
ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿ ದಿನೇ ದಿನೇ ರೋಚಕತೆ ಪಡೆಯುತ್ತಿದ್ದು, ಈ ನಡುವೆ ಆಟಗಾರರ ನಡುವಿನ ಸಂಘರ್ಷ ಕೂಡ ಕ್ರಿಕೆಟ್ ಗಿಂತ ಹೆಚ್ಚಾಗಿ ಸುದ್ದಿಗೆ ಗ್ರಾಸವಾಗುತ್ತಿದೆ.
ಹೌದು.. ಒಂದು ಕಾಲದಲ್ಲಿ ತಮ್ಮ ಆಕ್ರಮಣಕಾರಿ ಮನೋಭಾವದಿಂದಲೇ ಖ್ಯಾತಿಗಳಿಸಿದ್ದ ಆಸ್ಟ್ರೇಲಿಯಾ ಕ್ರಿಕೆಟಿಗರು ಅದೇ ಮನೋಭಾವದಿಂದ ಜಗತ್ತಿನಾದ್ಯಂತ ವ್ಯಾಪಕ ಕುಖ್ಯಾತಿ ಮತ್ತು ಇತರೆ ತಂಡಗಳಲ್ಲಿ ಭೀತಿ ಕೂಡ ಹುಟ್ಟಿಸಿದ್ದರು. ಆದರೆ ವಿಪರ್ಯಾಸ ಎಂದರೆ ಯಾವ ಆಕ್ರಮಣಕಾರಿ ಮನೋಭಾವ ಆಸಿಸ್ ಕ್ರಿಕೆಟಿಗರಿಗೆ ಖ್ಯಾತಿ ತಂದಿತ್ತೋ ಅದೇ ಆಕ್ರಮಣಕಾರಿ ಮನೋಭಾವ ಅವರ ನಿದ್ದೆಗೆಡಿಸಿದೆ.
ಪ್ರಮುಖವಾಗಿ ಹಾಲಿ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಭಾರತೀಯ ಆಟಗಾರರು ತೋರುತ್ತಿರುವ ಆಕ್ರಮಣಕಾರಿ ಮನೋಭಾವ ಆಸಿಸ್ ಆಟಗಾರರ ಕಂಗೆಡಿಸಿದ್ದು, ಒಂದಿಲ್ಲೊಂದು ವೇದಿಕೆಯಲ್ಲಿ ಈ ಬಗ್ಗೆ ನಿರಂತರವಾಗಿ ದೂರುತ್ತಿದ್ದಾರೆ.
ಅಂದಹಾಗೆ ಈ ಬಾರಿ ದೂರು ನೀಡುತ್ತಿರುವುದು ಆಸಿಸ್ ಸ್ಟಾರ್ ಆಟಗಾರ ಟ್ರಾವಿಸ್ ಹೆಡ್... ಹೌದು 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಆಸಿಸ್ ಪರ ಭರ್ಜರಿ ಶತಕ ಸಿಡಿಸಿ ಪ್ಯಾಟ್ ಕಮಿನ್ಸ್ ಪಡೆಗೆ ದೊಡ್ಡ ಮಟ್ಟದ ಮುನ್ನಡೆ ತಂದುಕೊಟ್ಟ ಟ್ರಾವಿಸ್ ಹೆಡ್ ಇದೀಗ ಭಾರತೀಯ ಬೌಲರ್ ಗಳ ಆಕ್ರಮಣಕಾರಿ ಶೀಲತೆ ಕುರಿತು ದೂರುತ್ತಿದ್ದಾರೆ.
ತಮ್ಮನ್ನು ಅದ್ಭುತ ಎಸೆತದ ಮೂಲಕ ಕ್ಲೀನ್ ಬೌಲ್ಡ್ ಮಾಡಿದ ಭಾರತದ ವೇಗಿ ಮಹಮದ್ ಸಿರಾಜ್ ಕುರಿತು ಟ್ರಾವಿಸ್ ಹೆಡ್ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಇಷ್ಟಕ್ಕೂ ಆಗಿದ್ದೇನು?
ಭಾರತ, ಆಸ್ಟ್ರೇಲಿಯಾ ನಡುವಿನ ಅಡಿಲೇಡ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಹಾಗೂ ಭಾರತದ ವೇಗಿ ಮೊಹಮ್ಮದ್ ಸಿರಾಜ್ ನಡುವೆ ಮಾತಿನ ಚಕಮಕಿ ನಡೆದಿದೆ. ಟ್ರಾವಿಸ್ ಹೆಡ್ ಅವರನ್ನು ಕ್ಲೀನ್ ಬೋಲ್ಡ್ ಮಾಡುತ್ತಿದ್ದಂತೆ ಸಿರಾಜ್ ಸಂಭ್ರಮ ಆಚರಿಸುತ್ತಿದ್ದರು. ಈ ವೇಳೆ ಟ್ರಾವಿಸ್ ಹೆಡ್ ಕೋಪದಲ್ಲಿ ಸಿರಾಜ್ ಬಗ್ಗೆ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.
2ನೇ ಟೆಸ್ಟ್‌ನಲ್ಲಿ ಕ್ರೀಸ್‌ಗೆ ಇಳಿದ ಟ್ರಾವಿಸ್ ಹೆಡ್ 4 ಸಿಕ್ಸರ್, 17 ಬೌಂಡರಿಗಳ ಬಾರಿಸಿ ಬರೊಬ್ಬರಿ 140ರನ್ ಗಳಿಸಿ ಭಾರತಕ್ಕೆ ಅಪಾಯಕಾರಿಯಾಗಿ ಪರಿಣಮಿಸಿದ್ದರು. ಈ ಹಂತದಲ್ಲಿ ಅವರ ವಿಕೆಟ್ ಪಡೆಯಲು ಭಾರತೀಯ ಬೌಲರ್ ಗಳು ಸಾಕಷ್ಟು ಶ್ರಮಪಟ್ಟು ಹೈರಾಣಾಗಿದ್ದರು. ಈ ಹಂತದಲ್ಲಿ ದಾಳಿಗಿಳಿದ ಮಹಮದ್ ಸಿರಾಜ್ ಅದ್ಭುತ ಆಟ ಪ್ರದರ್ಶಿಸುತ್ತಿದ್ದ ಟ್ರಾವಿಸ್ ಹೆಡ್ ರನ್ನು ತಮ್ಮ ಅದ್ಭುತ ಫುಲ್ ಟಾಸ್ ಎಸೆತದ ಮೂಲಕ ಕ್ಲೀನ್ ಬೌಲ್ಡ್ ಮಾಡಿದ್ದರು.
141ರನ್ ಸಿಡಿಸಿ ಭಾರತೀಯ ಬೌಲರ್ ಗಳಿಗೆ ಸಿಂಹಸ್ವಪ್ನವಾಗಿದ್ದ ಸ್ವತಃ ಟ್ರಾವಿಸ್ ಹೆಡ್ ಗೆ ಆಕ್ಷಣದಲ್ಲಿ ಏನಾಯಿತು ಎಂದು ತಿಳಿಯದಾಯಿತು. ಒಂದು ಕ್ಷಣ ಅವಾಕ್ಕಾದ ಹೆಡ್ ಬಳಿಕ ನಿರ್ಗಮಿಸಿದರು. ಈ ವೇಳೆ ಸಿರಾಜ್ ಮತ್ತು ಹೆಡ್ ನಡುವೆ ಮಾತಿನ ಸಮರ ನಡೆದಿದೆ. ಟ್ರಾವಿಸ್ ಹೆಡ್ ಕೋಪದ ಬಳಿಕ ಮೊಹಮ್ಮದ್ ಸಿರಾಜ್ ಅವರನ್ನ ಕ್ಯಾಪ್ಟನ್ ರೋಹಿತ್ ಶರ್ಮಾ ಸೇರಿದಂತೆ ಟೀಂ ಇಂಡಿಯಾ ಆಟಗಾರರು ಸಮಾಧಾನ ಪಡಿಸಿದ್ದಾರೆ. ಸಿರಾಜ್ ಮೇಲೆ ಟ್ರಾವಿಸ್ ಹೆಡ್ ಕೋಪದಲ್ಲಿ ಮಾತನಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
'ಹೊಗಳಿದ್ರೂ ಮೈಮೇಲೇ ಬೀಳ್ತಾನೆ.. ಇದೇ ಏನು ಅವರಿಗೆ ಬೇಕಾಗಿರೋದು': ಹೆಡ್ ಅಸಮಾಧಾನ
ಇನ್ನು ಸಿರಾಜ್ ನಡೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಟ್ರಾವಿಸ್ ಹೆಡ್, 'ನಾನು ಮಹಮದ್ ಸಿರಾಜ್ ಗೆ 'ವೆಲ್ ಬೌಲ್ಡ್' (ಉತ್ತಮ ಎಸೆತ) ಎಂದು ಹೊಗಳಿದೆ. ಆದರೆ ಆತ ಅದನ್ನು ತಪ್ಪಾಗಿ ಅರ್ಥೈಸಿಕೊಂಡ. ನನ್ನನ್ನು ಪೆವಿಲಿಯನ್ ಗೆ ಹೋಗುವಂತೆ ಆಕ್ರೋಶದಿಂದ ಹೇಳಿದ. ಕಳೆದ ಕೆಲವು ಇನ್ನಿಂಗ್ಸ್ ಗಳಲ್ಲಿ ನಡೆಯುತ್ತಿರುವುದು ನಮಗೆ ನಿರಾಶೆ ಮೂಡಿಸಿದೆ. ಅವರು (ಭಾರತ ಕ್ರಿಕೆಟ್ ತಂಡ) ಹಾಗೆ ಆಕ್ರಮಣಕಾರಿ ಪ್ರತಿಕ್ರಿಯೆಯನ್ನೇ ಬಯಸಿದರೆ ಹಾಗೇ ಹಾಗಲಿ.. ನಾವೂ ಕೂಡ ಅದೇ ರೀತಿ ಉತ್ತರಿಸುತ್ತೇವೆ ಎಂದು ಹೆಡ್ ದಿನದಾಟ ಮುಕ್ತಾಯದ ಬಳಿಕ ಫಾಕ್ಸ್ ಕ್ರಿಕೆಟ್‌ಗೆ ಪ್ರತಿಕ್ರಿಯಿಸಿದ್ದಾರೆ.
Advertisement