ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡ ಶುಬ್ಮನ್ ಗಿಲ್ ಅವರ ಶತಕದ ನೆರವಿನಿಂದ ಆರ್ ಸಿಬಿ ವಿರುದ್ಧ 6 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಸೋಲಿನೊಂದಿಗೆ ಆರ್‌ಸಿಬಿ ಟೂರ್ನಿಯಿಂದ ಹೊರಬಿದ್ದಿದ್ದು, ಮುಂಬೈ ಪ್ಲೇ ಆಫ್ ಪ್ರವೇಶಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ, ವಿರಾಟ್ ಕೊಹ್ಲಿಯ ಶತಕದ ನೆರವಿನೊಂದಿಗೆ ನಿಗದಿತ 20 ಓವರ್ಗೆ 2 ವಿಕೆಟ್ ನಷ್ಟಕ್ಕೆ 197 ರನ್ ಗಳ ಬೃಹತ್ ಮೊತ್ತ ಸೇರಿಸಿತು.
ಗೆಲುವಿಗೆ 198 ರನ್ ಗಳ ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್ ನಿಗದಿತ 19.1 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ198 ರನ್ ಗಳಿಸುವ ಮೂಲಕ 6 ವಿಕೆಟ್ಗಳ ಜಯ ದಾಖಲಿಸಿತು. ಈ ಮೂಲಕ ಆರ್‌ಸಿಬಿ ಪ್ಲೇಆಫ್ನಿಂದ ಹೊರಬಿದ್ದಿದ್ದು, ಮುಂಬೈ ಇಂಡಿಯನ್ಸ್ ನಾಲ್ಕನೇ ತಂಡವಾಗಿ ಪ್ಲೇಆಫ್ಗೆ ಲಗ್ಗೆ ಇಟ್ಟಿದೆ.
ಆರಂಭದಲ್ಲೇ ವೃದ್ಧಿಮಾನ್ ಸಾಹಾ ವಿಕೆಟ್ ಕಳೆದುಕೊಂಡ ಗುಜರಾತ್ ತಂಡಕ್ಕೆ ಶುಬ್ಮನ್ ಗಿಲ್ ಮತ್ತು ವಿಜಯ್ ಶಂಕರ್ ನಿರಾಸೆ ಮಾಡಲಿಲ್ಲ. ಇವರಿಬ್ಬರೂ ಶತಕದ ಜೊತೆಯಾಟವಾಡಿದರು. ಇದರ ನಡುವೆ ಗಿಲ್ ಮತ್ತು ಶಂಕರ್ ಇಬ್ಬರೂ ಒಬ್ಬರ ಬಳಿಕ ಮತ್ತೊಬ್ಬರಂತೆ ಅರ್ಧಶತಕದ ಗಡಿ ದಾಟಿದರು.
ಈಗ ಲೀಗ್ ಹಂತದ ಎಲ್ಲಾ ಪಂದ್ಯಗಳು ಅಂತ್ಯಗೊಂಡಿದ್ದು, ಮೇ 23ರಿಂದ ಐಪಿಎಲ್ 2023 ಪ್ಲೇಆಫ್ ಪಂದ್ಯಗಳು ಆರಂಭವಾಗಲಿದೆ. ಇದರಲ್ಲಿ ಅಗ್ರಸ್ಥಾನದಲ್ಲಿರುವ ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮೊದಲ ಪ್ಲೇಆಫ್ ಪಂದ್ಯದಲ್ಲಿ ಸೆಣಸಾಡಲಿದೆ. ಬಳಿಕ 2ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಡಲಿದ್ದು, ಮೊದಲ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ಗೆ ಲಗ್ಗೆಯಿಡಲಿದೆ.
Advertisement