
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿಯ 4ನೇ ಪಂದ್ಯದ ಅಂತಿಮ ದಿನ ಎಂಸಿಜಿ (ಮೆಲ್ಬೋರ್ನ್ ಕ್ರಿಕೆಟ್ ಮೈದಾನ) 87 ವರ್ಷಗಳ ದಾಖಲೆಯನ್ನು ಮುರಿದಿದೆ.
ಹೌದು.. ಆಸ್ಟ್ರೇಲಿಯಾ ನೀಡಿದ್ದ 339 ರನ್ ಗಳ ಸವಾಲಿನ ಗುರಿಯನ್ನು ಭಾರತ ಬೆನ್ನು ಹತ್ತಬೇಕಿತ್ತು. ಹೀಗಾಗಿ ಎರಡೂ ತಂಡಗಳಿಗೆ ಪಂದ್ಯ ಗೆಲ್ಲುವ ಅವಕಾಶವಿತ್ತು.
ಒಂದು ವೇಳೆ ರನ್ ಗಳಿಕೆ ಸಾಧ್ಯವಾಗದಿದ್ದರೂ ಪಂದ್ಯ ಡ್ರಾ ಆಗುವ ಸಾಧ್ಯತೆ ಇದ್ದು. ಹೀಗಾಗಿ ಅಂತಿಮ ದಿನದ ಆಟ ವ್ಯಾಪಕ ಕುತೂಹಲ ಮೂಡಿಸಿತ್ತು. ಈ ಅದ್ಭುತ ಕ್ರಿಕೆಟ್ ಅನ್ನುಕಣ್ತುಂಬಿಕೊಳ್ಳಲು ಮೆಲ್ಬೋರ್ನ್ ಕ್ರಿಕೆಟ್ ಮೈದಾನಕ್ಕೆ ಅಭಿಮಾನಿಗಳ ಸಾಗರವೇ ಹರಿದಿದ್ದು, ಇದು ಇದೀಗ ದಾಖಲೆಗೆ ಪಾತ್ರವಾಗಿದೆ.
87 ವರ್ಷಗಳ ದಾಖಲೆ ಪತನ
ಸೋಮವಾರ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದ ಒಟ್ಟು ಹಾಜರಾತಿ ಅಭೂತಪೂರ್ವ 350,700 ತಲುಪಿದ್ದು, ಇದು ಈವರೆಗಿನ ಗರಿಷ್ಠ ಹಾಜರಾತಿ ದಾಖಲೆಯಾಗಿದೆ. ಅಂತೆಯೇ 87 ವರ್ಷಗಳ ದಾಖಲೆಯನ್ನು ಮುರಿದಿದೆ.
ಅಂತಿಮ ದಿನದ ಊಟದ ಸಮಯದಲ್ಲಿ 51,371 ಪ್ರೇಕ್ಷಕರು ಹಾಜರಿದ್ದು, ಭಾರತವು 340 ರನ್‌ಗಳ ಗುರಿಯನ್ನು ಬೆನ್ನಟ್ಟಿದಾಗ ಐದನೇ ದಿನದ ಊಟದ ನಂತರ ಈ ಸಂಖ್ಯೆ 60,000 ಗಡಿ ದಾಟಿತು. 1937 ರ ಆಶಸ್ ಸರಣಿಯ ಸಮಯದಲ್ಲಿ ಶ್ರೇಷ್ಠ ಡಾನ್ ಬ್ರಾಡ್ಮನ್ ತಮ್ಮ ಬ್ಯಾಟಿಂಗ್ ವೇಳೆ 350,535 ಮಂದಿ ಪ್ರೇಕ್ಷಕರಿದ್ದರು.
ಇದು ಎಂಸಿಜಿಯಲ್ಲಿ ಟೆಸ್ಟ್ ಪಂದ್ಯದ ವೇಳೆ ಇದ್ದ ಗರಿಷ್ಠ ಹಾಜರಾತಿಯಾಗಿತ್ತು. ಇದೀಗ ಈ ದಾಖಲೆಯನ್ನು ಭಾರತ-ಆಸ್ಟ್ರೇಲಿಯಾ ನಡುವಿನ ಪಂದ್ಯ ಮುರಿದಿದೆ.
"ಐದನೇ ದಿನದ ಪ್ರಸ್ತುತ ಹಾಜರಾತಿ 51,371. ಒಟ್ಟಾರೆ ಹಾಜರಾತಿ 350,700 ಗಳಾಗಿದೆ. ಎಂಸಿಜಿಯಲ್ಲಿ ನಡೆದ ಯಾವುದೇ ಟೆಸ್ಟ್ ಪಂದ್ಯಕ್ಕೆ ಇದು ಅತ್ಯಧಿಕ ಹಾಜರಾತಿಯಾಗಿದೆ, ಇದು 1937 ರಲ್ಲಿ ಇಂಗ್ಲೆಂಡ್ ವಿರುದ್ಧ 6 ದಿನಗಳಲ್ಲಿ ಒಟ್ಟು 350,534 ರ ಹಾಜರಾತಿಯನ್ನು ಮೀರಿದೆ. ಆಸ್ಟ್ರೇಲಿಯಾದಲ್ಲಿ ನಡೆದ ಯಾವುದೇ ಟೆಸ್ಟ್ ಪಂದ್ಯಕ್ಕೆ ಇದು ಅತ್ಯಧಿಕ ಹಾಜರಾತಿಯಾಗಿದೆ" ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಣೆಯಲ್ಲಿ ತಿಳಿಸಿದೆ.
ಮೊದಲ ದಿನದಂದು 87,242 ಅಭಿಮಾನಿಗಳು ಪಂದ್ಯವನ್ನು ವೀಕ್ಷಿಸಿದ್ದರು. ಎರಡನೇ ದಿನದ 85,147 ಜನರು ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಮೂರನೇ ದಿನದ 83,073 ಅಭಿಮಾನಿಗಳು ಮತ್ತು ನಾಲ್ಕನೇ ದಿನ ಅಂದರೆ ಭಾನುವಾರ 43,867 ಪ್ರೇಕ್ಷಕರು ಹಾಜರಿದ್ದರು. ಅಂತಿಮ ದಿನದ ಊಟದ ಸಮಯದಲ್ಲಿ 51,371 ಪ್ರೇಕ್ಷಕರು ಹಾಜರಿದ್ದರು ಎನ್ನಲಾಗಿದೆ.
ಅಂತೆಯೇ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯವು 1999 ರಲ್ಲಿ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಭಾರತ-ಪಾಕಿಸ್ತಾನ ಪಂದ್ಯದ ನಂತರ ಅತಿ ಹೆಚ್ಚು ಜನರು ವೀಕ್ಷಿಸಿದ ಎರಡನೇ ಪಂದ್ಯವಾಗಿದೆ, ಆ ಪಂದ್ಯದಲ್ಲಿ ಒಟ್ಟಾರೆಯಾಗಿ 4,65,000 ಹಾಜರಾತಿ ಇತ್ತು.
Advertisement