ಮೊದಲ ಟೆಸ್ಟ್, ಮೊದಲ ಇನ್ನಿಂಗ್ಸ್: 150 ರನ್ ಗೆ ವೆಸ್ಟ್ ಇಂಡೀಸ್ ಆಲೌಟ್, ದಿನದಂತ್ಯಕ್ಕೆ ಭಾರತ 80/0
ಡಾಮ್ನಿಕಾ: ವಿಂಡೀಸ್ ಪ್ರವಾಸದಲ್ಲಿರುವ ಭಾರತ ತಂಡ ತನ್ನ ಮೊದಲ ಟೆಸ್ಟ್ ಮೊದಲ ಇನ್ನಿಂಗ್ಸ್ ನಲ್ಲೇ ಪ್ರಾಬಲ್ಯ ಸಾಧಿಸಿದ್ದು, ವಿಂಡೀಸ್ ತಂಡವನ್ನು ಕೇವಲ 150 ರನ್ ಗಳಿಗೆ ಆಲೌಟ್ ಮಾಡಿದೆ.
ಡಾಮ್ನಿಕಾದಲ್ಲಿ ಬುಧವಾರ ಆರಂಭವಾದ ಮೊದಲ ಪಂದ್ಯದಲ್ಲಿ ಆರ್.ಅಶ್ವಿನ್ ಮತ್ತು ರವೀಂದ್ರ ಜಡೇಜಾ ಎದುರಾಳಿ ಬ್ಯಾಟರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಇವರಿಬ್ಬರು ಕ್ರಮವಾಗಿ ಐದು ಮತ್ತು ಮೂರು ವಿಕೆಟ್ ಉರುಳಿಸಿ ವಿಂಡೀಸ್ ತಂಡವನ್ನು ಕೇವಲ 150 ರನ್ ಗಳಿಗೆ ಕಟ್ಟಿಹಾಕಿದರು. ಉಳಿದಂತೆ ತಲಾ ಒಂದೊಂದು ವಿಕೆಟ್ ಕಬಳಿಸಿದ ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಸಹ ಭಾರತ ತಂಡ ಮೇಲುಗೈ ಸಾಧಿಸಲು ನೆರವಾದರು.
ಭಾರತ ಬೌಲಿಂಗ್ ಎದುರು ತಿಣುಕಾಡಿದ ಆತಿಥೇಯ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 64.3 ಓವರ್‌ಗಳಲ್ಲಿ 150 ರನ್‌ಗಳಿಗೆ ಅಲೌಟ್ ಆಗಿದೆ. ವಿಂಡೀಸ್ ಪರ ಅಲಿಕ್ ಅಥಾನಾಜೆ 47 ರನ್ ಗಳಿಸಿ ಭಾರತೀಯ ಬೌಲರ್ ಗಳಿಗೆ ಕೊಂಚ ವಿರೋಧ ತೋರಿದರು.
ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿರುವ ಭಾರತ ವಿಕೆಟ್ ನಷ್ಟವಿಲ್ಲದೆ 80 ರನ್ ಗಳಿಸಿದೆ. ಪದಾರ್ಪಣೆ ಪಂದ್ಯ ಆಡುತ್ತಿರುವ ಯಶಸ್ವಿ ಜೈಸ್ವಾಲ್ (40) ಮತ್ತು ನಾಯಕ ರೋಹಿತ್ ಶರ್ಮ (30) ಕ್ರೀಸ್‌ನಲ್ಲಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ