ಕೆಎಲ್ ರಾಹುಲ್
ಕೆಎಲ್ ರಾಹುಲ್

ಟೀಂ ಇಂಡಿಯಾಗೆ ಭಾರಿ ಆಘಾತ: ಐಪಿಎಲ್ ಮಾತ್ರವಲ್ಲ, WTC ಫೈನಲ್ ನಿಂದಲೂ ಕೆಎಲ್ ರಾಹುಲ್ ಔಟ್!

ಕಾಲಿನ ಗಾಯಕ್ಕೆ ತುತ್ತಾಗಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಐಪಿಎಲ್ ನಿಂದ ಮಾತ್ರವಲ್ಲ..  ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ (WTC) ಫೈನಲ್ ಪಂದ್ಯದಿಂದಲೂ ಹೊರಗುಳಿದಿದ್ದಾರೆ.

ಬೆಂಗಳೂರು: ಕಾಲಿನ ಗಾಯಕ್ಕೆ ತುತ್ತಾಗಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಐಪಿಎಲ್ ನಿಂದ ಮಾತ್ರವಲ್ಲ..  ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ (WTC) ಫೈನಲ್ ಪಂದ್ಯದಿಂದಲೂ ಹೊರಗುಳಿದಿದ್ದಾರೆ.

ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ಕೆಎಲ್ ರಾಹುಲ್ ಗಾಯಗೊಂಡಿದ್ದರು. ಬಳಿಕ ಅವರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿತ್ತು. ಆದರೆ ಬಳಿಕ ವೈದ್ಯರ ಸೂಚನೆ ಮೇರೆಗೆ ಚಿಕಿತ್ಸೆಯ ಕಾರಣದಿಂದ ಐಪಿಎಲ್ ಟೂರ್ನಿಯಿಂದ ಹೊರಗುಳಿಯುವಂತೆ ಸಲಹೆ ನೀಡಲಾಗಿತ್ತು. ಅದರಂತೆ ಅವರು ಐಪಿಎಲ್ 2023 ಟೂರ್ನಿಯಿಂದ ಹೊರಬಿದ್ದಿದ್ದರು.

ಇದೀಗ ಕೆಎಲ್ ರಾಹುಲ್ ಅವರು ಮುಂಬರುವ ಜೂನ್ ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲೂ ಆಡುವ ಸಾಧ್ಯತೆಯಿಲ್ಲ. ತಂಡದಲ್ಲಿ ಸ್ಥಾನ ಪಡೆದಿರುವ ಅವರು ಅದರಿಂದಲೂ ಹೊರ ಬಿದಿದ್ದಾರೆ ಎನ್ನಲಾಗಿದೆ. ಈ ಕುರಿತು ಖ್ಯಾತ ಕ್ರಿಕೆಟ್ ಸುದ್ದಿ ವೆಬ್ ಸೈಟ್ ರಾಹುಲ್ ಈಗ  ಮುಂಬೈನಲ್ಲಿದ್ದು, ಸ್ಕ್ಯಾನಿಂಗ್ ಸೇರಿದಂತೆ ಹಲವು ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದಾರೆ. ಈ ಪರೀಕ್ಷೆಗಳ ಬಳಿಕ ಅವರ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಭಾಗವಹಿಸುವಿಕೆಯ ಬಗ್ಗೆ ಬಿಸಿಸಿಐ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ಈ ಬಗ್ಗೆ ಸ್ವತಃ ರಾಹುಲ್ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಮಾಹಿತಿ ನೀಡಿದ್ದು, '"ವೈದ್ಯಕೀಯ ತಂಡದ ಸಲಹೆಯನ್ನು ಪರಿಗಣಿಸಿ ಮತ್ತು ಸಮಾಲೋಚಿಸಿದ ನಂತರ, ನಾನು ಶೀಘ್ರದಲ್ಲೇ ನನ್ನ ತೊಡೆಯ ಶಸ್ತ್ರಚಿಕಿತ್ಸೆಗೆ ಒಳಗಾಗಲು ತೀರ್ಮಾನಿಸಲಾಗಿದೆ. ಮುಂಬರುವ ವಾರಗಳಲ್ಲಿ ನನ್ನ ಚೇತರಿಕೆಯ ಮೇಲೆ ನನ್ನ ಗಮನವಿರುತ್ತದೆ. ಇದು ಕಠಿಣ ನಿರ್ಧಾರವಾಗಿದೆಯಾದರೂ, ನಾನು ಸಂಪೂರ್ಣ ಚೇತರಿಸಿಕೊಳ್ಳಲು ಇದು ಸರಿಯಾದ ಮಾರ್ಗ ಎಂದು ಪೋಸ್ಟ್ ಮಾಡಿದ್ದಾರೆ.

ಇನ್ನು ರಾಹುಲ್ ಹೊರತಾಗಿ, ಎಡಗೈ ವೇಗಿ ಜಯದೇವ್ ಉನದ್ಕತ್ ಕೂಡ ಐಪಿಎಲ್ 2023 ರಿಂದ ಹೊರಗುಳಿದಿದ್ದಾರೆ. ಉನದ್ಕತ್ ಅವರ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಆಡುವ ಬಗ್ಗೆಯೂ ಅನುಮಾನವಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರ ಲೀಗ್ ಹಂತವು ಮೇ 21 ರಂದು ಕೊನೆಗೊಳ್ಳಲಿದ್ದು, ನಂತರ ಮೇ 23 ರಂದು ಡಬ್ಲ್ಯುಟಿಸಿ ಫೈನಲ್‌ ಗಾಗಿ ಭಾರತೀಯ ತಂಡವು ಲಂಡನ್‌ಗೆ ಹೊರಡಲಿದೆ ಎಂದು ವರದಿ ಹೇಳಿದೆ. ಪ್ಲೇಆಫ್‌ ನಲ್ಲಿ ಆಡುವ ಐಪಿಎಲ್ ತಂಡಗಳ ಆಟಗಾರರು ನಂತರದ ದಿನಾಂಕದಲ್ಲಿ ಲಂಡನ್‌ ಗೆ ತೆರಳುತ್ತಾರೆ ಎಂದು ತಿಳಿದುಬಂದಿದೆ.
 

Related Stories

No stories found.

Advertisement

X
Kannada Prabha
www.kannadaprabha.com