
ವೆಲ್ಲಿಂಗ್ಟನ್: ಒಂದೆಡೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಸುದ್ದಿ ನಡುವೆಯೇ ಅತ್ತ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಪಂದ್ಯ ಕೂಡ ಕ್ರಿಕೆಟ್ ಜಗತ್ತಿನ ಅಪರೂಪದ ದಾಖಲೆ ಮೂಲಕ ಸುದ್ದಿಗೆ ಗ್ರಾಸವಾಗಿದೆ.
ಹೌದು.. ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯದ ವೇಳೆ ಕ್ರಿಕೆಟ್ ಜನಕ ಇಂಗ್ಲೆಂಡ್ ತಂಡ ಅತಿ ಅಪರೂಪದ ದಾಖಲೆ ನಿರ್ಮಿಸಿದೆ.
2ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ವಿರುದ್ಧ 533ಕ್ಕೂ ಅಧಿಕ ರನ್ ಗಳ ಮುನ್ನಡೆ ಪಡೆದಿದ್ದು, ನ್ಯೂಜಿಲೆಂಡ್ ಗೆ ಬೃಹತ್ ಗುರಿ ನೀಡುವತ್ತ ದಾಪುಗಾಲಿರಿಸಿದೆ.
ಇಂಗ್ಲೆಂಡ್ ನ 4ಕ್ಕೂ ಅಧಿಕ ಬ್ಯಾಟರ್ ಗಳು 50+ ರನ್ ಗಳಿಸಿದ್ದು, ಇದು ಇಂಗ್ಲೆಂಡ್ ತಂಡದ 2ನೇ ಇನ್ನಿಂಗ್ಸ್ ಮೊತ್ತವನ್ನು 378 ರನ್ ಗಳಿಗೆ ಏರಿಸಿದೆ. ಅಂತೆಯೇ ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ವಿರುದ್ಧ ಬರೊಬ್ಬರಿ 533ರನ್ ಗಳ ಮುನ್ನಡೆ ಸಾಧಿಸುವಂತೆ ಮಾಡಿದೆ.
ಇನ್ನೂ 3 ದಿನಗಳ ಆಟ ಬಾಕಿ ಇದ್ದು, ಇಂಗ್ಲೆಂಡ್ ನ ಇನ್ನೂ ಐದು ವಿಕೆಟ್ ಬಾಕಿ ಇದೆ. 73ರನ್ ಗಳಿಸಿರುವ ಜೋರೂಟ್ ಮತ್ತು 35ರನ್ ಗಳಿಸಿರುವ ನಾಯಕ ಬೆನ್ ಸ್ಟೋಕ್ಸ್ 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಹೀಗಾಗಿ ನ್ಯೂಜಿಲೆಂಡ್ ಗೆ ಇಂಗ್ಲೆಂಡ್ ತಂಡ ಅತೀ ದೊಡ್ಡ ಗುರಿ ನೀಡುವ ಸಾಧ್ಯತೆ ಇದೆ.
147 ವರ್ಷಗಳಲ್ಲಿ ಇದೇ ಮೊದಲು, ಟೆಸ್ಟ್ ಕ್ರಿಕೆಟ್ ಇತಿಹಾಸದ ಅಪರೂಪದ ದಾಖಲೆ
ಇನ್ನು ಈ ಪಂದ್ಯದ ಮೂಲಕ ಇಂಗ್ಲೆಂಡ್ ತಂಡ ಟೆಸ್ಟ್ ಕ್ರಿಕೆಟ್ ನ ಅಪರೂಪದ ದಾಖಲೆ ನಿರ್ಮಿಸಿದ್ದು, ಟೆಸ್ಟ್ ಕ್ರಿಕೆಟ್ ನಲ್ಲಿ ತನ್ನ ರನ್ ಗಳಿಕೆಯನ್ನು 5 ಲಕ್ಷಕ್ಕೆ ಏರಿಸಿಕೊಂಡಿದೆ. ಇಂಗ್ಲೆಂಡ್ ತಂಡ ಈ ವರೆಗೂ 1082 ಟೆಸ್ಟ್ ಪಂದ್ಯಗಳನ್ನಾಡಿದ್ದು, 5 ಲಕ್ಷ ರನ್ ಪೇರಿಸಿದೆ.
ಆ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ತಂಡ ಎಂಬ ಕೀರ್ತಿಗೆ ಇಂಗ್ಲೆಂಡ್ ಭಾಜನವಾಗಿದೆ. ನಂತರದ ಸ್ಥಾನದಲ್ಲಿ ಆಸ್ಟ್ರೇಲಿಯಾ ಇದ್ದು, ಆಸಿಸ್ ಪಡೆ 4,28,868 ರನ್ ಗಳಿಸಿದೆ. ಮೂರನೇ ಸ್ಥಾನದಲ್ಲಿ ಭಾರತ ಕ್ರಿಕೆಟ್ ತಂಡವಿದ್ದು, ಭಾರತ 2,78,751 ರನ್ ಗಳನ್ನು ಗಳಿಸಿದೆ.
Advertisement