
ಚೆನ್ನೈ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ವನಿತೆಯರ ತಂಡ 10 ವಿಕೆಟ್ ಭರ್ಜರಿ ಜಯ ದಾಖಲಿಸಿದೆ.
ದಕ್ಷಿಣ ಆಫ್ರಿಕಾ ನೀಡಿದ 37ರನ್ ಗಳ ಅಲ್ಪ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೇ 3 ರನ್ ಗಳಿಸಿ 10 ವಿಕೆಟ್ ಅಂತರದ ಭರ್ಜರಿ ಜಯ ದಾಖಲಿಸಿತು. ಭಾರತದ ಪರ ಶುಭಾ ಸತೀಶ್ 13 ರನ್ ಮತ್ತು ಶಫಾಲಿ ವರ್ಮಾ 24 ರನ್ ಗಳಿಸಿ ಗೆಲುವಿನ ಔಪಚಾರಿಕತೆ ಮುಕ್ತಾಯಗೊಳಿಸಿದರು.
ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ಭರ್ಜರಿ ಬ್ಯಾಟಿಂಗ್
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿತು. ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ದಾಖಲೆಯ 603 ರನ್ ಪೇರಿಸಿತು. ಭಾರತದ ಪರ ಶಫಾಲಿ ವರ್ಮಾ ದಾಖಲೆ ದ್ವಿಶತಕ (205 ರನ್) ಗಳಿಸಿದರೆ, ಸ್ಮೃತಿ ಮಂದಾನ 149ರನ್ ಪೇರಿಸಿದರು. ಜಮೀಮಾ ರೋಡ್ರಿಗಸ್ (55 ರನ್), ನಾಯಕಿ ಹರ್ಮನ್ ಪ್ರೀತ್ ಕೌರ್ (69 ರನ್) ಮತ್ತು ರಿಚಾ ಘೋಷ್ (86 ರನ್) ಅಮೋಘ ಅರ್ಧಶತಕ ಸಿಡಿಸಿ ತಂಡದ ಮೊತ್ತ 600 ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಭಾರತ 6 ವಿಕೆಟ್ ನಷ್ಟಕ್ಕೆ 603 ರನ್ ಗಳಿಸಿದ್ದ ವೇಳೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
ಮೊದಲ ಇನ್ನಿಂಗ್ಸ್ ನಲ್ಲಿ 266ರನ್ ದಕ್ಷಿಣ ಆಫ್ರಿಕಾ ಕುಸಿತ
ಇನ್ನು ಭಾರತದ ಬೃಹತ್ ಮೊತ್ತಕ್ಕೆ ಉತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ ಕೇವಲ 266ರನ್ ಗಳಿಗೇ ಸರ್ವಪತನ ಕಂಡಿತು. ಹರಿಣಗಳ ಪರ ಆರಂಭಿಕ ಆಟಗಾರ್ತಿ ಅನ್ನೆಕೆ ಬಾಶ್ 39 ರನ್ ಗಳಿಸಿದರೆ, ಸುನ್ ಲೂಸ್ (65 ರನ್) ಮತ್ತು ಮರಿಜಾನ್ನೆ ಕಾಪ್ (74 ರನ್) ಅರ್ಧಶತಕ ಗಳಿಸಿದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ ವನಿತೆಯರ ತಂಡ 266ರನ್ ಆಲೌಟ್ ಆಯಿತು. ಭಾರತದ ಪರ ಸ್ನೇಹಾ ರಾಣಾ 8 ವಿಕೆಟ್ ಕಬಳಿಸಿ ದಾಖಲೆ ನಿರ್ಮಿಸಿದರೆ, ದೀಪ್ತಿ ಶರ್ಮಾ 2 ವಿಕೆಟ್ ಪಡೆದರು.
ಫಾಲೋ ಆನ್ ಹೇರಿದ ಭಾರತ
ಇನ್ನು ಇದೇ ವೇಳೆ ದಕ್ಷಿಣ ಆಫ್ರಿಕಾ ಮೇಲೆ ಫಾಲೋ ಆನ್ ಹೇರಿದ ಭಾರತ ತಂಡ ಮತ್ತೆ ದಕ್ಷಿಣ ಆಫ್ರಿಕಾಗೆ 2ನೇ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ನೀಡಿತು. ಮೊದಲ ಇನ್ನಿಂಗ್ಸ್ ನಲ್ಲಿ ತೀವ್ರ ಹಿನ್ನಡೆ ಅನುಭವಿಸಿದ್ದ ದಕ್ಷಿಣ ಆಫ್ರಿಕಾ ವನಿತೆಯರು ಎರಡನೇ ಇನ್ನಿಂಗ್ಸ್ ನಲ್ಲಿ ಎಚ್ಚರಿಕೆಯ ಆಟವಾಡಿದರು. ಇನ್ನಿಂಗ್ಸ್ ಆರಂಭಿಸಿದ ನಾಯಕಿ ವೋಲ್ವಾರ್ಡ್ (122 ರನ್), ಸುನ್ ಲೂಸ್ (109 ರನ್) ಶತಕ ಸಿಡಿಸಿ ಭಾರತಕ್ಕೆ ತಿರುಗೇಟು ನೀಡಿದರು.
ಈ ಹಂತದಲ್ಲಿ ದಾಳಿಗಿಳಿದ ನಾಯಕಿ ಹರ್ಮನ್ ಪ್ರೀತ್ ಕೌರ್ ಶತಕ ಸಿಡಿಸಿ ಅಪಾಯಕಾರಿಯಾಗಿದ್ದ ಸುನ್ ಲೂಸ್ ರನ್ನು ಕ್ಲೀನ್ ಬೋಲ್ಡ್ ಮಾಡಿದರು. ಬಳಿಕ ಸತತ ವಿಕೆಟ್ ಪತನದ ಬೆನ್ನಲ್ಲೇ ನಾಡಿನ್ ಡಿ ಕ್ಲರ್ಕ್ (61 ರನ್) ಅರ್ಧಶತಕ ಸಿಡಿಸಿ ಮತ್ತೆ ಭಾರತಕ್ಕೆ ತಲೆನೋವಾದರು. ಅವರನ್ನು ರಾಜೇಶ್ವರಿ ಗಾಯಕ್ವಾಡ್ ಬೋಲ್ಡ್ ಮಾಡಿ ಪೆಲಿವಿಯನ್ ಗೆ ಅಟ್ಟಿದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ ತಂಡ 373 ರನ್ ಗಳಿಗೆ ಸರ್ವಪತನ ಕಂಡಿತು. ಅಲ್ಲದೆ ಭಾರತಕ್ಕೆ ಗೆಲ್ಲಲು ಕೇವಲ 37 ರನ್ ಗಳ ಗುರಿ ನೀಡಿ ಇನ್ನಿಂಗ್ಸ್ ಸೋಲಿನ ಮುಜುಗರದಿಂದ ತಪ್ಪಿಸಿಕೊಂಡಿತು.
ಭಾರತದ ಪರ ಸ್ನೇಹ ರಾಣಾ, ದೀಪ್ತಿ ಶರ್ಮಾ, ರಾಜೇಶ್ವರಿ ಗಾಯಕ್ವಾಡ್ ತಲಾ 2 ವಿಕೆಟ್ ಪಡೆದರೆ, ಪೂಜಾವಸ್ತ್ರಾಕರ್, ಶಫಾಲಿ ವರ್ಮಾ ಮತ್ತು ಹರ್ಮನ್ ಪ್ರೀತ್ ಕೌರ್ ತಲಾ 1 ವಿಕೆಟ್ ಪಡೆದರು.
Advertisement