ಬೆಂಗಳೂರು: ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಡೇವಿಡ್ ಜಾನ್ಸನ್ ಆತ್ಮಹತ್ಯೆ!
ಬೆಂಗಳೂರು: ಭಾರತದ ಮಾಜಿ ಕ್ರಿಕೆಟ್ ಆಟಗಾರ ಡೇವಿಡ್ ಜಾನ್ಸನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಮಧ್ಯಾಹ್ನ 12.30ರ ಸುಮಾರಿಗೆ ಘಟನೆ ನಡೆದಿದೆ.
ಕನ್ನಡಿಗ ಡೇವಿಡ್ ಜಾನ್ಸನ್(52) ಅವರು ಖಿನ್ನತೆಗೆ ಒಳಗಾಗಿ ಕಟ್ಟಡದಿಂದ ಧುಮುಕಿ ಸಾವನ್ನಪ್ಪಿದ್ದಾರೆ. ಕೊತ್ತನೂರು ಬಳಿ ಇರುವ ಅಪಾರ್ಟ್ಮೆಂಟ್ ನಿಂದ ಜಿಗಿದು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಡೇವಿಡ್ ಜಾನ್ಸನ್ ಅವರು 1996ರಲ್ಲಿ ಭಾರತ ಪರ 2 ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಇದಾಗಿತ್ತು. ಬ್ಯಾಟಿಂಗ್ ಆಲ್ರೌಂಡರ್ ಆಗಿದ್ದ ಅವರು ಟೆಸ್ ನಲ್ಲಿ 8 ರನ್ ಮತ್ತು 3 ವಿಕೆಟ್ ಕಿತ್ತಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಅವರಿಗೆ ಭಾರತ ಪರ ಕೊನೆಯ ಪಂದ್ಯವಾಗಿತ್ತು. ಇದಾದ ಬಳಿಕ ಅವರಿಗೆ ತಂಡದಲ್ಲಿ ಅವಕಾಶ ಸಿಕ್ಕಿರಲಿಲ್ಲ.
ಕುಡಿತದ ಚಟ ಹೊಂದಿದ್ದ ಡೇವಿಡ್ ಜಾನ್ಸನ್ ಕೆಲ ವರ್ಷಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಹೀಗಾಗಿ ಖಿನ್ನತೆಗೆ ಜಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೆಪಿಎಲ್ ನಲ್ಲಿ ಬೆಳಗಾವಿ ಪ್ಯಾಂಥರ್ಸ್ ಪರವಾಗಿ ಆಟವಾಡಿದ್ದರು.
1971ರ ಅಕ್ಟೋಬರ್ 16ರಂದು ಹಾಸನ ಜಿಲ್ಲೆಯ ಅರಸಿಕೆರೆಯಲ್ಲಿ ಜನಿಸಿದ ಡೇವಿಡ್ ಜಾನ್ಸನ್, 90ರ ಕಾಲಘಟ್ಟದಲ್ಲಿ ಅತಿವೇಗದ ಬೌಲಿಂಗ್ ಮಾಡಿದ್ದರು. ಆಸೀಸ್ ವಿರುದ್ಧದ ಪಂದ್ಯದಲ್ಲಿ ಗಂಟೆಗೆ 157.8 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿ ಆಸ್ಟ್ರೇಲಿಯಾದ ಮೈಕಲ್ ಸ್ಲೇಟರ್ ಅವರ ವಿಕೆಟ್ ಕಿತ್ತಿದ್ದರು.