
ಢಾಕಾ: ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಆಲ್ ರೌಂಡರ್ ಶಕೀಬ್ ಅಲ್ ಹಸನ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಸಂದರ್ಭದಲ್ಲಿ ಆಗಸ್ಟ್ 7 ರಂದು ರಫೀಕುಲ್ ಇಸ್ಲಾಂ ಎಂಬುವವರ ಮಗ ರುಬೆಲ್ ಕೊಲ್ಲಲ್ಪಟ್ಟಿದ್ದು, ಇದೇ ಪ್ರಕರಣದಲ್ಲಿ ಕ್ರಿಕೆಟಿಗ ಶಕೀಬ್ ಅಲ್ ಹಸನ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.
ಸ್ಥಳೀಯ ವರದಿಗಳ ಪ್ರಕಾರ, ಸಂತ್ರಸ್ಥ ರುಬೆಲ್ ಅಡಾಬೋರ್‌ನ ರಿಂಗ್ ರೋಡ್‌ನಲ್ಲಿ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಅಲ್ಲಿ ಆತನ ಎದೆ ಮತ್ತು ಹೊಟ್ಟೆಗೆ ಗುಂಡು ಬಿದ್ದಿತ್ತು. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಆಗಸ್ಟ್ 7ರಂದು ಮೃತಪಟ್ಟಿದ್ದ ಎಂದು ತಿಳಿದುಬಂದಿದೆ.
ಇದೀಗ ಈ ಪ್ರಕರಣ ಸಂಬಂಧ ರಾಜಧಾನಿ ಢಾಕಾದ ಅಡಬೋರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದಲ್ಲಿ ಶಕಿಬ್ 28ನೇ ಆರೋಪಿಯನ್ನಾಗಿ ಮಾಡಲಾಗಿದೆ. ಶಕೀಬ್ ಮಾತ್ರವಲ್ಲದೇ ಬಾಂಗ್ಲಾದೇಶದ ಜನಪ್ರಿಯ ನಟ ಫೆರ್ದೌಸ್ ಅಹ್ಮದ್ ರನ್ನು ಕೂಡ 55ನೇ ಆರೋಪಿ ಎಂದು ದಾಖಲಿಸಲಾಗಿದೆ.
ಶಕಿಬ್ ಮತ್ತು ಫೆದ್ರೌಸ್ ಇಬ್ಬರೂ ಈ ಹಿಂದೆ ಆಡಳಿತ ನಡೆಸಿದ್ದ ಶೇಕ್ ಹಸೀನಾರ ಅವಾಮಿ ಲೀಗ್ ಪಕ್ಷದ ಸಂಸತ್ತಿನ ಸದಸ್ಯರಾಗಿದ್ದರು. ಇನ್ನು ಈ ದೂರಿನಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಹೆಸರು ಕೂಡ ಇದ್ದು ಅವರ ಜೊತೆಗೆ 154 ಇತರರನ್ನು ಹೆಸರಿಸಲಾಗಿದೆ, ಹೆಚ್ಚುವರಿ 400-500 ಅಪರಿಚಿತ ವ್ಯಕ್ತಿಗಳನ್ನು ಆರೋಪಿಗಳನ್ನಾಗಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ಶಕೀಬ್ ಅಲ್ ಹಸನ್, ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಆತ್ಮೀಯರಾಗಿದ್ದ ಕಾರಣ ಅವರ ವಿರುದ್ಧ ಇಂತಹ ಪ್ರಕರಣಗಳು ದಾಖಲಾಗುತ್ತಿರುವ ಸಾಧ್ಯತೆ ಇದೆ.
ಪಾಕ್ ವಿರುದ್ಧ ಸರಣಿಯಲ್ಲಿ ನಿರತರಾಗಿರುವ ಶಕೀಬ್
ಇನ್ನು ಪ್ರಸ್ತುತ ಪಾಕಿಸ್ತಾನ ಪ್ರವಾಸ ಕೈಗೊಂಡಿರುವ ಬಾಂಗ್ಲಾದೇಶ ಕ್ರಿಕೆಟ್ ತಂಡದಲ್ಲಿ ಶಕೀಬ್ ಅಲ್ ಹಸನ್ ಕೂಡ ಇದ್ದು, ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಪಾಕಿಸ್ತಾನದ ವಿರುದ್ಧ ಟೆಸ್ಟ್ ಪಂದ್ಯವನ್ನಾಡುತ್ತಿದ್ದಾರೆ.
Advertisement