ಅಡಿಲೇಡ್: ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಭಾರತದ ಕಳಪೆ ಬ್ಯಾಟಿಂಗ್ ಪ್ರದರ್ಶನ 2ನೇ ಇನ್ನಿಂಗ್ಸ್ ನಲ್ಲೂ ಮುಂದುವರೆದಿದ್ದು, ತೀವ್ರ ಸಂಕಷ್ಟದಲ್ಲಿರುವ ಭಾರತ ತಂಡ 2ನೇ ದಿನದಾಟ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 128 ರನ್ ಗಳಿಸಿ ಇನ್ನೂ 29 ರನ್ ಹಿನ್ನಡೆಯಲ್ಲಿದೆ.
ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ತಂಡವನ್ನು 337 ರನ್ ಗಳಿಗೆ ನಿಯಂತ್ರಿಸಿದ ಭಾರತ ತಂಡ ತನ್ನ 2ನೇ ಇನ್ನಿಂಗ್ಸ್ ಆರಂಭಿಸಿದ್ದು, 2ನೇ ಇನ್ನಿಂಗ್ಸ್ ನಲ್ಲೂ ತನ್ನ ಕಳಪೆ ಬ್ಯಾಟಿಂಗ್ ಮುಂದುವರೆಸಿದೆ.
ಭಾರತದ ಆರಂಭಿಕ ಜೋಡಿ ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಜೋಡಿ ಮತ್ತೆ ಬಿಗ್ ಸ್ಕೋರ್ ಕಲೆಹಾಕುವಲ್ಲಿ ವಿಫಲವಾಗಿದ್ದು, ಜೈಸ್ವಾಲ್ 24 ರನ್ ಗಳಿಸಿ ಔಟಾದರೆ, ಕೆಎಲ್ ರಾಹುಲ್ ಕೇವಲ 7 ರನ್ ಗಳಿಸಿ ಕಮಿನ್ಸ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಕೂಡ ಶುಭ್ ಮನ್ ಗಿಲ್, ವಿರಾಟ್ ಕೊಹ್ಲಿ ಕೂಡ ಮತ್ತೆ ವಿಫಲವಾಗಿದ್ದು, ಗಿಲ್ ರನ್ ಗಳಿಗೆ 28ಕ್ಕೆ ಸೀಮಿತವಾದರೆ, ಕೊಹ್ಲಿ ಗಳಿಕೆ 11ರನ್ ಗಳಾಗಿತ್ತು. ಇನ್ನು ರಾಹುಲ್ ಗಾಗಿ ತಮ್ಮ ಅಗ್ರ ಕ್ರಮಾಂಕ ಬಿಟ್ಟುಕೊಟ್ಟಿದ್ದ ನಾಯಕ ರೋಹಿತ್ ಶರ್ಮಾ ಕೂಡ 5ನೇ ಕ್ರಮಾಂಕದಲ್ಲಿ ಎರಡೂ ಇನ್ನಿಂಗ್ಸ್ ನಲ್ಲೂ ಒಂದಂಕಿ ಮೊತ್ತಕ್ಕೆ ಔಟಾಗಿ ನಿರಾಶೆ ಮೂಡಿಸಿದ್ದಾರೆ.
ಒಟ್ಟಾರೆ ಭಾರತದ ಬಲಿಷ್ಟ ಬ್ಯಾಟಿಂಗ್ ಪಡೆ ಅಡಿಲೇಡ್ ಮೈದಾನದಲ್ಲಿ ಎರಡೂ ಇನ್ನಿಂಗ್ಸ್ ನಲ್ಲಿ ವಿಫಲವಾಗಿದ್ದು, ಇದೀಗ ರಿಷಬ್ ಪಂತ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಭಾರತಕ್ಕೆ ಆಸರೆಯಾಗಬೇಕಿದೆ. 2ನೇ ದಿನದಾಟದ ಅಂತ್ಯದ ವೇಳೆಗೆ 28ರನ್ ಗಳಿಸಿರುವ ಪಂತ್ ಮತ್ತು 15 ರನ್ ಗಳಿಸಿರುವ ನಿತೀಶ್ ಕುಮಾರ್ ರೆಡ್ಡಿ 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಭಾರತ ಇನ್ನೂ 29 ರನ್ ಗಳ ಹಿನ್ನಡೆಯಲ್ಲಿದ್ದು, ಆಸ್ಟ್ರೇಲಿಯಾಗೆ ದೊಡ್ಡ ಮೊತ್ತದ ಗುರಿ ನೀಡಿಬೇಕಿದೆ.
ಇನ್ನು ಆಸ್ಟ್ರೇಲಿಯಾ ಪರ ಪ್ಯಾಟ್ ಕಮಿನ್ಸ್ ಮತ್ತು ಸ್ಕಾಟ್ ಬೊಲ್ಯಾಂಡ್ ತಲಾ 2 ವಿಕೆಟ್ ಪಡೆದರೆ, ಮಿಚೆಲ್ ಸ್ಟಾರ್ಕ್ 1 ವಿಕೆಟ್ ಪಡೆದಿದ್ದಾರೆ.
Advertisement