
ಗುಯಾನಾ: ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಟಿ-20 ವಿಶ್ವಕಪ್'ನ 14ನೇ ಪಂದ್ಯದಲ್ಲಿ ಬಲಿಷ್ಠ ನ್ಯೂಜಿಲೆಂಡ್ ತಂಡಕ್ಕೆ ಆಘಾತಕಾರಿ ಸೋಲುಣಿಸಿದ ಅಫ್ಘಾನಿಸ್ತಾನ ತಂಡ ಭರ್ಜರಿ ಗೆಲುವು ದಾಖಲಿಸಿದೆ.
ಆರಂಭಿಕ ಬ್ಯಾಟರ್ ರಹಮಾನುಲ್ಲಾ ಗುರ್ಬಾಜ್ ಅವರ ಅಮೋಘ ಅರ್ಧಶತಕ, ರಶೀದ್ ಖಾನ್ ಮತ್ತು ಫಜಲ್ಹಕ್ ಫಾರೂಕಿ ಅವರ ನಾಲ್ಕು ವಿಕೆಟ್‌ಗಳ ಗಳಿಕೆಯ ನೆರವಿನಿಂದ ಅಫ್ಘಾನಿಸ್ತಾನ ತಂಡವು ತಮ್ಮ ಸಿ ಗುಂಪಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 84 ರನ್‌ಗಳ ಐತಿಹಾಸಿಕ ಗೆಲುವು ಸಾಧಿಸಿತು.
ಅಫ್ಘಾನಿಸ್ತಾನ ನೀಡಿದ್ದ 160 ರನ್‌ಗಳ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ನಿಯಮಿತವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಲೇ ಹೋಯಿತು. ಅಂತಿಮವಾಗಿ 15.2 ಓವರ್‌ಗಳಲ್ಲಿ ಕೇವಲ 76 ರನ್‌ಗಳಿಗೆ ಸರ್ವಪತನ ಕಂಡಿತು.
ನ್ಯೂಜಿಲೆಂಡ್ ತಂಡದ ಪರ ಗ್ಲೆನ್ ಫಿಲಿಪ್ಸ್ 18 ರನ್ ಮತ್ತು ಮ್ಯಾಟ್ ಹೆನ್ರಿ 12 ರನ್ ಗಳಿಸಿದ್ದು ಬಿಟ್ಟರೆ, ಉಳಿದ ಯಾವ ಬ್ಯಾಟರ್‌ಗಳೂ ಎರಡಂಕಿ ಮೊತ್ತ ದಾಟಲು ಸಾಧ್ಯವಾಗದೆ, ವಿಫಲರಾದರು. ಇದು ಕೇನ್ ವಿಲಿಯಮ್ಸನ್ ನಾಯಕತ್ವದ ಕಿವೀಸ್ ಸೋಲಿಗೆ ಕಾರಣವಾಯಿತು.
ಬೌಲಿಂಗ್‌ನಲ್ಲಿ ಅಫ್ಘಾನಿಸ್ತಾನ ತಂಡದ ಪರ ರಶೀದ್ ಖಾನ್ 4 ಓವರ್‌ಗಳಲ್ಲಿ 17 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಫಜಲ್ಹಕ್ ಫಾರೂಕಿ 3.2 ಓವರ್‌ಗಳಲ್ಲಿ 17 ರನ್ ನೀಡಿ 4 ವಿಕೆಟ್ ಪಡೆದರು. ಅಲ್ಲದೆ ಆಲ್‌ರೌಂಡರ್ ಮೊಹಮ್ಮದ್ ನಬಿ ಕೂಡ ಎರಡು ವಿಕೆಟ್ ಪಡೆದು ಮಿಂಚಿದರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಅಫ್ಘಾನಿಸ್ತಾನ ತಂಡದ ಬ್ಯಾಟಿಂಗ್ ಆರಂಭಿಸಿದ ರಹಮಾನುಲ್ಲಾ ಗುರ್ಬಾಜ್ ಮತ್ತು ಇಬ್ರಾಹಿಂ ಝದ್ರಾನ್ ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 14.3 ಓವರ್‌ಗಳಲ್ಲಿ 103 ರನ್‌ಗಳ ಜೊತೆಯಾಟ ನಿರ್ಮಿಸಿದರು.
ರಹಮಾನುಲ್ಲಾ ಗುರ್ಬಾಜ್ 56 ಎಸೆತಗಳಲ್ಲಿ 5 ಬೌಂಡರಿ ಹಾಗೂ 5 ಬೌಂಡರಿಗಳ ಸಮೇತ 80 ರನ್ ಬಾರಿಸಿದರೆ, ಇಬ್ರಾಹಿಂ ಝದ್ರಾನ್ 41 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಮೂಲಕ 44 ರನ್ ಗಳಿಸಿದರು. ಅಜ್ಮತುಲ್ಲಾ ಓಮರ್ಜಾಯ್ 22 ರನ್ ಗಳಿಸಿ ತಂಡದ ಮೊತ್ತವನ್ನು 6 ವಿಕೆಟ್‌ಗೆ 159 ರನ್‌ಗಳಿಗೆ ಕೊಂಡೊಯ್ದರು.
ಬೌಲಿಂಗ್‌ನಲ್ಲಿ ನ್ಯೂಜಿಲೆಂಡ್ ಪರ ಟ್ರೆಂಟ್ ಬೌಲ್ಟ್ 4 ಓವರ್‌ಗಳಲ್ಲಿ 22 ರನ್ ನೀಡಿ 2 ವಿಕೆಟ್ ಪಡೆದರೆ, ಮ್ಯಾಟ್ ಹೆನ್ರಿ 4 ಓವರ್‌ಗಳಲ್ಲಿ 37 ರನ್ ನೀಡಿ 2 ವಿಕೆಟ್ ಕಬಳಿಸಿದರು. ಉಳಿದಂತೆ ಲಾಕಿ ಫರ್ಗ್ಯುಸನ್ ಒಂದು ವಿಕೆಟ್ ಕಬಳಿಸಿದರು.
Advertisement