪಘಾತದಲ್ಲಿ ತೀವ್ರ ಗಾಯವಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಭಾರತ ತಂಡದ ಕ್ರಿಕೆಟಿಗ ರಿಷಭ್‌ ಪಂತ್‌ ಅಪಘಾತದ ಬಳಿಕ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಆರೋಗ್ಯ ಚೇತರಿಕೆಗೆ ಹಾರೈಸಿದ ಎಲ್ಲರಿಗೂ ಧನ್ಯವಾದ ಹೇಳಿದ್ದು ಚೇತರಿಸಿಕೊಳ್ಳುತ್ತಿದ್ದೇನೆ, ಮುಂದಿನ ಸವಾಲುಗಳಿಗೆ ಸಿದ್ಧನಾಗುತ್ತಿದ್ದೇನೆ ಎಂದು ಹೇಳಿದ್ದಾರೆ.

ನಿನ್ನೆ ಟ್ವೀಟ್ ಮೂಲಕ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಿರುವ ಅವರು, ಎಲ್ಲರ ಬೆಂಬಲ, ಶುಭ ಹಾರೈಕೆಗಳಿಂದ ಕೃತಜ್ಞನಾಗಿದ್ದೇನೆ. ಅಪಘಾತದ ಕ್ಷಣದಿಂದಲೂ ಅಧ್ಬುತ ರೀತಿಯಲ್ಲಿ ಬೆಂಬಲಿಸುತ್ತಿರುವ ಬಿಸಿಸಿಐ, ಸರ್ಕಾರಕ್ಕೆ ವಂದನೆಗಳು. ವೈದ್ಯರು, ಸಹ ಆಟಗಾರರು, ಅಭಿಮಾನಿಗಳಿಗೆ ಧನ್ಯವಾದ ಸಮರ್ಪಿಸಲು ನನ್ನಲ್ಲಿ ಪದಗಳಿಲ್ಲ. ಶೀಘ್ರವೇ ಮೈದಾನದಲ್ಲಿ ನಿಮ್ಮನ್ನು ಭೇಟಿಯಾಗಲು ಹಾತೊರೆಯುತ್ತಿದ್ದೇನೆ ಎಂದಿದ್ದಾರೆ. ಜೊತೆಗೆ, ಅಪಘಾತದ ಬಳಿಕ ಆಸ್ಪತ್ರೆಗೆ ದಾಖಲಿಸಲು ತಮಗೆ ನೆರವಾದ ರಜತ್‌ ಕುಮಾರ್‌, ನಿಶು ಕುಮಾರ್‌ಗೆ ವಿಶೇಷ ಅಭಿನಂದನೆ ಸಲ್ಲಿಸಿದ್ದು, ಅವರ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ.

ಕಾರು ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾದ ಭಾರತೀಯ ಕ್ರಿಕೆಟಿಗ ರಿಷಭ್‌ ಪಂತ್‌ ಇನ್ನೂ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, 6 ವಾರಗಳ ಬಳಿಕ ಮತ್ತೊಂದು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ತಿಳಿದುಬಂದಿದೆ. ಕ್ರಿಕೆಟ್ ಗೆ ಮರಳಲು ಅವರು ಇನ್ನಷ್ಟು ಸಮಯ ಕಾಯಬೇಕಾಗಬಹುದು ಎನ್ನಲಾಗಿದೆ. ಪಂತ್‌ ಈ ವರ್ಷದ ಐಪಿಎಲ್‌, ಏಕದಿನ ವಿಶ್ವಕಪ್‌ ಮಾತ್ರವಲ್ಲ 2024ರ ಐಪಿಎಲ್‌ ಹಾಗೂ ಟಿ20 ವಿಶ್ವಕಪ್‌ ನಲ್ಲಿಯೂ ಆಟವಾಡುವ ಸಾಧ್ಯತೆ ತೀರಾ ಕಡಿಮೆಯಿದೆ. 

ರಿಷಭ್ ಪಂತ್ ಡಿಸೆಂಬರ್ 29ರ ರಾತ್ರಿ ಗುರುವಾರ ತಮ್ಮ ಮರ್ಸಿಡೀಸ್‌ ಕಾರನ್ನು ತಾವೇ ಚಾಲನೆ ಮಾಡುತ್ತಾ ದೆಹಲಿಯಿಂದ ಉತ್ತರಾಖಂಡದ ರೂರ್ಕೀ ಎಂಬಲ್ಲಿರುವ ತಮ್ಮ ನಿವಾಸಕ್ಕೆ ಹೊರಟಿದ್ದರು. ಹೊಸ ವರ್ಷವನ್ನು ತಾಯಿಯ ಜೊತೆ ಆಚರಿಸಲು, ಅವರಿಗೆ ಅಚ್ಚರಿ ನೀಡಲು ತೆರಳುತ್ತಿದ್ದರು. 

ಈ ವೇಳೆ ಬೆಳಗ್ಗಿನ ಜಾವ 5.30ರ ಸುಮಾರಿಗೆ ಮೊಹಮದ್‌ಪುರ ಎಂಬಲ್ಲಿ ಅಪಘಾತ ಸಂಭವಿಸಿದೆ. ಕ್ಷಣಾರ್ಧದಲ್ಲೇ ಕಾರಿಗೆ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿದೆ. ಆದರೆ ಬೆಂಕಿ ಹೊತ್ತಿಕೊಳ್ಳುವ ಮುನ್ನ ಕೂದಲೆಳೆ ಅಂತರದಲ್ಲಿ ಪಂತ್‌ ಕಾರಿನ ಗಾಜು ಒಡೆದು ಹೊರಬಂದಿದ್ದು, ಬಲುದೊಡ್ಡ ಅಪಾಯದಿಂದ ಪಾರಾಗಿದ್ದಾರೆ. 

ರಿಷಭ್ ಪಂತ್ ಅವರು ಸದ್ಯ ಮುಂಬೈಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com