
ನವದೆಹಲಿ: ರಕ್ತದ ಕ್ಯಾನ್ಸರ್‌ನಿಂದ ಲಂಡನ್ ನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭಾರತದ ಮಾಜಿ ಕೋಚ್ ಅಂಶುಮಾನ್ ಗಾಯಕ್ವಾಡ್ ಅವರ ಚಿಕಿತ್ಸೆಗಾಗಿ 1 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ಬಿಸಿಸಿಐ ಭಾನುವಾರ ನಿರ್ಧರಿಸಿದೆ. ಗಾಯಕ್ವಾಡ್ ಅವರಿಗೆ ನೆರವಾಗುವಂತೆ ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಹಾಗೂ ಸಂದೀಪ್ ಪಾಟೀಲ್ ಮನವಿ ಮಾಡಿದ ಬೆನ್ನಲ್ಲೇ ಬಿಸಿಸಿಐ ಈ ನಿರ್ಧಾರಕ್ಕೆ ಬಂದಿದೆ.
"ಕ್ಯಾನ್ಸರ್‌ನಿಂದ ಬಳಲುತ್ತಿರುವ ಭಾರತದ ಹಿರಿಯ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್ ಅವರಿಗೆ ಆರ್ಥಿಕ ನೆರವು ನೀಡಲು ತಕ್ಷಣವೇ 1 ಕೋಟಿ ರೂ. ಬಿಡುಗಡೆ ಮಾಡುವಂತೆ ಜಯ್ ಶಾ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಸೂಚನೆ ನೀಡಿದ್ದಾರೆ" ಎಂದು ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಹೇಳಿಕೆಯಲ್ಲಿ ತಿಳಿಸಿದೆ.
ಭಾರತದ ಮಾಜಿ ನಾಯಕ ಡಿ ಕೆ ಗಾಯಕ್ವಾಡ್ ಅವರ ಪುತ್ರ ಗಾಯಕ್ವಾಡ್ ಅವರು ಲಂಡನ್‌ನ ಕಿಂಗ್ಸ್ ಕಾಲೇಜು ಆಸ್ಪತ್ರೆಯಲ್ಲಿ ರಕ್ತದ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಪರಿಸ್ಥಿತಿಯನ್ನು ಅವಲೋಕಿಸಲು ಮತ್ತು ನೆರವು ನೀಡಲು ಗಾಯಕ್ವಾಡ್ ಅವರ ಕುಟುಂಬದೊಂದಿಗೆ ಜಯ್ ಶಾ ಮಾತನಾಡಿದ್ದಾರೆ. ಈ ಬಿಕ್ಕಟ್ಟಿನ ಸಮಯದಲ್ಲಿ ಮಂಡಳಿಯು ಗಾಯಕ್ವಾಡ್ ಅವರ ಕುಟುಂಬದ ಬೆಂಬಲಕ್ಕೆ ನಿಂತಿದೆ ಮತ್ತು ಗಾಯಕ್ವಾಡ್ ಅವರ ತ್ವರಿತ ಚೇತರಿಕೆಗೆ ಅಗತ್ಯವಾದ ಎಲ್ಲ ನೆರವನ್ನು ಮಾಡುತ್ತದೆ ಎಂದು ಬಿಸಿಸಿಐ ಹೇಳಿದೆ.
Advertisement