ಅಡಿಲೇಡ್: ಅಡಿಲೇಡ್‌ನಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಮತ್ತು ಟ್ರಾವಿಸ್ ಹೆಡ್ ನಡುವೆ ನಡೆದ ಜಗಳದ ವಿಚಾರಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಕ್ರಮ ಕೈಗೊಂಡಿದ್ದು, ಶಿಕ್ಷೆಯಲ್ಲೂ ತಾರತಮ್ಯ ತೋರಿದೆ.
ಹೌದು.. ಅಡಿಲೇಡ್‌ನಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯ ಕ್ರಿಕೆಟ್ ಗಿಂತ ಹೆಚ್ಚಾಗಿ ಭಾರತದ ವೇಗಿ ಮಹಮದ್ ಸಿರಾಜ್ ಮತ್ತು ಆಸಿಸ್ ದಾಂಡಿಗ ಟ್ರಾವಿಸ್ ಹೆಡ್ ನಡುವಿನ ಮೈದಾನದ ಜಗಳದ ವಿಚಾರವಾಗಿ ವ್ಯಾಪಕ ಸುದ್ದಿಯಾಗಿತ್ತು. ಪಂದ್ಯದ ಎರಡನೇ ದಿನದಂದು ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಮತ್ತು ಟ್ರಾವಿಸ್ ಹೆಡ್ ಮೈದಾನದಲ್ಲೇ ಪರಸ್ಪರ ಮಾತಿನ ಚಕಮಕಿ ನಡೆಸಿದ್ದರು.
ಶತಕ ಸಿಡಿಸಿ ಭರ್ಜರಿಯಾಗಿ ಬ್ಯಾಟ್ ಬೀಸುತ್ತಿದ್ದ ಹೆಡ್ ರನ್ನು ಸಿರಾಜ್ ಕ್ಲೀನ್ ಬೌಲ್ಡ್ ಮಾಡಿದ್ದರು. ಈ ವೇಳೆ ಹೆಡ್ ಸಿರಾಜ್ ಕುರಿತು ಏನೋ ಹೇಳಿದ್ದರು. ಇದಕ್ಕೆ ಸಿರಾಜ್ ಕೂಡ ಅಷ್ಟೇ ಆಕ್ರೋಶ ಭರಿತರಾಗಿ ಪ್ರತಿಕ್ರಿಯೆ ನೀಡಿದ್ದರು. ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗಿತ್ತು.
ಅಲ್ಲದೆ ದಿನದಾಟ ಮುಕ್ತಾಯದ ಬಳಿಕ ಇಬ್ಬರೂ ವಿಚಾರವನ್ನು ಮಾತನಾಡಿ ಪರಸ್ಪರ ಗೊಂದಲ ಬಗೆಹರಿಸಿಕೊಂಡಿದ್ದರು. ಆದರೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಐಸಿಸಿ, ಇದೀಗ ಇಬ್ಬರೂ ಆಟಗಾರರ ವಿರುದ್ಧ ಶಿಕ್ಷೆಯ ಕ್ರಮ ಕೈಗೊಂಡಿದೆ.
ಐಸಿಸಿ ಶಿಕ್ಷೆ
ಪಂದ್ಯ ಮುಗಿದ ಒಂದು ದಿನದ ನಂತರ, ಐಸಿಸಿ ಇಬ್ಬರೂ ಆಟಗಾರರಿಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ್ದು, ಮ್ಯಾಚ್ ರೆಫರಿ ರಂಜನ್ ಮದುಗಲೆ ಅವರು ನೀತಿ ಸಂಹಿತೆಯ ವಿಭಿನ್ನ ಕಲಂಗಳ ಅಡಿಯಲ್ಲಿ ಇಬ್ಬರೂ ಆಟಗಾರರನ್ನು ತಪ್ಪಿತಸ್ಥರೆಂದು ಘೋಷಿಸಿದ್ದಾರೆ ಮತ್ತು ಇಬ್ಬರೂ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಐಸಿಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಔಟಾದ ಬ್ಯಾಟ್ಸ್‌ಮನ್‌ಗೆ ಪ್ರಚೋದನೆ ನೀಡುವಂತಹ ಭಾಷೆ, ಸನ್ನೆ ಅಥವಾ ಕ್ರಿಯೆಯ ಬಳಕೆಗೆ ಸಂಬಂಧಿಸಿದ 2.5 ನೇ ವಿಧಿಯನ್ನು ಉಲ್ಲಂಘಿಸಿದ್ದಕ್ಕಾಗಿ ಸಿರಾಜ್ ತಪ್ಪಿತಸ್ಥರೆಂದು ಕಂಡುಬಂದಿದೆ. ಇದರ ಅಡಿಯಲ್ಲಿ ಸಿರಾಜ್ ಅವರ ಪಂದ್ಯ ಶುಲ್ಕದ ಶೇ.20 ರಷ್ಟು ಕಡಿತಗೊಳಿಸಲಾಗಿದೆ. ಇದಲ್ಲದೇ ಒಂದು ಡಿಮೆರಿಟ್ ಪಾಯಿಂಟ್ ಕೂಡ ನೀಡಲಾಗಿದೆ.
ಅಂತೆಯೇ ಸಹಾಯಕ ಸಿಬ್ಬಂದಿ, ಅಂಪೈರ್ ಅಥವಾ ಮ್ಯಾಚ್ ರೆಫರಿ ವಿರುದ್ಧ ನಿಂದನೀಯ ಭಾಷೆಯ ಬಳಕೆಯನ್ನು ವ್ಯವಹರಿಸುವ ಆರ್ಟಿಕಲ್ 2.13 ರ ಅಡಿಯಲ್ಲಿ ಟ್ರಾವಿಸ್ ಹೆಡ್ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಲಾಗಿದೆ. ಶಿಕ್ಷೆಯಾಗಿ, ಹೆಡ್ಗೆ ಕೇವಲ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ.
ಶಿಕ್ಷೆಯಲ್ಲೂ ICC ತಾರತಮ್ಯ
ಇನ್ನು ಈ ಕ್ರಮದಲ್ಲೂ ಐಸಿಸಿ ತಾರತಮ್ಯ ವೆಸಗಿದೆ ಎಂದು ಅಭಿಮಾನಿಗಳು ಆರೋಪ ಮಾಡುತ್ತಿದ್ದು, ಆಸಿಸ್ ಬ್ಯಾಟರ್ ಟ್ರಾವಿಸ್ ಹೆಡ್ ಗೆ ಡಿಮೆರಿಟ್ ಅಂಕ ನೀಡಿರುವ ಐಸಿಸಿ, ಭಾರತದ ಮಹಮದ್ ಸಿರಾಜ್ ಗೆ ಡಿಮೆರಿಟ್ ಅಂಕದ ಜೊತೆಗೆ ಪಂದ್ಯದ ಸಂಭಾವನೆಯ ಶೇ.20ರಷ್ಟನ್ನು ದಂಡ ಕೂಡ ಹೇರಿದೆ. ಇದು ಭಾರತದ ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ನಿಷೇಧದಿಂದ ಪಾರಾದ ಆಟಗಾರರು
ಇನ್ನು ಐಸಿಸಿ ನಿಯಮದ ಅನ್ವಯ ಕಳೆದ 24 ತಿಂಗಳಲ್ಲಿ ಇಬ್ಬರೂ ಆಟಗಾರರಿಗೆ ಇದು ಮೊದಲ ಡಿಮೆರಿಟ್ ಪಾಯಿಂಟ್ ಆಗಿದೆ. ಹೀಗಾಗಿ ಈ ಇಬ್ಬರೂ ಪಂದ್ಯದಿಂದ ನಿಷೇಧಕ್ಕೊಳಗಾಗುವುದರಿಂದ ಪಾರಾಗಿದ್ದಾರೆ.
Advertisement