ಅಡಿಲೇಡ್: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಪಂದ್ಯ ನಿತ್ಯ ಒಂದಿಲ್ಲೊಂದು ವಿಚಾರಗಳಿಂದಾಗಿ ಭಾರಿ ಸದ್ದು ಮಾಡುತ್ತಿದ್ದು, ಈ ಬಾರಿ ಮಹಮದ್ ಸಿರಾಜ್ ಎಸೆದ ಜಗತ್ತಿನ ಅತೀ ವೇಗದ ಎಸೆತದ ವಿಚಾರವಾಗಿ ಸುದ್ದಿಗೆ ಗ್ರಾಸವಾಗಿದೆ.
ಹೌದು.. ಪಿಂಕ್ ಬಾಲ್ ಟೆಸ್ಟ್ ನ ಮೊದಲ ದಿನದಾಟದ ವೇಳೆ ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್ ವೇಳೆ ಮಹಮದ್ ಸಿರಾಜ್ ಎಸೆದ ಎಸೆತವೊಂದು 181.6kph ಎಂದು ದಾಖಲಾಗಿದ್ದು, ಇದು ಜಗತ್ತಿನ ಅತೀ ವೇಗದ ಎಸೆತವಾಗಿದೆ.
ಈ ಎಸೆತದ ಮೂಲಕ ಸಿರಾದ್ ಪಾಕಿಸ್ತಾನದ ಶೊಯೆಬ್ ಅಖ್ತರ್, ಆಸ್ಟ್ರೇಲಿಯಾದ ಬ್ರೆಟ್ ಲೀ, ಮಿಚೆಲ್ ಸ್ಟಾರ್ಕ್ ರ ವೇಗದ ಎಸೆತಗಳ ದಾಖಲೆಯನ್ನು ಮುರಿದಿದ್ದಾರೆ ಎಂದು ಹೇಳಲಾಗಿತ್ತು. ಒಂದು ವೇಳೆ ಸಿರಾಜ್ ಎಸೆದಿದ್ದು 181.6kph ಎಸೆತವೇ ಆಗಿದ್ದರೆ ಇದು ನಿಜಕ್ಕೂ ಜಗತ್ತಿನ ಅತೀ ವೇಗದ ಎಸೆತವಾಗಿರುತ್ತಿತ್ತು. ಆದರೆ ಈ ಎಸೆತ ದೋಷಪೂರಿತವಾಗಿತ್ತು ಎಂದು ಹೇಳಲಾಗಿದೆ.
ಭಾರತದ ಮೊದಲ ಇನ್ನಿಂಗ್ಸ್ ಬಳಿಕ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾಗೆ ಭಾರತದ ವೇಗಿಗಳು ಒಂದು ಹಂತದಲ್ಲಿ ಭೀತಿ ಮೂಡಿಸಿದರು. ಅದರಲ್ಲೂ ಭಾರತದ ಮಹಮದ್ ಸಿರಾಜ್ ತಮ್ಮ ಆಕ್ರಮಣಕಾರಿ ಮನೋಭಾವದ ಮೂಲಕ ಆಸಿಸ್ ಬ್ಯಾಟರ್ ಗಳ ಕಂಗೆಡಿಸಿದ್ದರು. ಇದೇ ವೇಳೆ ಸಿರಾಜ್ ಎಸೆತವೊಂದು ಗಂಟೆಗೆ 181 ಕಿ.ಮೀ ವೇಗದಲ್ಲಿತ್ತು ಎಂದು ಟಿವಿ ಪರದೆ ಮೇಲೆ ಮೂಡಿತು.
ಆಸ್ಟ್ರೇಲಿಯಾದ 25ನೇ ಓವರ್‌ನಲ್ಲಿ ಈ ವಿಚಿತ್ರ ಹಾಗೂ ಅಪರೂಪದ ಪ್ರಸಂಗ ನಡೆದಿದ್ದು, ಮೊಹಮ್ಮದ್ ಸಿರಾಜ್ ಆಫ್ ಸ್ಟಂಪ್‌ನಿಂದ ಆಚೆಗೆ ಹಾಕಿದ ಚೆಂಡನ್ನು ಆಸ್ಟ್ರೇಲಿಯಾದ ಬ್ಯಾಟರ್ ಮಾರ್ನಸ್ ಲಾಂಬುಶೇನ್ ಡೀಪ್ ಬ್ಯಾಕ್‌ವರ್ಡ್ ಪಾಯಿಂಟ್‌ಗೆ ಬೌಂಡರಿ ಬಾರಿಸಿದ್ದರು. ಪ್ರತಿ ಎಸೆತದ ಬಳಿಕ ಪ್ರದರ್ಶನವಾಗುವ ಸ್ಪೀಡೋಮೀಟರ್, ಆ ಚೆಂಡನ್ನು ಸಿರಾಜ್ ಗಂಟೆಗೆ 181.6 ಕಿಮೀ ವೇಗದಲ್ಲಿ ಎಸೆದಿದ್ದರು ಎಂದು ತೋರಿಸಿತ್ತು.
ತಾಂತ್ರಿಕದೋಷ
ಆದರೆ ಸಿರಾಜ್ ಎಸೆದ ಆ ಚೆಂಡು ಅಷ್ಟು ವೇಗದಿಂದ ಕೂಡಿರಲಿಲ್ಲ. ಬದಲಿಗೆ ಸ್ಪೀಡೋ ಮೀಟರ್ ತಾಂತ್ರಿಕ ದೋಷದಿಂದ ಪರದ ಮೇಲೆ ಹಾಗೆ ಕಾಣಿಸಿತ್ತು ಎಂದು ಹೇಳಲಾಗಿದೆ. ಸಿರಾಜ್ ಎಸೆತ ದಾಖಲೆ ಎಂದು ಅದಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಮೀಮ್ ಪುಟಗಳಿಗೆ ಇದು ಭರ್ಜರಿ ಆಹಾರವಾಗಿದ್ದು, ಈಗಾಗಲೇ ಟ್ರೋಲ್‌ಗಳ ವಸ್ತುವಾಗಿದ್ದ 'ಡಿಎಸ್‌ಪಿ' ಸಿರಾಜ್ ಈಗ ಈ ಎಸೆತದ ಮೂಲಕ ಮತ್ತಷ್ಟು ಸುದ್ದಿಗೆ ಗ್ರಾಸವಾಗುವಂತಾಗಿದೆ.
ವೇಗದ ಎಸೆತಗಳ ಕುರಿತು ಶೋಧ
ಇನ್ನು ಸಿರಾಜ್ ಈ ಎಸೆತದ ಬೆನ್ನಲ್ಲೇ ಅಂತರ್ಜಾಲದಲ್ಲಿ ವೇಗದ ಎಸೆತಗಳ ಕುರಿತು ವ್ಯಾಪಕ ಶೋಧ ನಡೆದಿದ್ದು, ಕ್ರಿಕೆಟ್ ಅಭಿಮಾನಿಗಳು ಕ್ರಿಕೆಟ್ ಇತಿಹಾಸದಲ್ಲಿ ದಾಖಲಾದ ವೇಗದ ಎಸೆತಗಳ ಬಗ್ಗೆ ತಿಳಿದುಕೊಳ್ಳಲು ಹುಡುಕಲು ಪ್ರಾರಂಭಿಸಿದ್ದಾರೆ.
ಕ್ರಿಕೆಟ್ ಜಗತ್ತಿನ ವೇಗದ ಎಸೆತಗಳು
ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ ಎಸೆತವನ್ನು ಬೌಲಿಂಗ್ ಮಾಡಿದ ನಿಜವಾದ ದಾಖಲೆ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಅವರದ್ದಾಗಿದೆ. 2003 ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅಖ್ತರ್ 161.3 km/h (100.23 mph) ವೇಗದ ಎಸೆತ ಎಸೆದಿದ್ದರು. ಇದು ಕ್ರಿಕೆಟ್ ಇತಿಹಾಸದಲ್ಲಿ ದಾಖಲಾದ ಅತಿ ವೇಗದ ಎಸೆತವಾಗಿದೆ. ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ಈ ಅದ್ಭುತ ಸಾಧನೆ ನಡೆದಿತ್ತು.
ನಂತರದ ಸ್ಥಾನದಲ್ಲಿ ಆಸ್ಟ್ರೇಲಿಯಾದ ಬ್ರೆಟ್ ಲೀ ಇದ್ದು, 2005 ರಲ್ಲಿ ನೇಪಿಯರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಬ್ರೆಟ್ ಲೀ 161.1 km/h (100.1 mph) ಎಸೆತವನ್ನು ಬೌಲಿಂಗ್ ಮಾಡಿದ್ದರು. ನ್ಯೂಜಿಲೆಂಡ್ ನ ಬ್ಯಾಟರ್ ಶಾನ್ ಟೈಟ್ 2010 ರಲ್ಲಿ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ಲೀ ಅವರ ಸಾಧನೆಯನ್ನು ಸರಿಗಟ್ಟಿದರು.
ವೆಸ್ಟ್ ಇಂಡೀಸ್ ವಿರುದ್ಧದ 1975-76ರ ಸರಣಿಯಲ್ಲಿ ಆಸೀಸ್‌ನ ಮಾಜಿ ದಂತಕಥೆ ಜೆಫ್ ಥಾಮ್ಸನ್ 160.6 km/h (99.8 mph) ವೇಗದಲ್ಲಿ ಬೌಲಿಂಗ್ ಮಾಡಿದ್ದರು. ಅಂತೆಯೇ ಇದೇ ಆಸಿಸ್ ತಂಡದ ಮಿಚೆಲ್ ಸ್ಟಾರ್ಕ್ 2015 ರಲ್ಲಿ ಪರ್ತ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ 160.4 km/h (99.7 mph) ಎಸೆತ ಎಸೆದು ಈ ಎಲೈಟ್ ಗುಂಪಿಗೆ ಸೇರಿದ್ದರು.
Advertisement