
ಪಳ್ಳೆಕೆಲೆ: ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯ ಗಳಿಸಿದ್ದು, ಆ ಮೂಲಕ 3 ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಪಳ್ಳೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ ನೀಡಿದ್ದ 214ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಶ್ರೀಲಂಕಾ ತಂಡ ಉತ್ತಮ ಆರಂಭದ ಹೊರತಾಗಿಯೂ ಗುರಿ ಬೇದಿಸುವಲ್ಲಿ ವಿಫಲವಾಯಿತು.
ನಿಗದಿತ 19.2 ಓವರ್ ನಲ್ಲಿ 170 ರನ್ ಗಳಿಗೆ ಆಲೌಟ್ ಆಯಿತು. ಆ ಮೂಲಕ 43 ರನ್ ಗಳ ಅಂತರದಲ್ಲಿ ಭಾರತದ ಎದುರು ಪರಾಭವಗೊಂಡಿತು.
ಶ್ರೀಲಂಕಾ ಪರ ಆರಂಭಿಕ ಆಟಗಾರ ಪತುಂ ನಿಸ್ಸಾಂಕಾ 79 ರನ್ ಗಳಿಸಿದರೆ, ಕುಶಾಲ್ ಮೆಂಡಿಸ್ 45 ರನ್ ಗಳಿಸಿದರು. ಕುಸಾಲ್ ಪೆರೆರಾ 20 ರನ್ ಗಳಿಸಿ ಅಕ್ಸರ್ ಪಟೇಲ್ ಗೆ ವಿಕೆಟ್ ಒಪ್ಪಿಸಿದರೆ, 12 ರನ್ ಗಳಿಸಿದ್ದ ಕಮಿಂಡು ಮೆಂಡಿಸ್ ರಿಯಾನ್ ಪರಾಗ್ ಬೌಲಿಂಗ್ ನಲ್ಲಿ ಔಟಾದರು.
ಉಳಿದಂತೆ ಇನ್ನಾವ ಆಟಗಾರನೂ ಎರಡಂಕಿ ದಾಟಲಿಲ್ಲ. ಚರಿತ್ ಅಸಲಂಕಾ, ಶನಕಾ, ಶೂನ್ಯ ಸುತ್ತಿದರೆ, ವನಿಂದು ಹಸರಂಗಾ, ಮಹೀಶ್ ತೀಕ್ಷಣ ಮತ್ತು ಪತಿರಾಣ ಒಂದಂಕಿ ಮೊತ್ತ ಗಳಿಸಿದರು.
ಭಾರತದ ಪರ ರಿಯಾನ್ ಪರಾಗ್ 3 ವಿಕೆಟ್ ಪಡೆದರೆ, ಅರ್ಶ್ ದೀಪ್ ಸಿಂಗ್ ಮತ್ತು ಅಕ್ಸರ್ ಪಟೇಲ್ ತಲಾ 2 ವಿಕೆಟ್, ಸಿರಾಜ್ ಮತ್ತು ರವಿ ಬಿಷ್ಣೋಯ್ ತಲಾ 1 ವಿಕೆಟ್ ಪಡೆದರು.
Advertisement