
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿಯ 4ನೇ ಟೆಸ್ಟ್ ಪಂದ್ಯ ಕುತೂಹಕಾರಿ ಘಟ್ಟ ತಲುಪಿದ್ದು, 4ನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 2ನೇ ಇನ್ನಿಂಗ್ಸ್ ನಲ್ಲಿ 9 ವಿಕೆಟ್ ನಷ್ಟಕ್ಕೆ 228 ರನ್ ಗಳಸಿ 333ರನ್ ಗಳ ಮುನ್ನಡೆ ಸಾಧಿಸಿದೆ.
2ನೇ ಇನ್ನಿಂಗ್ಸ್ ನಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಭಾರತ ತಂಡ ಆಸ್ಟ್ರೇಲಿಯಾ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಬೇಕು ಎನ್ನುವ ಭಾರತೀಯ ಬೌಲರ್ ಗಳ ಪ್ರಯತ್ನಕ್ಕೆ ಆಸ್ಟ್ರೇಲಿಯಾದ ಬಾಲಂಗೋಚಿಗಳು ತಡೆಯಾಗಿದ್ದಾರೆ.
ಎರಡನೇ ಇನಿಂಗ್ಸ್‌ನಲ್ಲಿ ಸಾಧಾರಣ ಮೊತ್ತಕ್ಕೆ ಕುಸಿಯುವ ಆತಂಕದಲ್ಲಿದ್ದ ಆತೀಥೇಯ ತಂಡಕ್ಕೆ 'ಬಾಲಂಗೋಚಿ' ಬ್ಯಾಟರ್‌ಗಳಾದ ನೇಥನ್ ಲಯನ್ ಹಾಗೂ ಸ್ಕಾಟ್ ಬೋಲ್ಯಾಂಡ್ ಆಸರೆಯಾದರು. ಅವರ ಆಟದ ನೆರವಿನಿಂದ 4ನೇ ದಿನದಾಟದ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 228 ರನ್ ಕಲೆಹಾಕಿರುವ ಪ್ಯಾಟ್ ಕಮಿನ್ಸ್ ಪಡೆ, 333 ರನ್‌ಗಳ ಮುನ್ನಡೆ ಸಾಧಿಸಿದೆ.
ಆಸ್ಟ್ರೇಲಿಯಾ ಬಳಿ ಇನ್ನು 1 ವಿಕೆಟ್ ಇದ್ದು ಅಂತಿಮದಿನವಾದ ನಾಳೆ ಒಂದಷ್ಟು ಸಮಯ ಬ್ಯಾಟ್ ಮಾಡಿ ಭಾರತಕ್ಕೆ ಸವಾಲಿನ ಗುರಿ ನೀಡುವ ಇರಾದೆಯಲ್ಲಿದೆ.
ಆದರೆ ಇತ್ತ ಭಾರತ ತಂಡ ಕೂಡ ಮೊದಲ ಸೆಷನ್ ನಲ್ಲೇ ಆಸ್ಟ್ರೇಲಿಯಾವನ್ನು ಆಲೌಟ್ ಮಾಡಿ ಗುರಿಯನ್ನು ಬೆನ್ನು ಹತ್ತಿ 4ನೇ ಪಂದ್ಯವನ್ನು ಗೆಲ್ಲುವ ವಿಶ್ವಾಸದಲ್ಲಿದೆ.
ಆಸ್ಟ್ರೇಲಿಯಾ ಪರ ಮಾರ್ನಸ್ ಲಾಬುಶ್ಚೇನ್ 70ರನ್ ಗಳಿಸಿದರೆ, ನಾಯಕ ಪ್ಯಾಟ್ ಕಮಿನ್ಸ್ 41 ಮತ್ತು ನಾಥನ್ ಲೈಯಾನ್ 41 ರನ್ ಮತ್ತು ಸ್ಕಾಟ್ ಬೋಲ್ಯಾಂಡ್ 10ರನ್ ಗಳಿಸಿ ಅಂತಿಮ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಬುಮ್ರಾ, ಸಿರಾಜ್ ಭರ್ಜರಿ ಬೌಲಿಂಗ್
ಇನ್ನು ಭಾರತದ ಪರ 2ನೇ ಇನ್ನಿಂಗ್ಸ್ ನಲ್ಲಿ ಜಸ್ ಪ್ರೀತ್ ಬುಮ್ರಾ ಮತ್ತು ಮಹಮದ್ ಸಿರಾಜ್ ಭರ್ಜರಿ ಬೌಲಿಂಗ್ ಮಾಡಿದರು. ಬುಮ್ರಾ 4 ವಿಕೆಟ್ ಪಡೆದರೆ, ಸಿರಾಜ್ ಮೂರು ವಿಕೆಟ್ ಪಡೆದರು. ಅಂತೆಯೇ ರವೀಂದ್ರ ಜಡೇಜಾ 1 ವಿಕೆಟ್ ಪಡೆದರು.
Advertisement