
ರಿಷಭ್ ಪಂತ್ ಅವರೊಂದಿಗೆ ರೈನಾ, ಶ್ರೀಶಾಂತ್ , ಭಜ್ಜಿ
ನವದೆಹಲಿ: ಮಾಜಿ ಕ್ರಿಕೆಟ್ ಆಟಗಾರರಾದ ಸುರೇಶ್ ರೈನಾ, ಹರ್ಭಜನ್ ಸಿಂಗ್ ಮತ್ತು ಶ್ರೀಶಾಂತ್ ಅವರು ಅನಿರೀಕ್ಷಿತವಾಗಿ ರಿಷಭ್ ಪಂತ್ ಅವರನ್ನು ಭೇಟಿಯಾಗಿದ್ದಾರೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ತೀವ್ರ ರೀತಿಯಲ್ಲಿ ಗಾಯಗೊಂಡು ಚೇತರಿಸಿಕೊಳ್ಳುತ್ತಿರುವ ಪಂತ್ ಅವರನ್ನು ಈ ಮೂವರು ಆಟಗಾರರು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.
ಪಂತ್ ಜೊತೆಗೆ ಮೂವರು ಖುಷಿಯಿಂದ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ.ಈ ಫೋಟೋವನ್ನು ರೈನಾ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಭ್ರಾತೃತ್ವವೇ ಸರ್ವಸ್ವ ..ಕುಟುಂಬವೇ ನಮ್ಮ ಹೃದಯ ಇರುವಲ್ಲಿ...ನಮ್ಮ ಸಹೋದರ ರಿಷಭ್ ಪಂತ್ ಅವರಿಗೆ ಶುಭವಾಗಲಿ ಮತ್ತು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುವುದಾಗಿ ಅವರು ಬರೆದುಕೊಂಡಿದ್ದಾರೆ.
ನಿಮ್ಮ ಕಂಬ್ಯಾಕ್ ಗಾಗಿ ಕಾಯುತ್ತಿದ್ದೇನೆ' ಎಂದು ಹರ್ಭಜನ್ ಟ್ವೀಟ್ ಮಾಡಿದ್ದಾರೆ. ಫೋಟೋದಲ್ಲಿ ಪಂತ್ ಅವರ ಬಲ ಮೊಣಕಾಲು ಬ್ಯಾಂಡೇಜ್ ಮಾಡಿರುವುದನ್ನು ನೋಡಬಹುದು. 25 ವರ್ಷದ ಪಂತ್ ಅವರಿಗೆ ಜನವರಿಯಲ್ಲಿ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.