
ಬಾರ್ಬಡೋಸ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಗೆದ್ದ ಬಳಿಕ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಪ್ರಶಸ್ತಿ ಸ್ವೀಕರಿಸಿದ ಶೈಲಿ ಭಾರಿ ವೈರಲ್ ಆಗುತ್ತಿದ್ದು, ಈ ಶೈಲಿಯ ಹಿಂದಿನ ಮಾಸ್ಟರ್ ಮೈಂಡ್ ತಂಡದ ಪ್ರಮುಖ ಸ್ಪಿನ್ನರ್ ಕುಲದೀಪ್ ಯಾದವ್ ಎಂದು ತಿಳಿದುಬಂದಿದೆ.
ಹೌದು.. ಬಾರ್ಬಡೋಸ್ ಮೈದಾನದಲ್ಲಿ ಶನಿವಾರ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು7 ರನ್ ಗಳ ಅಂತರದಲ್ಲಿ ವಿರೋಚಿತವಾಗಿ ಸೋಲಿಸಿ ಭಾರತ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಬರೊಬ್ಬರಿ 11 ವರ್ಷಗಳ ಬಳಿಕ ಭಾರತ ತಂಡ ಐಸಿಸಿ ಟ್ರೋಫಿ ಎತ್ತಿ ಹಿಡಿದಿದ್ದು, ಈ ಭಾವನಾತ್ಮಕ ಕ್ಷಣಗಳನ್ನು ತಂಡದ ಎಲ್ಲ ಆಟಗಾರರೂ ಸಂಭ್ರಮದಿಂದ ಆಚರಿಸಿದ್ದರು. ಅಂತೆಯೇ ಪ್ರಶಸ್ತಿ ಸ್ವೀಕಾರ ವೇಳೆ ನಾಯಕ ರೋಹಿತ್ ಶರ್ಮಾ ಪ್ರಶಸ್ತಿ ಸ್ವೀಕರಿಸಿದ ಶೈಲಿ ಕೂಡ ವ್ಯಾಪಕ ವೈರಲ್ ಆಗಿತ್ತು.
ರೋಹಿತ್ ಶರ್ಮಾ ವಿಶೇಷ ರೀತಿಯಲ್ಲಿ ಹೆಜ್ಜೆ ಹಾಕುತ್ತಾ ಬಂದು ಪ್ರಶಸ್ತಿ ಸ್ವೀಕರಿಸಿದ್ದರು. ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗಿತ್ತು.
ಲಿಯೋನಲ್ ಮೆಸ್ಸಿ ಶೈಲಿ
ಇನ್ನು ರೋಹಿತ್ ಶರ್ಮಾ ಪ್ರಶಸ್ತಿ ಸ್ವೀಕರಿಸಿದ ಶೈಲಿ ಅರ್ಜೆಂಟಿನಾ ಫುಟ್ಬಾಲ್ ತಂಡದ ಸೂಪರ್ ಸ್ಟಾರ್ ಲಿಯೋನಲ್ ಮೆಸ್ಸಿ ಅವರ ಶೈಲಿಯಾಗಿತ್ತು. ಈ ಹಿಂದೆ 2022ರಲ್ಲಿ ನಡೆದ ಫಿಫಾ ಫುಟ್ಬಾಲ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಗೆದ್ದ ಬಳಿಕ ಪ್ರಶಸ್ತಿ ಸ್ವೀಕಾರ ವೇಳೆ ಲಿಯೋನಲ್ ಮೆಸ್ಸಿ ಈ ವಿಶೇಷ ಶೈಲಿಯಲ್ಲಿ ಪ್ರಶಸ್ತಿ ಸ್ವೀಕರಿಸಿದ್ದರು. ಇದೀಗ ಇದೇ ಶೈಲಿಯನ್ನೇ ರೋಹಿತ್ ಶರ್ಮಾ ಅನುಕರಣೆ ಮಾಡಿ ಪ್ರಶಸ್ತಿ ಸ್ವೀಕರಿಸಿದ್ದಾರೆ.
ರೋಹಿತ್ ಶೈಲಿ ಹಿಂದೆ ಮಾಸ್ಟರ್ ಮೈಂಡ್ ಕುಲದೀಪ್ ಯಾದವ್
ಇನ್ನು ರೋಹಿತ್ ಶರ್ಮಾರ ಈ ಶೈಲಿಯ ಹಿಂದೆ ಭಾರತ ತಂಡದ ಸ್ಟಾರ್ ಸ್ಪಿನ್ನರ್ ಕುಲದೀಪ್ ಯಾದವ್ ಇದ್ದು ಅವರೇ ಈ ರೀತಿ ಪ್ರಶಸ್ತಿ ಸ್ವೀಕರಿಸುವಂತೆ ರೋಹಿತ್ ಶರ್ಮಾಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಪಂದ್ಯದ ಬಳಿಕ ನಡೆದ ಪದಕ ವಿತರಣೆ ವೇಳೆ ತಮ್ಮ ಹಿಂದೆ ನಿಂತಿದ್ದ ನಾಯಕ ರೋಹಿತ್ ಶರ್ಮಾಗೆ ಪ್ರಶಸ್ತಿ ಸ್ವೀಕಾರ ವೇಳೆ ಮೆಸ್ಸಿ ರೀತಿಯಲ್ಲೇ ಹೋಗಿ ಪ್ರಶಸ್ತಿ ಸ್ವೀಕರಿಸುವಂತೆ ಸಲಹೆ ನೀಡಿದ್ದಾರೆ.
ಇದಕ್ಕೆ ರೋಹಿತ್ ಶರ್ಮಾ ಕೂಡ ಓಕೆ ಎಂದಿದ್ದು, ಪಕ್ಕದಲ್ಲೇ ಇದ್ದ ಸೂರ್ಯ ಕುಮಾರ್ ಯಾದವ್ ಈ ವೇಳೆ ಕುಲದೀಪ್ ಯಾದವ್ ಗೆ ತರ್ಲೆ ಎಂದು ತಲೆ ಮೇಲೆ ಮೊಟಕಿದ್ದಾರೆ.
ಈ ಹಾಸ್ಯಭರಿತ ವಿಡಿಯೋ ಇದೀಗ ಎಲ್ಲಡೆ ವೈರಲ್ ಆಗುತ್ತಿದೆ.
Advertisement