ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿಗೆ ಅನಾರೋಗ್ಯ: ಜೀವನ ಪರ್ಯಂತ ಉಚಿತ ಚಿಕಿತ್ಸೆ ಘೋಷಿಸಿದ ಆಸ್ಪತ್ರೆ!
ಮುಂಬೈ: ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಸದ್ಯ ಥಾಣೆಯ ಆಕೃತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತೀವ್ರ ಮೂತ್ರ ಸೋಂಕು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಅವರು ಇದೀಗ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆಗೂ ಒಳಗಾಗಿದ್ದಾರೆ.
ಸದ್ಯ ಮಹಾರಾಷ್ಟ್ರದ ಥಾಣೆಯ ಆಕೃತಿ ಆಸ್ಪತ್ರೆಯಲ್ಲಿ ಕಾಂಬ್ಳೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಆಕೃತಿ ಆಸ್ಪತ್ರೆಯ ಡಾ.ವಿವೇಕ್ ತ್ರಿವೇದಿ, ಕಾಂಬ್ಳಿ ಅವರ ಜೀವನ ಪರ್ಯಂತ ಚಿಕಿತ್ಸೆ ಉಚಿತವಾಗಿರುತ್ತಿದೆ ಎಂದು ಘೋಷಿಸಿದರು. ಆಸ್ಪತ್ರೆಯ ಉಸ್ತುವಾರಿ ಎಸ್.ಸಿಂಗ್ ಅವರು ಉಚಿತ ಚಿಕಿತ್ಸೆಯ ನೀಡುವ ಬಗ್ಗೆ ನಿರ್ಧಾರ ಮಾಡಿದ್ದಾರೆ ಎಂದು ತಿಳಿಸಿದ ಅವರು, ಕಾಂಬ್ಳಿ ಚಿಕಿತ್ಸೆ ಬಗ್ಗೆ ಯಾರು ಯೋಚಿಸುವಂತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದೀಗ ಉಚಿತ ಚಿಕಿತ್ಸೆಯ ಬಗ್ಗೆ ನಿರ್ಧಾರ ಕೈಗೊಂಡಿರುವ ಉಸ್ತುವಾರಿ ಸಿಂಗ್ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮೂತ್ರದ ಸೋಂಕು ಮತ್ತು ಕಾಲು ಸೆಳೆತದಿಂದ ಕಾಂಬ್ಳಿ ಆಸ್ಪತ್ರೆಗೆ ದಾಖಲಾದ ನಂತರ, ಆಸ್ಪತ್ರೆಯ ಸಿಬ್ಬಂದಿ ಅವರಿಗೆ ಹಲವಾರು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದರು. ಅವರ ಆರೋಗ್ಯವನ್ನು ನಿರಂತರವಾಗಿ ಗಮನಿಸುತ್ತಿದ್ದೇವೆ. ಇಂದು ಹೆಚ್ಚಿನ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಡಾ.ವಿವೇಕ್ ತ್ರಿವೇದಿ ತಿಳಿಸಿದ್ದಾರೆ. ಸದ್ಯ ಕಾಂಬ್ಳಿ ಆರೋಗ್ಯ ಸ್ಥಿರವಾಗಿದೆ. ಆದರೆ, ಕಾಂಬ್ಬಿ ಅವರು ಐಸಿಯುನಲ್ಲಿ ವೈದ್ಯರ ಮೇಲ್ವಿಚಾರಣೆಯಲ್ಲಿರಬೇಕು ಎಂದು ಡಾ.ವಿವೇಕ್ ತ್ರಿವೇದಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಇನ್ನು ಆಸ್ಪತ್ರೆಯಲ್ಲಿನ ಚಿಕಿತ್ಸೆ ಬಗ್ಗೆ ಮಾತನಾಡಿರುವ ವಿನೋದ್ ಕಾಂಬ್ಳಿ ವೈದ್ಯರು ಹೇಳುವುದನ್ನು ಚಾಚೂ ತಪ್ಪದೇ ಪಾಲಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ ಈ ವೈದ್ಯರಿಂದಾಗಿ ನಾನು ಇಂದು ಜೀವಂತವಾಗಿದ್ದೇನೆ. ಇದೇ ವೇಳೆ ವೈದ್ಯಕೀಯ ತಂಡದ ನಡೆಯ ಬಗ್ಗೆ ಭಾವುಕರಾಗಿ ಸಂತಸ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ